ಅಂಗಾಂಗ ದಾನದಲ್ಲಿ ದೇಶಕ್ಕೇ ಕರ್ನಾಟಕ ನಂ.2: ಪುನೀತ್, ಸಂಚಾರಿ ವಿಜಯ್ ಪ್ರೇರಣೆ
ರಾಜ್ಯದಲ್ಲಿ ಮೃತರ ಅಂಗಾಂಗ ದಾನ ಗಣನೀಯ ಏರಿಕೆ ಕಂಡಿದ್ದು, ದೇಶದಲ್ಲಿಯೇ ಎರಡನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ (2022) ಹಿಂದೆಂದಿಗಿಂತಲೂ ಅತಿ ಹೆಚ್ಚು 151 ಮಂದಿಯು ಅಂಗಾಂಗ ದಾನ ಮಾಡಿದ್ದು, ಅವರಿಂದ ಕಿಡ್ನಿ, ಲಿವರ್, ಹೃದಯ ಸೇರಿದಂತೆ ಬರೋಬ್ಬರಿ 769 ಅಂಗಾಂಗಗಳನ್ನು ಸಂಗ್ರಹಿಸಲಾಗಿದೆ.
ಬೆಂಗಳೂರು (ಜ.20): ರಾಜ್ಯದಲ್ಲಿ ಮೃತರ ಅಂಗಾಂಗ ದಾನ ಗಣನೀಯ ಏರಿಕೆ ಕಂಡಿದ್ದು, ದೇಶದಲ್ಲಿಯೇ ಎರಡನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ (2022) ಹಿಂದೆಂದಿಗಿಂತಲೂ ಅತಿ ಹೆಚ್ಚು 151 ಮಂದಿಯು ಅಂಗಾಂಗ ದಾನ ಮಾಡಿದ್ದು, ಅವರಿಂದ ಕಿಡ್ನಿ, ಲಿವರ್, ಹೃದಯ ಸೇರಿದಂತೆ ಬರೋಬ್ಬರಿ 769 ಅಂಗಾಂಗಗಳನ್ನು ಸಂಗ್ರಹಿಸಲಾಗಿದೆ. ಮಾತ್ರವಲ್ಲದೇ, ಸಂಗ್ರಹಿಸಿದ ಅಂಗಾಂಗಳನ್ನು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದವರಿಗೆ ಯಶಸ್ವಿಯಾಗಿ ಕಸಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. 151 ಮೃತ ಮಂದಿಯು 769 ಮಂದಿಗೆ ಜೀವದಾನ ಮಾಡಿದಂತಾಗಿದ್ದು, ಈ ಮೂಲಕ ಸಾವಿನಲ್ಲಿಯೂ ಸಾರ್ಥಕತೆ ಮರೆದಿದ್ದಾರೆ.
ರಸ್ತೆ ಅಪಘಾತ, ಅನಾರೋಗ್ಯ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಮೆದುಳು ನಿಷ್ಕ್ರಿಯಗೊಂಡ ರೋಗಿಗಳಿಂದ ಅಂಗಾಂಗ ದಾನ ಪಡೆಯಲಾಗುತ್ತದೆ. ರಾಜ್ಯದಲ್ಲಿ ಸರ್ಕಾರದ ಅಧಿಕೃತ ಅಂಗಾಂಗ ಕಸಿ ನಿರ್ವಹಣಾ ಸಂಸ್ಥೆಯಾದ ಜೀವಸಾರ್ಥಕತೆಯು ಅಂಗಾಂಗ ಸಂಗ್ರಹ, ನೋಂದಣಿ, ವಿತರಣೆ, ಕಸಿ ಶಸ್ತ್ರಚಿಕಿತ್ಸೆ, ಜಾಗೃತಿ ಕಾರ್ಯಗಳನ್ನು ನಿರ್ವಹಿಸುತ್ತದೆ. ಈ ಸಂಸ್ಥೆಯು ಆರಂಭವಾಗಿ 18 ವರ್ಷಗಳಾಗಿದ್ದು (2005), ಕಳೆದ ವರ್ಷ ಅತಿ ಹೆಚ್ಚು 151 ಮಂದಿ ದಾನ ಮಾಡಿದ್ದಾರೆ. ಈ ಹಿಂದೆ ಅತಿ ಹೆಚ್ಚು 2019ರಲ್ಲಿ 105 ಮಂದಿ ಅಂಗಾಂಗ ದಾನ ಮಾಡಿದ್ದರು. ಕಳೆದ ಎರಡು ವರ್ಷ ಕೊರೋನಾ ಸಂದರ್ಭದಲ್ಲಿ 50 ಆಸುಪಾಸಿಗೆ ತಗ್ಗಿದ್ದು, ಸದ್ಯ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಇನ್ನು ದೇಶದಲ್ಲಿಯೇ ಅತಿ ಹೆಚ್ಚು ಅಂಗಾಂಗ ದಾನ ಮಾಡಿದ ರಾಜ್ಯಗಳ ಪೈಕಿ ಮೊದಲ ಸ್ಥಾನದಲ್ಲಿ ತೆಲಂಗಾಣ (194), ಎರಡನೇ ಸ್ಥಾನದಲ್ಲಿ ಕರ್ನಾಟಕವಿದೆ. ಮೂರನೇ ಸ್ಥಾನದಲ್ಲಿ ಗುಜರಾತ್ (147) ಇವೆ.
ಕಾನೂನು ಪಾಲಿಸಿದರೆ ಕ್ರಿಪ್ಟೊ ಕರೆನ್ಸಿಯಿಂದ ಸಮಸ್ಯೆಯಿಲ್ಲ: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್
ಪುನೀತ್, ಸಂಚಾರಿ ವಿಜಯ್ ಪ್ರೇರಣೆ: ಮೆದುಳು ನಿಷ್ಕ್ರಿಯರಾದ, ಅಪಘಾತಕ್ಕೀಡಾದ, ಹಠಾತ್ ಹೃದಯಾಘಾತವಾದ ಯುವ ಜನತೆಯಲ್ಲಿ ಅಂಗಾಂಗ ದಾನ ಮತ್ತು ನೇತ್ರದಾನ ಹೆಚ್ಚಾಗಿದೆ. ನಟ ಪುನೀತ್ ಮತ್ತು ಸಂಚಾರಿ ವಿಜಯ್ ಅಂಗಾಂಗ ದಾನದ ಬಳಿಕ ಹಲವು ಕುಟುಂಬಸ್ಥರು ಸ್ವಯಂ ಪ್ರೇರಿತವಾಗಿ ಮುಂದೆ ಬಂದಿದ್ದಾರೆ. ಜತೆಗೆ ಈ ನಟರನ್ನೇ ಮಾದರಿಯಾಗಿಟ್ಟುಕೊಂಡು ಅಂಗಾಂಗದ ದಾನಕ್ಕೆ ಕುಟುಂಬಸ್ಥರ ಮನವೊಲಿಸಲಾಗುತ್ತಿದೆ. ಸದ್ಯ ನೋಂದಣಿಯಾಗಿರುವವರ ಸಂಖ್ಯೆ 34 ಸಾವಿರಕ್ಕೆ ಹೆಚ್ಚಾಗಿದ್ದು, ಒಂದೇ ವರ್ಷದಲ್ಲಿ ಶೇ.10ರಷ್ಟು ಹೆಚ್ಚಾಗಿದೆ. ನೋಂದಣಿಯಾದವರ ಪೈಕಿ ಶೇ. 90 ರಷ್ಟುಮಂದಿ ಯುವ ಜನರೇ ಆಗಿದ್ದಾರೆ. ಎಲ್ಲರಿಗೂ ಸಂಸ್ಥೆಯಿಂದ ಪ್ರಮಾಣಪತ್ರ ವಿತರಿಸಲಾಗಿದೆ ಎಂದು ಜೀವಸಾರ್ಥಕತೆಯ ಅಂಗಾಂಗ ಕಸಿ ಸಂಯೋಜಕ ನೌಷದ್ ಪಾಷಾ ತಿಳಿಸಿದರು.
ರಾಜ್ಯದೆಲ್ಲೆಡೆ ಸೌಲಭ್ಯಕ್ಕೆ ಒತ್ತಾಯ: ರಾಜ್ಯದಲ್ಲಿ ವಾರ್ಷಿಕ ನಡೆಯುವ ಅಂಗಾಂಗ ದಾನಗಳ ಪೈಕಿ ಶೇ.70ರಷ್ಟುಬೆಂಗಳೂರಿನಲ್ಲಿ ನಡೆಯುತ್ತವೆ. 2022ರಲ್ಲಿ ಬೆಂಗಳೂರಿನ ಅತಿ ಹೆಚ್ಚು ಆರ್‌ವಿ ಆಸ್ಟರ್ ಆಸ್ಪತ್ರೆಯಲ್ಲಿ 20, ವಿಕ್ಟೋರಿಯಾ ಟ್ರಾಮಾ ಸೆಂಟರ್‌ನಲ್ಲಿ 12, ಆಸ್ಟರ್ ಸಿಎಂಐ ಆಸ್ಪತ್ರೆ ಹಾಗೂ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ 12 ಮಂದಿ ಅಂಗಾಂಗ ದಾನ ಮಾಡಿದ್ದಾರೆ. ಉಳಿದಂತೆ ಮೈಸೂರಿನಲ್ಲಿ 20, ಹುಬ್ಬಳ್ಳಿಯಲ್ಲಿ 6 ನಡೆದಿವೆ. ಆದರೆ, ರಾಜ್ಯದ ಇತರೆಡೆಯು ಮೆದುಳು ನಿಷ್ಕ್ರಿಯ ಪ್ರಕರಣಗಳಿದ್ದು, ದಾನಕ್ಕೆ ಕುಟುಂಬಸ್ಥರು ಸಿದ್ಧವಿದ್ದರೂ ಸೌಲಭ್ಯಗಳಿಲ್ಲದೆ ದಾನ ಸಾಧ್ಯವಾಗುತ್ತಿಲ್ಲ. ಎರಡನೇ ಹಂತದ ನಗರಗಳಲ್ಲಿ ಅಂಗಾಂಗ ದಾನ ಪಡೆಯುವುದು ಮತ್ತು ಕಸಿ ಶಸ್ತ್ರಚಿಕಿತ್ಸೆ ಸೌಲಭ್ಯಕ್ಕೆ ಬೇಡಿಕೆ ಹೆಚ್ಚಿದೆ ಎನ್ನುತ್ತಾರೆ ಜೀವಸಾರ್ಥಕತೆ ಅಧಿಕಾರಿಗಳು.
ಯಾವ ಅಂಗಾಂಗ ಎಷ್ಟು ಸಂಗ್ರಹ?
ಮೂತ್ರಪಿಂಡ (ಕಿಡ್ನಿ) - 233
ಯಕೃತ್ (ಲಿವರ್) -124
ಕಾರ್ನಿಯಾ (ಕಣ್ಣು) -246
ಹೃದಯ - 46
ಹೃದಯ ಕವಾಟುಗಳು - 64
ಚರ್ಮ - 38
ಶ್ವಾಸಕೋಶ - 12
ಮೇದೋಜಿರಕ ಗ್ರಂಥಿ- 4
ಹೃದಯ ಮತ್ತು ಶ್ವಾಸಕೋಶಗಳು - 2
ಬೊಮ್ಮಾಯಿ ಆಡಳಿತಕ್ಕೆ ಮೋದಿ ಶಹಬ್ಬಾಸ್‌ಗಿರಿ: ಡಬಲ್ ಎಂಜಿನ್ ಸರ್ಕಾರದಿಂದ ಕರ್ನಾಟಕ ಅಭಿವೃದ್ಧಿ
ಅಂಗಾಂಗ ದಾನ ಮಾಡಿದವರು
2017 -68
2018-89
2019- 105
2020-35
2021 -70
2022 - 151