Asianet Suvarna News Asianet Suvarna News

Karnataka Assembly Session : ಸುವರ್ಣಸೌಧಕ್ಕೆ ಅಂಜಲಿ ನಿಂಬಾಳ್ಕರ್‌ ಪಾದಯಾತ್ರೆ

  • ಖಾನಾಪುರ ವಿಧಾನಸಭೆ ಕ್ಷೇತ್ರದ ಅಭಿವೃದ್ಧಿ, ಅತಿ ವೃಷ್ಟಿಯಿಂದ ಬೆಳೆ, ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಒತ್ತಾಯ
  • ಶಾಸಕಿ ಡಾ.ಅಂಜಲಿ ನಿಂಬಾಳ್ಕರ್‌ ಭಾನುವಾರ 40 ಕಿ.ಮೀ.ಗಳ ಸಂಘರ್ಷ ಪಾದಯಾತ್ರೆ ಆರಂಭ
Anjali Nimblkar Starts Suvarna Soudha Chalo for Anjali Nimbalkar snr
Author
Bengaluru, First Published Dec 13, 2021, 6:35 AM IST
  • Facebook
  • Twitter
  • Whatsapp

ಬೆಳಗಾವಿ (ಡಿ.13):  ಖಾನಾಪುರ ವಿಧಾನಸಭೆ ಕ್ಷೇತ್ರದ ಅಭಿವೃದ್ಧಿ, ಅತಿವೃಷ್ಟಿಯಿಂದ ಬೆಳೆ, ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್‌ (Anjali Nimbalkar) ಭಾನುವಾರ 40 ಕಿ.ಮೀ.ಗಳ ಸಂಘರ್ಷ ಪಾದಯಾತ್ರೆ ಆರಂಭಿಸಿದ್ದು, ಸೋಮವಾರ ಸುವರ್ಣ ವಿಧಾನಸೌಧಕ್ಕೆ (Suvarna Soudha) ಆಗಮಿಸುವರು.  ಭಾನುವಾರ ಖಾನಾಪುರದ ಶಿವಸ್ಮಾರಕ ಚರ್ಚ್ ಪಾದಯಾತ್ರೆ ಆರಂಭಿಸಿರುವ ಅಂಜಲಿ ನಿಂಬಾಳ್ಕರ್‌ (Anjali nimblkar) ಸಂಜೆ ವೇಳೆಗೆ ಯಳ್ಳೂರು ಗ್ರಾಮ ತಲುಪಿದ್ದು ಅಲ್ಲೇ ವಾಸ್ತವ್ಯ ಹೂಡಿದ್ದಾರೆ. ಸೋಮವಾರ ಬೆಳಗ್ಗೆ ಅಲ್ಲಿಂದ ಪಾದಯಾತ್ರೆ ಆರಂಭಿಸಿ ಸುವರ್ಣ ವಿಧಾನಸೌಧ (Suvarna Soudha) ತಲುಪಲಿದ್ದಾರೆ. ಪಾದಯಾತ್ರೆ ತಂಡದಲ್ಲಿ ಕಾಂಗ್ರೆಸ್‌ (Congress) ಕಾರ್ಯಕರ್ತರು, ಬೆಂಬಲಿಗರು, ವಿವಿಧ ಸಂಘಟನೆಗಳು, ವಿವಿಧ ಮಠಾಧಿಪತಿಗಳು ಇದ್ದಾರೆ.

ಇಂದು ಸಿದ್ದರಾಮಯ್ಯ ಭಾಗಿ : ಅಂಜಲಿ ನಿಂಬಾಳ್ಕರ (Anjali Nimbalkar ) ಪಾದಯಾತ್ರೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಮತ್ತು ಕೆಪಿಸಿಸಿ (KPCC) ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸೇರಿದಂತೆ ಹಲವು ಕಾಂಗ್ರೆಸ್‌ ನಾಯಕರು ಸೋಮವಾರ ಬೆಳಗ್ಗೆ ಪಾಲ್ಗೊಳ್ಳಲಿದ್ದಾರೆ. ಪಾದಯಾತ್ರೆ ತಂಡವು ಬೆಳಗಾವಿ ನಗರದ ಹೊರವಲಯ ತಲುಪುತ್ತಿದ್ದಂತೆ ಅವರು ತಂಡವನ್ನು ಕೂಡಿಕೊಳ್ಳಲಿದ್ದಾರೆ.

10 ಅಧಿವೇಶನ ನಡೆದರೂ ‘ಉತ್ತರ’ವಿಲ್ಲ :  ಬೆಳಗಾವಿಯಲ್ಲಿ (Belagavi) ಈವರೆಗೂ ಬರೋಬ್ಬರಿ 10 ಅಧಿವೇಶನಗಳು ನಡೆದಿವೆ. ಇವುಗಳಿಂದ ಉತ್ತರ ಕರ್ನಾಟಕಕ್ಕೆ (Karnataka) ಏನಾದರೂ ಅನುಕೂಲವಾಗಿದೆಯೇ? ಈ ಭಾಗದ ಸಮಸ್ಯೆಗಳಿಗೆ ಶಾಶ್ವತ ಪರಿಹಾರವೇನಾದರೂ ಸಿಕ್ಕಿದೆಯೇ? ಡಿ.13ರಿಂದ ಮತ್ತೆ ಅಧಿವೇಶನ ಶುರುವಾಗುತ್ತಿರುವ ಹಿನ್ನೆಲೆಯಲ್ಲಿ ಇಂತಹದೊಂದು ಪ್ರಶ್ನೆ ಧುತ್ತೆಂದು ಉದ್ಬವವಾಗಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ.

ಸುವರ್ಣ ವಿಧಾನಸೌಧ (Suvarna Soudha) ಉದ್ಘಾಟನೆಯಾಗಿದ್ದ 2012ರಲ್ಲಾದರೂ ಅದಕ್ಕಿಂತ ಮುನ್ನವೇ ಅಂದರೆ 2006ರಿಂದ ಅಧಿವೇಶನ ನಡೆಯುತ್ತಿದೆ. ಆಗಿನಿಂದ ಕೆಲವೊಂದು ಸಲ ನಡೆದಿದ್ದರೂ ಈವರೆಗೆ ಬರೋಬ್ಬರಿ 10 ಅಧಿವೇಶನ ನಡೆದಿವೆ. ಇದೀಗ ನಡೆಯುತ್ತಿರುವುದು 11ನೆಯ ಅಧಿವೇಶನ.

ಪ್ರತಿಸಲ ಅಧಿವೇಶನ ಬಂದಾಗಲೂ ಈ ಭಾಗದ ಜನತೆಯಲ್ಲಿ ಹತ್ತಾರು ನಿರೀಕ್ಷೆ ಹುಟ್ಟಿಕೊಳ್ಳುತ್ತೇವೆ. ಇಡೀ ಮುಖ್ಯಮಂತ್ರಿ, ಮಂತ್ರಿಗಳು, ಉನ್ನತಾಧಿಕಾರಿಗಳು ಹೀಗೆ ಸರ್ಕಾರವೇ ಇತ್ತ ಬರುತ್ತದೆ. ನಮ್ಮ ಸಮಸ್ಯೆಗಳಿಗೆ ಪರಿಹಾರ ಕಾಣಬಹುದು ಎಂದು ಆಸೆಗಣ್ಣಿನಿಂದ ನೋಡುತ್ತಿರುತ್ತಾರೆ. ಆದರೆ ಪ್ರತಿಸಲವೂ ಬರೀ ಗೋಜು, ಗದ್ದಲ, ಬಹಿಷ್ಕಾರಗಳಲ್ಲೇ ಅಧಿವೇಶನ ಮುಕ್ತಾಯವಾಗುತ್ತದೆ. 10 ಅಧಿವೇಶನದಲ್ಲೂ ಹೇಳಿ ಕೊಳ್ಳುವಂತಹ ಸಮಸ್ಯೆಗಳ ಸುದೀರ್ಘ ಚರ್ಚೆಗಳು ನಡೆದಿಲ್ಲ. ಅವುಗಳಿಗೆ ಪರಿಹಾರವೂ ಸಿಕ್ಕಿಲ್ಲ. ಹೀಗಾಗಿ ಬೆಳಗಾವಿ ಅಧಿವೇಶನವೆಂದರೆ 10 ದಿನಗಳ ಕಾಲದ ಹಬ್ಬಕ್ಕೆ ಸೀಮಿತವಾದಂತಾಗಿದೆ.

ಏನಾಗಬೇಕಿತ್ತು? : ಕಬ್ಬು ಬೆಳೆಗಾರರ (farmers) ಬಾಕಿ ಹಣ ಪಾವತಿಯ ಸಮಸ್ಯೆ ಈಗಿನದ್ದಲ್ಲ. ದಶಕಗಳಿಂದಲೇ ಇದೆ. ಪ್ರತಿಸಲ ಅಧಿವೇಶನದಲ್ಲಿ ಬೆಳೆಗಾರರಿಂದ ಪ್ರತಿಭಟನೆ ಮಾಮೂಲು. ಪ್ರತಿಭಟನೆಯಲ್ಲೇ ರೈತನೊಬ್ಬ ಬಲಿಯಾಗಿದ್ದುಂಟು. ಆದರೂ ಇವರ ಸಮಸ್ಯೆಗೆ ಮಾತ್ರಪರಿಹಾರ ಕಂಡುಕೊಳ್ಳಲು ಅಧಿವೇಶನದಿಂದ ಸಾಧ್ಯವಾಗಿಲ್ಲ.

ಇನ್ನೂ ಕೃಷ್ಣಾ ನದಿಯ ಪ್ರವಾಹದಿಂದ (Flood) ಪ್ರತಿವರ್ಷ ಈ ಭಾಗದ ಜಿಲ್ಲೆಗಳು ಸಮಸ್ಯೆ ಎದುರಿಸುತ್ತಿವೆ. ಆಲಮಟ್ಟಿಜಲಾಶಯದ ಎತ್ತರವನ್ನು ಎತ್ತರಿಸಬೇಕಿದೆ. ಈ ಬಗ್ಗೆ ಗಟ್ಟಿನಿರ್ಧಾರ ಕೈಗೊಳ್ಳಲು ಸರ್ಕಾರಕ್ಕೆ ಆಗುತ್ತಿಲ್ಲ.

ಶಕ್ತಿಸೌಧವಾಗಲಿಲ್ಲ: ಸುವರ್ಣ ವಿಧಾನಸೌಧಕ್ಕೆ ಈ ಭಾಗದ ಅಭಿವೃದ್ಧಿಗೆ ಪೂರಕವಾದ ರಾಜ್ಯ ಮಟ್ಟದ ಕಚೇರಿ ಸ್ಥಳಾಂತರಿಸಬೇಕು. ಈ ಮೂಲಕ ಶಕ್ತಿಸೌಧ ಮಾಡಬೇಕೆನ್ನುವ ಬೇಡಿಕೆ ಬಹುವರ್ಷದ್ದು. 2019ರಲ್ಲಿ ಕಚೇರಿ ಸ್ಥಳಾಂತರಕ್ಕೆ ಆದೇಶಿಸಿ ಮತ್ತೆ ವಾಪಸ್‌ ಪಡೆದಿರುವುದುಂಟು. ಉತ್ತರಕ್ಕೆ ಬರಲು ಒಲ್ಲದ ಮನಸಿನ ಅಧಿಕಾರಿಗಳ ಕುತಂತ್ರದಿಂದಾಗಿ ಈ ಆದೇಶ ರದ್ದಾಯಿತು ಎಂಬ ಆರೋಪ ಕೆಲ ಜನಪ್ರತಿನಿಧಿಗಳದ್ದು.

ಕೆಲ ಸ್ಥಳೀಯ ಹಾಗೂ ಪ್ರಾದೇಶಿಕ ಕಚೇರಿಗಳ ಸ್ಥಳಾಂತರಕ್ಕೆ ಸರ್ಕಾರ ನಿರ್ಧರಿಸಿತ್ತಾದರೂ ಹೋರಾಟಗಾರರು ಆಕ್ಷೇಪಿಸಿ ರಾಜ್ಯಮಟ್ಟದ ಕಚೇರಿಗಳೇ ಸ್ಥಳಾಂತರವಾಗಲಿ ಎಂಬ ಬೇಡಿಕೆ ಸಲ್ಲಿಸಿದರು. ಹೀಗಾಗಿ ಸದ್ಯ ಬರೀ ಮಾಹಿತಿ ಹಕ್ಕು ಆಯೋಗದ ಕಚೇರಿ ಮಾತ್ರ ಇಲ್ಲಿ ಕಾರ್ಯನಿರ್ವಹಿಸುತ್ತಿದೆ. ಉಳಿದ ಕಚೇರಿಗಳ ಸ್ಥಳಾಂತರಕ್ಕೆ ಹೋರಾಟಗಾರರು ಹೈಕೋರ್ಟ್‌ ಮೊರೆ ಹೋಗಿರುವುದುಂಟು.

ಈ ಸಲ ಹೇಗೆ?:  ಈ ಸಲವಂತೂ ಮಳೆಯಿಂದ (Rain) ವಿಪರೀತ ಎನ್ನುವಷ್ಟುಬೆಳೆಹಾನಿಯಾಗಿದೆ. ಪರಿಹಾರ ಸಿಕ್ಕಿಲ್ಲ. ಜತೆಗೆ ನೆನೆಗುದಿಗೆ ಬಿದ್ದಿರುವ ನೀರಾವರಿ ಸೇರಿದಂತೆ ವಿವಿಧ ಯೋಜನೆಗಳ ಕಾರ್ಯಗತಗೊಳಿಸಲು ಕ್ರಮ ಕೈಗೊಳ್ಳಬೇಕಿದೆ.

ಇನ್ನು ಮಹದಾಯಿ ವಿಷಯವಾಗಿ ನ್ಯಾಯಾಧಿಕರಣ ತೀರ್ಪು ನೀಡಿ ಆಗಲೇ ಮೂರು ವರ್ಷವಾಗಿದೆ. ಆದರೆ ಈವರೆಗೂ ಕಾಮಗಾರಿ ಶುರುವಾಗಿಲ್ಲ. ಹಾಗಂತ ರಾಜ್ಯ ಸರ್ಕಾರ ಈ ವಿಷಯವಾಗಿ ಏನು ಮಾಡಿಯೇ ಇಲ್ಲವಂತೇನೂ ಅಲ್ಲ. 1677 ಕೋಟಿ ರೂ. ಮೀಸಲಿಟ್ಟಿದೆ. ಆದರೆ ಸ್ಪಷ್ಟೀಕರಣಕ್ಕಾಗಿ ಕೋರ್ಟ್‌ ಮೊರೆ ಹೋಗಿದೆ. ಈ ಬಗ್ಗೆ ಸ್ಪಷ್ಟನೆ ಹಾಗೂ ಕಾನೂನಾತ್ಮಕ ತೊಡಕನ್ನು ಶೀಘ್ರ ಬಗೆಹರಿಸುವ ಕೆಲಸ ಸರ್ಕಾರ ಮಾಡಬೇಕಿದೆ. ಅದು ಈ ಅಧಿವೇಶನದಲ್ಲಿ ಚರ್ಚೆಯಾಗಬೇಕಿನ್ನುವುದು ಜನತೆ ಆಶಯ.

ಇವಿಷ್ಟನ್ನು ಬಿಟ್ಟು ಈ ಭಾಗದವರೇ ಮುಖ್ಯ ಮಂತ್ರಿಯಾಗಿರುವ ಕಾರಣ ಹತ್ತಾರು ನಿರೀಕ್ಷೆಗಳಿರುವುದುಂಟು. ಆದಕಾರಣ ಈ ಅಧಿವೇಶನ ಪ್ರತಿಸಲದಂತೆ ಬರೀ ಕಾಟಾಚಾರಕ್ಕೆಂಬಂತೆ ಆಗದೇ ಈ ಭಾಗದ ನೈಜ ಸಮಸ್ಯೆಗಳತ್ತ ಬೆಳಕು ಚೆಲ್ಲಿ ಪರಿಹಾರ ಕಂಡುಕೊಳ್ಳಬೇಕಿದೆ. ಈ ಕೆಲಸವಾಗುವುದೇ ಎಂಬುದನ್ನು ಕಾಯ್ದು ನೋಡಬೇಕಷ್ಟೇ..!

ಆಗಿರುವ ಲಾಭ 2

ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣದ ಹಿಂದೆ ಎಂಇಎಸ್‌ ಪುಂಡಾಟಿಕೆಗೆ ಕಡಿವಾಣ ಹಾಕುವುದೇ ಮುಖ್ಯ ಉದ್ದೇಶವಾಗಿತ್ತು. ಅದು ಈಡೇರಿದೆ ಅಲ್ಲದೇ, ಎಂಇಎಸ್‌ ಪುಂಡರಿಗೆ ಸ್ಪಷ್ಟಸಂದೇಶವನ್ನೂ ಸಾರಿತು. ಬೆಳಗಾವಿಯೂ ತಕ್ಕಮಟ್ಟಿಗೆ ಅಭಿವೃದ್ಧಿಯೂ ಆಯಿತು. ಆದರೆ ಇಡೀ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಕನಸು ಮಾತ್ರ ಸಾಕಾರವಾಗಿಲ್ಲ. ಅದು ಈ ಅಧಿವೇಶನದಿಂದ ಆಗಲಿ ಎಂಬ ಬೇಡಿಕೆ ಜನತೆಯದ್ದು.

ಬೆಳಗಾವಿಯ ಅಧಿವೇಶನ ಬಗ್ಗೆ ಬಹಳಷ್ಟುನಿರೀಕ್ಷೆಗಳಿವೆ. ಪ್ರಾದೇಶಿಕ ಅಸಮಾನತೆ ನಿವಾರಣೆಯಾಗಬೇಕೆಂದರೆ ಸರ್ಕಾರ ಕಚೇರಿಗಳ ಸ್ಥಳಾಂತರ ಸೇರಿದಂತೆ ವಿವಿಧ ವಿಷಯಗಳಲ್ಲಿ ಗಟ್ಟಿನಿರ್ಧಾರ ಕೈಗೊಳ್ಳಬೇಕು ಬೊಮ್ಮಾಯಿ ಉತ್ತರ ಕರ್ನಾಟಕ ಅಭಿವೃದ್ಧಿಗೆ ಪೂರಕವಾಗುವಂತೆ ಈ ಅಧಿವೇಶನದಲ್ಲಿ ಚರ್ಚೆಯಾಗಿ ಪರಿಹಾರ ಕಂಡುಕೊಳ್ಳಬೇಕಿದೆ

- ಯಾಸೀನ್‌ ಜವಳಿ, ಹೋರಾಟಗಾರ

Follow Us:
Download App:
  • android
  • ios