ಬೆಂಗಳೂರು :  ರಾಜ್ಯದ ಮೂರು ಮಹಾನಗರ ಪಾಲಿಕೆಗಳು ಸೇರಿ ನೂರಕ್ಕೂ ಅಧಿಕ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸದಂತೆ ಸರ್ಕಾರಕ್ಕೆ ಹೈಕೋರ್ಟ್‌ ಮಧ್ಯಂತರ ಆದೇಶ ಮಾಡಿದೆ.

ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ನಿಗದಿಪಡಿಸಿ 2018 ಸೆ.3ರಂದು ಸರ್ಕಾರ ಹೊರಡಿಸಿದ್ದ ಅಧಿಸೂಚನೆ ವಿಚಾರದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದು 2019 ಜ. 18ರಂದು ಏಕ ಸದಸ್ಯ ಪೀಠದ ಆದೇಶ ತೀರ್ಪು ಪ್ರಶ್ನಿಸಿ ರಾಯಚೂರು ಜಿಲ್ಲೆ ಸಿಂಧನೂರಿನ ಆಲಂ ಪಾಷಾ, ಗುರಮಠಕಲ್‌ನ ಪವಿತ್ರಮ್ಮ ಸೇರಿ ವಿವಿಧ ಸ್ಥಳೀಯ ಸಂಸ್ಥೆಗಳು ಸದಸ್ಯರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಗುರುವಾರ ಈ ಮೇಲ್ಮನವಿಗಳ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್‌.ನಾರಾಯಣಸ್ವಾಮಿ ಮತ್ತು ನ್ಯಾಯಮೂರ್ತಿ ಪಿ.ಎಸ್‌.ದಿನೇಶ್‌ ಕುಮಾರ್‌ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ಮಧ್ಯಂತರ ಆದೇಶ ನೀಡಿದೆ. ಮೇಲ್ಮನವಿ ಸಂಬಂಧ ರಾಜ್ಯ ಸರ್ಕಾರಕ್ಕೆ ಇದೇ ವೇಳೆ ನೋಟಿಸ್‌ ಜಾರಿಗೊಳಿಸಿದ ನ್ಯಾಯಪೀಠ, ವಿಚಾರಣೆಯನ್ನು ಫೆ.4ಕ್ಕೆ ಮುಂದೂಡಿತು. ಇದರೊಂದಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಮತ್ತೆ ಅಡ್ಡಿಯುಂಟಾಗಿದೆ.

ರಾಜ್ಯ ಸರ್ಕಾರವು ನೂರಕ್ಕೂ ಅಧಿಕ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲು ನಿಗದಿಪಡಿಸಿ ಸೆ.3ರಂದು ಮೊದಲು ಅಧಿಸೂಚನೆ ಹೊರಡಿಸಿತ್ತು. ಸೆ.6ರಂದು ಆ ಮೊದಲ ಪಟ್ಟಿಯನ್ನು ಪರಿಷ್ಕರಿಸಿ ಎರಡನೇ ಅಧಿಸೂಚನೆ ಹೊರಡಿಸಿತ್ತು. ಪರಿಷ್ಕೃತ ಅಧಿಸೂಚನೆಯನ್ನು ಹೈಕೋರ್ಟ್‌ನಲ್ಲಿ ಕೆಲವರು ಪ್ರಶ್ನಿಸಿದ್ದರು. ಮೊದಲ ಪಟ್ಟಿಯನ್ನೇ ಮುಂದುವರಿಸುವುದಾಗಿ ಸರ್ಕಾರ ಹೈಕೋರ್ಟ್‌ಗೆ ತಿಳಿಸಿತ್ತು. ಆದರೆ, ಸೆ.3ರಂದು ಮೀಸಲು ನಿಗದಿ ಮಾಡಿ ಹೊರಡಿಸಿದ್ದ ಪಟ್ಟಿಯಲ್ಲಿ ರೊಟೇಷನ್‌ ಪಾಲಿಸಿದ್ದರೂ ಏಕ ಸದಸ್ಯ ನ್ಯಾಯಪೀಠ, ಅದರಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿತ್ತು. ಈ ಕ್ರಮ ಸರಿಯಾಗಿಲ್ಲ ಎಂದು ಮೇಲ್ಮನವಿಯಲ್ಲಿ ವಿವರಿಸಲಾಗಿತ್ತು.

ಅಲ್ಲದೆ, ಮೇಲ್ಮನವಿ ಇತ್ಯರ್ಥವಾಗುವರೆಗೂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣಾ ವೇಳಾಪಟ್ಟಿಪ್ರಕಟಿಸದಂತೆ ಸರ್ಕಾರಕ್ಕೆ ಆದೇಶ ನೀಡಬೇಕು ಎಂದು ಅರ್ಜಿದಾರರು ಮಧ್ಯಂತರ ಮನವಿ ಮಾಡಿದ್ದಾರೆ.