ದೆಹಲಿಯಲ್ಲಿ ಸಂಸದ ರಾಜಶೇಖರ್ ಹಿಟ್ನಾಳ್ ಏರ್ಪಡಿಸಿರುವ ಔತಣ ಕೂಟಕ್ಕೆ ತಮಗೆ ಆಹ್ವಾನವಿಲ್ಲ ಮತ್ತು ತಾವು ಹೋಗುವುದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ದಲಿತ ಸಿಎಂ ಚರ್ಚೆಯ ಕುರಿತ ಪ್ರಶ್ನೆಗೆ, ಅಂತಹ ಪ್ರಶ್ನೆಗಳು ಖುಷಿ ಕೊಡುತ್ತವೆ ಎಂದರು.
ಬೆಂಗಳೂರು (ನ.10): ಕಾಂಗ್ರೆಸ್ ಸಂಸದ ರಾಜಶೇಖರ್ ಹಿಟ್ನಾಳ್ ಅವರು ದೆಹಲಿಯಲ್ಲಿ ಸಚಿವರಿಗೆ, ಶಾಸಕರಿಗೆ ಔತಣ ಕೂಟ ಏರ್ಪಡಿಸುವ ವಿಚಾರ ನನಗೆ ತಿಳಿದಿಲ್ಲ. ನನ್ನನ್ನು ಅವರು ಆಹ್ವಾನಿಸಿಲ್ಲ. ನಾನು ಹೋಗುವುದೂ ಇಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ.
ದೆಹಲಿಯಲ್ಲಿ ಔತಣ ಕೂಟದ ಬಗ್ಗೆ ನನಗೆ ಮಾಹಿತಿ ಇಲ್ಲ:
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಟ್ನಾಳ್ ಅವರು ದೆಹಲಿಯಲ್ಲಿ ಔತಣ ಕೂಟ ಏರ್ಪಡಿಸುತ್ತಿರುವ ಕುರಿತು ನನಗೆ ಮಾಹಿತಿಯಿಲ್ಲ. ನನಗೆ ಆಹ್ವಾನ ಬಂದಿಲ್ಲ, ನಾನು ಹೋಗುತ್ತಿಲ್ಲ. ಇನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯ ವಕೀಲ ಕಪಿಲ್ ಸಿಬಲ್ ಅವರ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕಾಗಿ ದೆಹಲಿಗೆ ಹೋಗುತ್ತಿದ್ದಾರೆ ಎಂದರು. ನವೆಂಬರ್‌ನಲ್ಲಿ ಸರ್ಕಾರದಲ್ಲಿ ಬದಲಾವಣೆಯಾಗುತ್ತದೆ ಎಂಬ ಚರ್ಚೆಗೆ ಪ್ರತಿಕ್ರಿಯಿಸಿ, ಒಬ್ಬೊಬ್ಬರು ಒಂದೊಂದು ಹೇಳುತ್ತಾರೆ. ಅದಕ್ಕೆಲ್ಲ ಯಾರು ಉತ್ತರಿಸುತ್ತಾರೆ? ಎಂದರು.
ನೀವು ಕೇಳುವ ಪ್ರಶ್ನೆಗಳಿಂದ ಮಾತ್ರ ಖುಷಿಯಾಗುತ್ತೆ:
ರಾಜ್ಯದಲ್ಲಿ ದಲಿತ ಸಿಎಂ ಚರ್ಚೆ ಆರಂಭವಾಗಿದ್ದು, ನಿಮಗೆ ಪದೋನ್ನತಿ ಸಿಗುತ್ತದೆ ಎಂಬ ಮಾತುಗಳಿವೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಈ ರೀತಿಯ ಮಾಹಿತಿಗಳನ್ನು ಮಾಧ್ಯಮಗಳಿಗೆ ಯಾರು ನೀಡುತ್ತಾರೋ ತಿಳಿದಿಲ್ಲ. ನೀವೇ ಇದನ್ನು ಪ್ರಚಾರ ಮಾಡುತ್ತೀರೋ ಗೊತ್ತಿಲ್ಲ. ಆದರೆ, ನೀವು ಕೇಳುವ ಪ್ರಶ್ನೆಗಳಿಂದ ಖುಷಿಯಾಗುತ್ತದೆ ಎಂದು ತಿಳಿಸಿದರು.
ಬದಲಾವಣೆ ಬಗ್ಗೆಯೆಲ್ಲ ತಿಳಿದಿಲ್ಲ ಎಂದು ಹೇಳಿದರು.
