Asianet Suvarna News Asianet Suvarna News

ಕೃಷಿ ಜಮೀನಲ್ಲಿ ಮನೆ ಕಟ್ಟಲು ಏಳೇ ದಿನಗಳಲ್ಲಿ ಅನುಮತಿ: ಭೂಕಂದಾಯ ತಿದ್ದುಪಡಿ ಮಸೂದೆ ಪಾಸ್‌

ಭೂ ಪರಿವರ್ತನೆಯನ್ನು ಇನ್ನಷ್ಟುಸರಳಗೊಳಿಸುವ ಉದ್ದೇಶದಿಂದ ತರಲಾಗಿರುವ ಕರ್ನಾಟಕ ಭೂ ಕಂದಾಯ ಕಾಯ್ದೆ ತಿದ್ದುಪಡಿ ಮಸೂದೆ ಹಾಗೂ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮಸೂದೆಯನ್ನು ಅಂಗೀಕರಿಸಲಾಗಿದೆ.

Karnataka Land Revenue Second Amendment Bill 2022 Passed In Belagavi Winter session gvd
Author
First Published Dec 23, 2022, 6:23 AM IST

ವಿಧಾನಸಭೆ (ಡಿ.23): ಭೂ ಪರಿವರ್ತನೆಯನ್ನು ಇನ್ನಷ್ಟುಸರಳಗೊಳಿಸುವ ಉದ್ದೇಶದಿಂದ ತರಲಾಗಿರುವ ಕರ್ನಾಟಕ ಭೂ ಕಂದಾಯ ಕಾಯ್ದೆ ತಿದ್ದುಪಡಿ ಮಸೂದೆ ಹಾಗೂ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮಸೂದೆಯನ್ನು ಅಂಗೀಕರಿಸಲಾಗಿದ್ದು, 2021ನೇ ಸಾಲಿನ ಬಂಧಿಗಳ ಗುರುತಿಸುವಿಕೆ ತಿದ್ದುಪಡಿ ವಿಧೇಯವನ್ನು ಹಿಂಪಡೆಯಲಾಗಿದೆ. ಗುರುವಾರ ಸದನದಲ್ಲಿ ಕಂದಾಯ ಸಚಿವ ಆರ್‌.ಅಶೋಕ್‌ ಅವರು 2022ನೇ ಸಾಲಿನ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ ಪಡೆದುಕೊಂಡರು.

ಈ ವಿಧೇಯಕವು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಸೆಕ್ಷನ್‌ 95 ಮತ್ತು 96ನ್ನು ಮತ್ತಷ್ಟುತಿದ್ದುಪಡಿ ತರುವ ಉದ್ದೇಶವನ್ನು ಹೊಂದಿದೆ. ಕೃಷಿ ಭೂಮಿಯಲ್ಲಿ ಸ್ವಂತಕ್ಕೆ ಮನೆ, ಕೃಷಿ ಪರಿಕರಗಳನ್ನು ಸಂಗ್ರಹಿಸಿಡಲು ಕಟ್ಟಡ, ತೋಟದ ಮನೆ ನಿರ್ಮಿಸಿಕೊಳ್ಳಲು ರೈತರು ಅರ್ಜಿ ಸಲ್ಲಿಸಿದ ಏಳು ದಿನಗಳ ಒಳಗೆ ಮಂಜೂರಾತಿ ಆದೇಶ ಹೊರಡಿಸಲು ಜಿಲ್ಲಾಧಿಕಾರಿಗಳಿಗೆ ಗಡುವು ವಿಧಿಸುವ ಉದ್ದೇಶದ ಹಿನ್ನೆಲೆಯಲ್ಲಿ ಮಸೂದೆಗೆ ತಿದ್ದುಪಡಿ ತರಲಾಗಿದೆ.

ಹೊಲದಲ್ಲಿ ಮನೆ ನಿರ್ಮಾಣಕ್ಕೆ ಭೂಪರಿವರ್ತನೆ: ಶೀಘ್ರ ಕಾಯ್ದೆ

ಮಾಸ್ಟರ್‌ ಪ್ಲಾನ್‌ ಅಥವಾ ನಗರ ಯೋಜನಾ ಪ್ರಾಧಿಕಾರದ ಮಂಜೂರಾತಿ ಅನ್ವಯ ಕೃಷಿ ಭೂಮಿ ಅಥವಾ ಅದರ ಭಾಗವನ್ನು ಯಾವುದಾದರೂ ಇತರೆ ಉದ್ದೇಶಕ್ಕೆ ಬಳಸಲು ಇಚ್ಛಿಸುವವರು ನಿಗದಿಪಡಿಸಿದ ದಂಡ ಪಾವತಿಸಿ ಪ್ರಮಾಣ ಪತ್ರ ಸಹಿತ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬೇಕು. ಹೀಗೆ ಸಲ್ಲಿಕೆಯಾದ ಅರ್ಜಿಗಳಿಗೆ ಏಳು ದಿನಗಳಲ್ಲಿ ಜಿಲ್ಲಾಧಿಕಾರಿ ಮಂಜೂರಾತಿ ಆದೇಶ ಹೊರಡಿಸಬೇಕು. 15 ದಿನಗಳು ಕಳೆದರೂ ಜಿಲ್ಲಾಧಿಕಾರಿ ಅರ್ಜಿಗಳ ವಿಲೇವಾರಿ ಮಾಡದಿದ್ದರೆ ಕೃಷಿಯೇತರ ಭೂಮಿಯಾಗಿ ಪರಿವರ್ತನೆ ಆಗಿದೆ ಎಂದು ಪರಿಭಾವಿಸಿಕೊಳ್ಳಬಹುದು ಎಂದು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.

ಗಡಿ ಪ್ರದೇಶ ಅಭಿವೃದ್ಧಿ ಮಸೂದೆ ಪಾಸ್‌: ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್‌ ಕುಮಾರ್‌ ಅವರ ಪರವಾಗಿ ಕಾನೂನು ಸಚಿವ ಮಾಧುಸ್ವಾಮಿ ಅವರು ಮಂಡಿಸಿ ಅನುಮೋದನೆ ಪಡೆದುಕೊಂಡರು. ಗಡಿ ಭಾಗದಲ್ಲಿ 57 ತಾಲೂಕುಗಳಿದ್ದವು. ಸರ್ಕಾರವು ಹೊಸದಾಗಿ 47 ತಾಲೂಕುಗಳನ್ನು ರಚನೆ ಮಾಡಿದ ನಂತರ ಇದರಲ್ಲಿ 11 ತಾಲೂಕುಗಳು ಗಡಿ ಭಾಗಕ್ಕೆ ಬರುತ್ತದೆ. ಈ ತಾಲೂಕುಗಳನ್ನು ಗಡಿಭಾಗ ಎಂದು ಪರಿಗಣಿಸಲು ವಿಧೇಯಕ ಮಂಡಿಸಲಾಗಿದೆ. 

ವಾರದಲ್ಲಿ ಭೂ ಪರಿವರ್ತನೆಗಾಗಿ ವಿಧಾನಸಭೆಯಲ್ಲಿ ಮಸೂದೆ ಮಂಡನೆ

ಈ ಮೊದಲು ಯಾವುದೇ ತಾಲೂಕುಗಳನ್ನು ಗಡಿ ಭಾಗ ಎಂದು ಪರಿಗಣಿಸಬೇಕಾದರೆ ಪ್ರತಿ ಬಾರಿಯು ವಿಧೇಯಕ ತರಬೇಕಾಗಿತ್ತು. ಆದರೆ ಈ ಸಮಸ್ಯೆಯನ್ನು ನಿವಾರಣೆ ಮಾಡಲು ವಿಧೇಯಕದಲ್ಲಿಯೇ ಅವಕಾಶ ಮಾಡಿಕೊಡಲಾಗಿದ್ದು, ಸರ್ಕಾರ ಮಟ್ಟದಲ್ಲಿಯೇ ತೀರ್ಮಾನ ಕೈಗೊಳ್ಳಬಹುದಾಗಿದೆ. ವಿಧೇಯಕ ವಾಪಸ್‌: 2021ನೇ ಸಾಲಿನ ಬಂಧಿಗಳ ಗುರುತಿಸುವಿಕೆ ತಿದ್ದುಪಡಿ ವಿಧೇಯಕವನ್ನು ಸದನದಲ್ಲಿ ಹಿಂಪಡೆಯಲಾಯಿತು.

Follow Us:
Download App:
  • android
  • ios