Indian youth killed in Saudi Arabia: ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆದ ಪೊಲೀಸರು ಹಾಗೂ ದರೋಡೆಕೋರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಜಾರ್ಖಂಡ್ ಮೂಲದ 26 ವರ್ಷದ ಭಾರತೀಯ ಯುವಕ ವಿಜಯ್ ಕುಮಾರ್ ಮಹಾತೋ ಸಾವನ್ನಪ್ಪಿದ್ದಾರೆ. 

ಸೌದಿ ಅರೇಬಿಯಾದಲ್ಲಿ ಭಾರತೀಯ ಯುವಕ ಸಾವು

ರಾಂಚಿ: ಸೌದಿ ಅರೇಬಿಯಾದ ಜೆಡ್ಡಾದಲ್ಲಿ 26 ವರ್ಷದ ಭಾರತೀಯ ಯುವಕನೋರ್ವ ಪೊಲೀಸರು ಹಾಗೂ ದರೊಡೆಕೋರರ ನಡುವೆ ನಡೆದ ಗುಂಡಿನ ಚಕಮಕಿಯ ವೇಳೆ ಗುಂಟೇಟಿಗೆ ಬಲಿಯಾದ ಘಟನೆ ನಡೆದಿದೆ. ಹತ್ಯೆಯಾದ ಯುವಕನನ್ನು ಜಾರ್ಖಂಡ್‌ನ ಗಿರಿದಿಹ್ ನಿವಾಸಿ ಎಂದು ಗುರುತಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಈಗ ಜಾರ್ಖಂಡ್ ಕಾರ್ಮಿಕ ಇಲಾಖೆಯೂ ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದು, ಮೃತ ಯುವಕನ ಶವವನ್ನು ತಾಯ್ನಾಡಿಗೆ ಮರಳಿಸುವುದಕ್ಕೆ ಸಹಾಯ ಮಾಡುವಂತೆ ಮನವಿ ಮಾಡಿದೆ. ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಆಕ್ಟೋಬರ್ 16ರಂದು ಈ ಘಟನೆ ನಡೆದಿದೆ.

ಗುಂಡೇಟಿನಲ್ಲಿ ಗಾಯಗೊಂಡ ಬಗ್ಗೆ ಪತ್ನಿಗೆ ವಾಟ್ಸಾಪ್ ಸಂದೇಶ ಕಳುಹಿಸಿದ್ದ ಮಹಾತೋ

ಮೃತ ಯುವಕನನ್ನು ಗಿರಿದಿಹ್‌ನ ದುಮ್ರಿ ಬ್ಲಾಕ್‌ನ ಮಾಧ್ ಗೋಪಾಲಿ ಪಂಚಾಯತ್‌ನ ದುಧ್‌ಪಾನಿಯಾ ಗ್ರಾಮದ ವಿಜಯ್ ಕುಮಾರ್ ಮಹಾತೋ ​​ಎಂದು ಗುರುತಿಸಲಾಗಿದೆ. ಈತ ಕಳೆದ ಒಂಬತ್ತು ತಿಂಗಳಿನಿಂದ ಖಾಸಗಿ ಕಂಪನಿಯಲ್ಲಿ ಟವರ್ ಲೈನ್ ಫಿಟ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಅಕ್ಟೋಬರ್ 16 ರಂದು ತನ್ನ ಪತ್ನಿ ಬಸಂತಿ ದೇವಿಗೆ ವಾಟ್ಸಾಪ್‌ನಲ್ಲಿ ವಾಯ್ಸ್ ಮೇಸೇಜ್ ಕಳುಹಿಸಿದ್ದ ಅವರು, ಗುಂಡಿನ ಚಕಮಕಿಯಲ್ಲಿ ಸಿಲುಕಿ ಗಾಯಗೊಂದ್ದಾಗಿ ಹೇಳಿಕೊಂಡಿದ್ದರು. ವಿಚಾರ ತಿಳಿದ ಪತ್ನಿ ಬಸಂತಿ ದೇವಿ ಕೂಡಲೇ ಈ ವಿಚಾರವನ್ನು ತಮ್ಮ ಅತ್ತೆ ಮಾವಂದಿರಿಗೆ ಹೇಳಿದ್ದರು. ಆದರೆ ಅವರು ಆತನಿಗೆ ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಭಾವಿಸಿದ್ದರು ಎಂದು ವರದಿಯಾಗಿದೆ.

ಪೊಲೀಸರು ಹಾಗೂ ದರೋಡೆಕೋರರ ನಡುವೆ ನಡೆದ ಗುಂಡಿನ ಚಕಮಕಿ ವೇಳೆ ಸಾವು

ಆದರೆ ಅಕ್ಟೋಬರ್ 24 ರಂದು ಅವರು ಕೆಲಸ ಮಾಡುತ್ತಿದ್ದ ಸಂಸ್ಥೆಯ ಸಿಬ್ಬಂದಿ ವಿಜಯ್‌ಕುಮಾರ್ ಮಹಾತೋ ಅವರು ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಕುಟುಂಬಕ್ಕೆ ತಿಳಿಸಿತು ಎಂದು ಅಲಿ ಹೇಳಿದ್ದಾರೆ. ಜೆಡ್ಡಾ ಪೊಲೀಸರು ಮತ್ತು ಸುಲಿಗೆ ಮಾಡುವ ಗ್ಯಾಂಗ್ ನಡುವೆ ಈ ಚಕಮಕಿ ನಡೆದಿದೆ ಎಂದು ವರದಿಯಾಗಿದೆ. ಶುಕ್ರವಾರ ಪ್ರಕರಣದ ಬಗ್ಗೆ ನನಗೆ ತಿಳಿದು ಬಂದಿತು ಮತ್ತು ಮೃತದೇಹವನ್ನು ಮರಳಿ ತರುವುದು ಮಾತ್ರವಲ್ಲದೆ, ಬಲಿಪಶುವಿನ ಬಡ ಕುಟುಂಬ ಸದಸ್ಯರಿಗೆ ಸೌದಿ ಅರೇಬಿಯಾ ಅಧಿಕಾರಿಗಳಿಂದ ಪರಿಹಾರ ಸಿಗುವುದನ್ನು ಖಚಿತಪಡಿಸಿಕೊಳ್ಳುವಂತೆ ರಾಜ್ಯ ಕಾರ್ಮಿಕ ಇಲಾಖೆ ಮತ್ತು ಗಿರಿದಿಹ್ ಜಿಲ್ಲಾಡಳಿತಕ್ಕೆ ತಿಳಿಸಿದ್ದೇನೆ ಎಂದು ವಲಸೆ ಕಾರ್ಮಿಕರ ಸಮಸ್ಯೆಗಳ ಕುರಿತು ಕೆಲಸ ಮಾಡುವ ಸಾಮಾಜಿಕ ಕಾರ್ಯಕರ್ತ ಸಿಕಂದರ್ ಅಲಿ ಪಿಟಿಐಗೆ ತಿಳಿಸಿದ್ದಾರೆ.

ಯುವಕನ ಶವ ಭಾರತಕ್ಕೆ ತರಲು ಭಾರತೀಯ ರಾಯಭಾರ ಕಚೇರಿಯ ಸಂಪರ್ಕಿಸಿದ ಕಾರ್ಮಿಕ ಇಲಾಖೆ

ಈ ಘಟನೆಗೆ ಸಂಬಂಧಿಸಿದಂತೆ ಜಾರ್ಖಂಡ್ ಕಾರ್ಮಿಕ ಇಲಾಖೆಯು ಶುಕ್ರವಾರ ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿ 26 ವರ್ಷದ ಯುವಕನ ಮೃತದೇಹವನ್ನು ವಾಪಸ್ ತರಲು ಅನುಕೂಲ ಮಾಡಿಕೊಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಮಿಕ ಇಲಾಖೆಯ ಅಡಿಯಲ್ಲಿರುವ ವಲಸೆ ನಿಯಂತ್ರಣ ಸೆಲ್‌ನ ನಾಯಕಿ ಶಿಖಾ ಲಕ್ರಾ, ಸೌದಿ ಅರೇಬಿಯಾದಲ್ಲಿ ವಲಸೆ ಕಾರ್ಮಿಕರ ಸಾವಿನ ಬಗ್ಗೆ ಮತ್ತು ಅವರ ದೇಹವನ್ನು ಮರಳಿ ತರಲು ವಿನಂತಿಯ ಬಗ್ಗೆ ಇಲಾಖೆಗೆ ಮಾಹಿತಿ ಬಂದಿದೆ. ನಾವು ತಕ್ಷಣ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದೇವೆ ಮತ್ತು ಔಪಚಾರಿಕತೆಗಳನ್ನು ಪೂರ್ಣಗೊಳಿಸಲು ಮತ್ತು ನಂತರ ಶವವನ್ನು ಜಾರ್ಖಂಡ್‌ನಲ್ಲಿರುವ ಅವರ ಸ್ಥಳೀಯ ಸ್ಥಳಕ್ಕೆ ತರಲು ಜೆಡ್ಡಾ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಲಕ್ರಾ ಹೇಳಿದರು ಎಂದು ಪಿಟಿಐಗೆ ತಿಳಿಸಿದ್ದಾರೆ.

ಇದನ್ನೂ ಓದಿ: ನಿಶ್ಚಿತಾರ್ಥಕ್ಕೆ ಕೆಲ ದಿನಗಳಿದ್ದಾಗ ವಧುವಿನ ತಂದೆ ಜೊತೆ ಓಡಿ ಹೋದ ವರನ ತಾಯಿ

ಇದನ್ನೂ ಓದಿ: ಗುರುವಾಯೂರು ದೇಗುಲದಲ್ಲಿ ವೃಶ್ಚಿಕ ಏಕಾದಶಿಯಂದೇ ಉದಯಸ್ತಮಾನ ಪೂಜೆ ಮಾಡಿ: ಸುಪ್ರೀಂಕೋರ್ಟ್ ಸೂಚನೆ