ಬೆಂಗಳೂರು(ಜೂ.13): ಮಾಚ್‌ರ್‍ ತಿಂಗಳಿನಿಂದ ಮೇ ವರೆಗಿನ ಜಿಎಸ್‌ಟಿ ಪರಿಹಾರ ಬಾಕಿ 10,208 ಕೋಟಿ ರು. ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಶುಕ್ರವಾರ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ನೇತೃತ್ವದಲ್ಲಿ ವೀಡಿಯೋ ಕಾನ್ಫರೆನ್ಸ್‌ ಮೂಲಕ ನಡೆದ ಜಿಎಸ್‌ಟಿ ಕೌನ್ಸಿಲ್‌ ಸಭೆ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು. ಮಾಚ್‌ರ್‍ ತಿಂಗಳಿನಿಂದ ಮೇವರೆಗೆ ಒಟ್ಟು 10,208 ಕೋಟಿ ರು. ಜಿಎಸ್‌ಟಿ ಪರಿಹಾರ ಮೊತ್ತ ಬರಬೇಕಿದೆ. ಅದರಲ್ಲೂ ಮಾಚ್‌ರ್‍ ತಿಂಗಳ 1,460 ಕೊಟಿ ರು.ಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಕೋರಲಾಗಿದೆ. ಕೇಂದ್ರ ಸರ್ಕಾರವು ಡಿಸೆಂಬರ್‌ನಿಂದ ಫೆಬ್ರವರಿ ತಿಂಗಳವರೆಗೆ 4,314 ಕೊಟಿ ರು. ರಾಜ್ಯದ ಪರಿಹಾರ ಮೊತ್ತವನ್ನು ನೀಡಿದೆ ಎಂದು ಹೇಳಿದರು.

ಕೊರೋನಾ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯಕ್ಕೆ ಆರ್ಥಿಕ ಸಂಕಷ್ಟಇದೆ. ಇದರ ನಡುವೆಯೂ ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪರಿಹಾರ ಮೊತ್ತವನ್ನು ನೀಡಬೇಕಿದೆ. ಜಿಎಸ್‌ಟಿ ತೆರಿಗೆ ರಿಟರ್ನ್‌ ಫೈಲಿಂಗ್‌ ಜುಲೈ ಮಧ್ಯದವರೆಗೆ ವಿಸ್ತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಲೇಟ್‌ ಫೀಯನ್ನು ಶೇ.18ರಿಂದ 9ಕ್ಕೆ ಇಳಿಸಲು ತೀರ್ಮಾನಿಸಲಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ನೋಡಿಕೊಂಡು ಪರಿಹಾರ ನೀಡುವಲ್ಲಿ ವಿಳಂಬ ಮಾಡಬಾರದು ಎಂದು ತಿಳಿಸಿದರು.