Karnataka Legislature Session: 10 ದಿನ ವಿಧಾನಮಂಡಲ ಚಳಿಗಾಲ ಅಧಿವೇಶನ: ಕುಂದಾನಗರಿಯಲ್ಲಿ ಸಕಲ ಸಿದ್ಧತೆ!

*ಬಿಟ್‌ಕಾಯಿನ್‌, 40% ಕಮಿಷನ್‌, ಬೆಲೆ ಏರಿಕೆ ಪ್ರಸ್ತಾಪಕ್ಕೆ ವಿಪಕ್ಷ ಸಜ್ಜು
*ಮತಾಂತರ ನಿಷೇಧ ಮಸೂದೆ ಮೂಲಕ ಪ್ರತ್ಯುತ್ತರಕ್ಕೆ ಬಿಜೆಪಿ ತಯಾರಿ
*ಆಡಳಿತ- ಪ್ರತಿಪಕ್ಷ ನಡುವೆ ಭರ್ಜರಿ ವಾಕ್ಸಮರ ನಡೆಯುವ ಸಂಭವ

Karnataka Legislature Session to begin from Monday 13th December at Suvarna Soudha Belagavi mnj

ಸುವರ್ಣಸೌಧ(ಡಿ. 13): ರಾಜಕೀಯವಾಗಿ ಆಡಳಿತಾರೂಢ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಕ್ಸಮರ ಹುಟ್ಟು ಹಾಕುವ ಸಾಧ್ಯತೆಯಿರುವ ವಿಧಾನಮಂಡಲದ ಉಭಯ ಸದನಗಳ ಚಳಿಗಾಲದ ಅಧಿವೇಶನ (Karnataka Legislature Session)ಸೋಮವಾರದಿಂದ ಕುಂದಾನಗರಿ ಬೆಳಗಾವಿಯಲ್ಲಿ (Belagavi) ಶುರುವಾಗಲಿದೆ. ಬಿಟ್‌ ಕಾಯಿನ್‌, 40 ಪರ್ಸೆಂಟ್‌ ಕಮಿಷನ್‌, ಅಗತ್ಯ ವಸ್ತುಗಳ ಬೆಲೆ ಏರಿಕೆ, ಮಳೆಹಾನಿ ಪರಿಹಾರ ಕಲ್ಪಿಸುವಲ್ಲಿನ ವೈಫಲ್ಯದಂತಹ ವಿಚಾರ ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಮುಗಿಬೀಳಲು ವಿಪಕ್ಷಗಳು ಸಜ್ಜಾಗಿದ್ದರೆ (Opposition Parties), ಇದಕ್ಕೆ ಪ್ರತ್ಯುತ್ತರ ನೀಡಲು ಎಂಬಂತೆ ಆಡಳಿತಾರೂಢ ಬಿಜೆಪಿಯು (BJP) ಮತಾಂತರ ನಿಷೇಧ ವಿಧೇಯಕ ಮಂಡನೆ ಮುಂದಿಟ್ಟುಕೊಂಡು ಸರ್ಕಾರಕ್ಕೆ ಬಿಸಿ ತುಪ್ಪವಾಗಬಲ್ಲ ಗಂಭೀರ ಚರ್ಚೆಗಳ ವಿರುದ್ಧ ರಣತಂತ್ರ ರೂಪಿಸಿದೆ.

ಉತ್ತರ ಕರ್ನಾಟಕದವರೇ ಆಗಿರುವ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತಿದ್ದು, ಸಹಜವಾಗಿಯೇ ಈ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದು ಪರಿಹಾರ ಸಿಗಬಹುದೇನೋ ಎಂಬ ಹಲವು ವರ್ಷಗಳ ನಿರೀಕ್ಷೆ ಈ ವರ್ಷವಾದರೂ ಸಾಕಾರಗೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕು

ಅಧಿವೇಶನ ವಿಶೇಷತೆ

- ನಿತ್ಯ 5000 ಜನರಿಗೆ ಉಪಾಹಾರ, ಊಟ

-400 ಮಂದಿ ಕೇಟರಿಂಗ್‌ ಸಿಬ್ಬಂದಿ ಕೆಲಸ

-4000 ಪೊಲೀಸರು ಭದ್ರತೆಗೆ ನಿಯೋಜನೆ

-ಸುವರ್ಣಸೌಧಕ್ಕೆ ಹೂವುಗಳಿಂದ ಅಲಂಕಾರ

-ಕಲಾಪದಲ್ಲಿ ಕಪ್ಪು ಬಣ್ಣದ ಮಾಸ್ಕ್‌ ನಿಷೇಧ

-7 ಮಸೂದೆ ಮಂಡನೆ ಮಾಡುವ ಸಾಧ್ಯತೆ

ಬಿಜೆಪಿ ರಣತಂತ್ರ:

ಯಲಹಂಕ ಬಿಜೆಪಿ ಶಾಸಕ ಎಸ್‌.ಆರ್‌. ವಿಶ್ವನಾಥ್‌ ವಿರುದ್ಧ ಕಾಂಗ್ರೆಸ್‌ ಮುಖಂಡ ಗೋಪಾಲಕೃಷ್ಣ ಹತ್ಯೆ ಸಂಚು ರೂಪಿಸಿದ್ದರು ಎಂಬುದನ್ನು ಪ್ರಸ್ತಾಪಿಸಿ ಕಾಂಗ್ರೆಸ್‌ ವಿರುದ್ಧ ಪ್ರತಿದಾಳಿ ನಡೆಸಲೂ ಬಿಜೆಪಿ ರಣತಂತ್ರ ಹೆಣೆದಿದೆ. ತನ್ಮೂಲಕ 2 ವರ್ಷಗಳ ಬಳಿಕ ಕುಂದಾನಗರಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಚರ್ಚೆಗಳು ತೀವ್ರ ಬಿಸಿಯೇರುವ ಸಾಧ್ಯತೆಯಿದೆ.

Karnataka Assembly Session : ಸುವರ್ಣಸೌಧಕ್ಕೆ ಅಂಜಲಿ ನಿಂಬಾಳ್ಕರ್‌ ಪಾದಯಾತ್ರೆ

ಮೊದಲ ದಿನ ಗಣ್ಯರ ನಿಧನಕ್ಕೆ ಸಂತಾಪ ನಿರ್ಣಯ ಮಂಡನೆಯಾಗಲಿದ್ದು, ಎರಡನೇ ದಿನ ಮುಖ್ಯಮಂತ್ರಿಗಳು ಗೈರಾಗಲಿದ್ದಾರೆ. ಹೀಗಾಗಿ ಬುಧವಾರದಿಂದ ಅಧಿವೇಶನ ಕಾವೇರಲಿದೆ. ಒಮಿಕ್ರೋನ್‌ ಭೀತಿಯ ನಡುವೆ 10 ದಿನಗಳ (ಡಿ.13ರಿಂದ 24ರವರೆಗೆ) ಕಲಾಪ ನಿಗದಿಯಾಗಿದೆ.

ಮತಾಂತರ ವಿಧೇಯಕ ‘ಸಮರ’ ಸಾಧ್ಯತೆ:

ಮುಖ್ಯವಾಗಿ ರಾಜ್ಯ ಸರ್ಕಾರವು ಮತಾಂತರದ ವಿರುದ್ಧ ಕಠಿಣ ಕಾಯಿದೆ ರೂಪಿಸಲು ಮುಂದಾಗಿದೆ. ಬಲವಂತ, ಆಮಿಷ ಅಥವಾ ವಂಚಿಸಿ ಮತಾಂತರ ಮಾಡುವವರಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವುದು, ಮತಾಂತರವಾಗುವ ವ್ಯಕ್ತಿ ಮೊದಲೇ ಸರ್ಕಾರಕ್ಕೆ ತಿಳಿಸಬೇಕು ಎಂಬುದು ಸೇರಿದಂತೆ ಹಲವು ಕಠಿಣ ಅಂಶಗಳುಳ್ಳ ಮತಾಂತರ ನಿಷೇಧ ಕಾಯಿದೆ ಜಾರಿಗೆ ಕರಡು ಸಿದ್ಧಪಡಿಸಿದೆ. ಈ ವಿಧೇಯಕವು ಪ್ರಸ್ತುತ ಅಧಿವೇಶನದಲ್ಲೇ ಮಂಡನೆಯಾಗಲಿದೆ.

Karnataka Assembly Session ಒಮಿಕ್ರೋನ್‌ ಹೆಚ್ಚಾದರೆ ಅಧಿವೇಶನ ಮೊಟಕು?

ಮತಾಂತರ ನಿಷೇಧ ವಿಧೇಯಕ ಮಂಡಿಸಿದರೆ ಸಂಪೂರ್ಣ ವಿರೋಧ ವ್ಯಕ್ತಪಡಿಸುವುದಾಗಿ ಈಗಾಗಲೇ ಕಾಂಗ್ರೆಸ್‌ ಪಕ್ಷವೂ ಸ್ಪಷ್ಟಪಡಿಸಿದೆ. ಹೀಗಾಗಿ ಮತಾಂತರ ನಿಷೇಧ ಕಾಯಿದೆ ಸಂಬಂಧ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ತೀವ್ರ ಜಟಾಪಟಿ ನಡೆಯುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ಬಿಟ್‌ಕಾಯಿನ್‌, ಪರ್ಸಂಟೇಜ್‌ ಜಟಾಪಟಿ?:

ಇನ್ನು ಬಿಟ್‌ಕಾಯಿನ್‌ ದಂಧೆ, ಗುತ್ತಿಗೆದಾರರಿಂದ ಪರ್ಸಂಟೇಜ್‌ ಕಮೀಷನ್‌ ಸೇರಿದಂತೆ ವೈಫಲ್ಯಗಳ ಬಗ್ಗೆ ಕಾಂಗ್ರೆಸ್‌ ದೊಡ್ಡ ಪಟ್ಟಿಯನ್ನೇ ಸಿದ್ಧಪಡಿಸಿದೆ. ರಾಜ್ಯ ಪೊಲೀಸ್‌ ಇಲಾಖೆ ಬಿಟ್‌ಕಾಯಿನ್‌ ಜಪ್ತಿ ಮಾಡಿರುವುದಾಗಿ ಕೋರ್ಟ್‌ಗೆ ಹೇಳಿತ್ತು. ಈ ಬಿಟ್‌ಕಾಯಿನ್‌ ಎಲ್ಲಿ ಹೋಯಿತು? ಹ್ಯಾಕರ್‌ ಶ್ರೀಕಿ ಮೂಲಕ ಇ-ಪ್ರೊಕ್ಯೂರ್‌ಮೆಂಟ್‌ ಟೆಂಡರ್‌ಗಳಲ್ಲೂ ಭಾರಿ ಅಕ್ರಮ ನಡೆಸಲಾಗಿದೆ ಎಂದು ಸರ್ಕಾರದ ಮೇಲೆ ಆರೋಪಗಳ ಸುರಿಮಳೆ ಸುರಿಸಲಿದೆ. ಇದಕ್ಕೆ ತಿರುಗೇಟು ನೀಡಲು ಬಿಜೆಪಿಯೂ ಸಿದ್ಧವಾಗಿದ್ದು, ಬಿಟ್‌ಕಾಯಿನ್‌ ಚರ್ಚೆ ಕಾವೇರುವುದು ಬಹುತೇಕ ನಿಶ್ಚಿತವಾಗಿದೆ.

ಮೊಟ್ಟೆ- ನಿಲುವಿಗೆ ಒತ್ತಾಯ?:

ಅಗತ್ಯ ವಸ್ತುಗಳ ಬೆಲೆ ಏರಿಕೆ, ಅನಿರೀಕ್ಷಿತ ಅತಿವೃಷ್ಟಿಯಿಂದಾಗಿ ಬೆಳೆ, ಆಸ್ತಿ ಹಾನಿಗೆ ಸರ್ಕಾರ ಸೂಕ್ತ ರೀತಿಯಲ್ಲಿ ಪರಿಹಾರ ಕಲ್ಪಿಸದಿರುವುದು, ಕೊರೋನಾದಿಂದ ಮೃತಪಟ್ಟವರಿಗೆ ಪರಿಹಾರ ನೀಡದಿರುವುದು. ರಾಷ್ಟ್ರೀಯ ಶಿಕ್ಷಣ ನೀತಿ, ಆರಗ ಜ್ಞಾನೇಂದ್ರ ಪೊಲೀಸರ ಬಗ್ಗೆ ನೀಡಿರುವ ಹೇಳಿಕೆ ಮತ್ತಿತರ ವಿಚಾರ ಮುಂದಿಟ್ಟು ಸರ್ಕಾರಕ್ಕೆ ಚಾಟಿ ಬೀಸಲಿದೆ. ರಾಜ್ಯದಲ್ಲಿ ತೀವ್ರ ಚರ್ಚಿತ ವಿಷಯವಾಗಿರುವ ಶಾಲಾ ಮಕ್ಕಳಿಗೆ ಬಿಸಿಯೂಟದ ಜತೆ ಮೊಟ್ಟೆನೀಡುವ ವಿಚಾರವೂ ಕಾವೇರುವ ಸಾಧ್ಯತೆ ಇದೆ. ಮೊಟ್ಟೆನೀಡುವ ಬಗ್ಗೆ ಸರ್ಕಾರದ ಅಂತಿಮ ನಿಲುವನ್ನು ಸ್ಪಷ್ಟಪಡಿಸುವಂತೆ ಪ್ರತಿಪಕ್ಷಗಳು ಒತ್ತಾಯಿಸಿದರೆ, ಸರ್ಕಾರ ಒತ್ತಡಕ್ಕೆ ಸಿಲುಕುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ಅಧಿವೇಶನಕ್ಕೆ ಹಲವು ಪ್ರತಿಭಟನೆಗಳ ಬಿಸಿ

ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೆ ಮೊದಲ ದಿನವೇ ಪ್ರತಿಭಟನೆ ಬಿಸಿ ತಟ್ಟಲಿದೆ. ಈಗಾಗಲೇ ನಾನಾ ಸಂಘಟನೆಗಳ ಕಾರ್ಯಕರ್ತರ ದಂಡು ಬೆಳಗಾವಿಯತ್ತ ಹರಿದುಬಂದಿದ್ದು, ಪ್ರತಿಭಟನೆ ನಡೆಸಲು ಅನುಮತಿ ಕೋರಿ 66 ಸಂಘಟನೆಗಳು ಅರ್ಜಿ ಸಲ್ಲಿಸಿವೆ.

Latest Videos
Follow Us:
Download App:
  • android
  • ios