ವಿಧಾನ ಪರಿಷತ್‌ನಲ್ಲಿ ಸಚಿವ ಕೆ.ಎನ್. ರಾಜಣ್ಣ ತಮ್ಮ ಮೇಲೆ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ. ಸಿಟಿ ರವಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿದ್ದಾರೆ.
ಬೆಂಗಳೂರು (ಮಾ..21): ಕರ್ನಾಟಕ ವಿಧಾನ ಪರಿಷತ್‌ನಲ್ಲಿ ಇತ್ತೀಚೆಗೆ ಸಚಿವ ಕೆ.ಎನ್. ರಾಜಣ್ಣ ಅವರು ತಮ್ಮ ಮೇಲೆ 'ಹನಿಟ್ರ್ಯಾಪ್' (Honeytrap) ಪ್ರಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ, ಇದು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ವಿವಾದವು ಕರ್ನಾಟಕ ವಿಧಾನಸಭೆಯ ಅಧಿವೇಶನದ ಸಂದರ್ಭದಲ್ಲಿ ಮಾರ್ಚ್ 20, 2025 ರಂದು ಸದನದಲ್ಲಿ ರಾಜಣ್ಣ ಅವರು ಈ ಗಂಭೀರ ಆರೋಪವನ್ನು ಮಾಡಿದ ನಂತರ ಈ ವಿವಾದ ಭುಗಿಲೆದ್ದಿದೆ.
ಈ ಬಗ್ಗೆ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಪ್ರತಿಕ್ರಿಯಿಸಿದ್ದು, ಹನಿಟ್ರ್ಯಾಪ್ ಪ್ರಕರಣ ಬಹಳ ಗಂಭೀರ ಕೇಸ್. ಆಡಳಿತ ಪಕ್ಷದ ಸಚಿವರೇ ಹನಿಟ್ರ್ಯಾಪ್‌ಗೆ ಬಲಿಯಾಗಿದ್ದಾರೆ. ಇದನ್ನು ಗಂಭೀರವಾಗಿ ತೆಗೆದುಕೊಂದು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಈ ರೀತಿ ಅಧಿಕಾರಕ್ಕಾಗಿ ಹನಿಟ್ರ್ಯಾಪ್ ಮಾಡಿ ಎಷ್ಟು ಜನರ ಸಾರ್ವಜನಿಕ ಬದುಕು ಹಾಳುಮಾಡಿದ್ದಾರೋ ಗೊತ್ತಿಲ್ಲ. ಇದೀಗ ಅವರದೇ ಸರ್ಕಾರದ ಸಚಿವರೊಬ್ಬರ ವಿರುದ್ಧ ಮಾಡಿದ್ದಾರೆಂದರೆ ಇದೊಂದು ಗಂಭೀರ ಪ್ರಕರಣ. ಈ ವಿಚಾರದಲ್ಲಿ ಬ್ಲಾಕ್‌ಮೇಲ್ ಕೂಡ ನಡೆದಿದೆ. ತನಗೆ ಬೇಕಾದಂತೆ ನಡೆಸಿಕೊಳ್ಳಲು ಈ ರೀತಿ ಹನಿಟ್ರ್ಯಾಪ್ ಮೂಲಕ ಬ್ಲಾಕ್ ಮೇಲ್ ಮಾಡಲಾಗಿದೆ. ಹೀಗಾಗಿ ಇದರ ಹಿಂದೆ ಯಾರಿದ್ದಾರೆಂದು ತಿಳಿಯಬೇಕು, ಯಾರಾರ ಮನೆ, ರಾಜಕೀಯ ಬದುಕು ಹಾಳಾಗಿದೆ ಎಲ್ಲವೂ ಗೊತ್ತಾಗಬೇಕು. ಹಾಲಿನದ್ದು ಹಾಲಿಗೆ ನೀರಿನದ್ದು ನೀರಿಗೆ ಹೋಗಲಿ. ಹೀಗಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಬೇಕೆಂದು ಮುಖ್ಯಮಂತ್ರಿಗೆ ಆಗ್ರಹಿಸಿದರು.
ಇದನ್ನೂ ಓದಿ: ನಾಳೆ ಕರ್ನಾಟಕ ಬಂದ್, ಚಿತ್ರೋದ್ಯಮದಿಂದ ಬೆಂಬಲ, ಥಿಯೇಟರ್ ಕ್ಲೋಸ್? ಸಿನಿಮಾ ಟಿಕೆಟ್ ಬುಕ್ ಮಾಡಬೇಕಾ? ಬೇಡ್ವಾ?
ಸಿಡಿ ಫ್ಯಾಕ್ಟರಿ ಸದಾಶಿವನಗರದಲ್ಲಿದೆ:
ಸಿಡಿ ಫ್ಯಾಕ್ಟರಿ ಸದಾಶಿವನಗರದಲ್ಲಿದೆ ಎಂಬ ಆರೋಪವೂ ಕೇಳಿಬಂದಿದೆ. ಅದು ಸದಾಶಿವನಗರದಲ್ಲಿದ್ಯಾ? ಬೇರೆ ಕಡೆ ಇದೆಯೋ ಎಲ್ಲವೂ ಬಯಲಿಗೆ ಬರಬೇಕು. ಹನಿಟ್ರ್ಯಾಪ್ ಮುಖ್ಯಮಂತ್ರಿ ಕುರ್ಚಿಗಾಗಿ ಮಾಡಿದ್ದಾರೋ, ಬೇರೆ ಉದ್ದೇಶವಿದೆಯೋ.. ನಾನು ರಾಜಣ್ಣ ಅವರಿಗೂ ಆಗ್ರಹಿಸುತ್ತೇನೆ. ನೀವು ಆರೋಪ ಮಾಡುವುದು ಬೇಡ, ದೂರು ಕೊಡಿ, ಸಿಬಿಐ ತನಿಖೆಗೆ ಒತ್ತಾಯಿಸಿ ಎಂದರು.
