pro-kannada activists cases revie: ರೈತಪರ ಹಾಗೂ ಕನ್ನಡಪರ ಸಂಘಟನೆಗಳು ಒಳ್ಳೆಯ ಉದ್ದೇಶದಿಂದ ನಡೆಸಿದ ಹೋರಾಟದ ವೇಳೆ ದಾಖಲಾದ ಗಂಭೀರವಲ್ಲದ ಕೇಸುಗಳನ್ನು ಪರಿಶೀಲಿಸಿ ವಾಪಸ್ ಪಡೆಯಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರು (ನ.10): ರೈತ ಪರ, ಕನ್ನಡಪರ ಸಂಘಟನೆಗಳು ಒಳ್ಳೆಯ ಉದ್ದೇಶದಿಂದ ಹೋರಾಟ ಮಾಡಿದ ಸಂದರ್ಭದಲ್ಲಿ ಗುರುತರವಾದ ಯಾವುದೇ ಆರೋಪಗಳು ಇಲ್ಲದಿದ್ದರೆ ಅಂತಹ ಕೇಸುಗಳನ್ನು ಚರ್ಚೆ ಮಾಡಿ ವಾಪಸ್ ಪಡೆಯುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಕನ್ನಡಪರ ಹೋರಾಟಗಾರರ ಮೇಲೆ ದಾಖಲಾಗಿರುವ ಕೇಸುಗಳನ್ನು ಹಿಂಪಡೆಯಬೇಕೆಂಬ ‘ಕನ್ನಡಪ್ರಭ’ ಸರಣಿ ಅಭಿಯಾನದ ಕುರಿತು ಭಾನುವಾರ ಪ್ರತಿಕ್ರಿಯಿಸಿರುವ ಅವರು, ಯಾರು ಕಾನೂನಿನ ವಿರುದ್ಧವಾಗಿ ಕೆಲಸ ಮಾಡಿರುತ್ತಾರೋ ಅಂತಹವರ ಮೇಲೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.
ಸಮಿತಿ ಪರಿಶೀಲಿಸುತ್ತೆ:
ಕನ್ನಡಪರ, ರೈತಪರ ಸಂಘಟನೆಗಳು ಸೇರಿದಂತೆ ಯಾವುದೇ ಸಂಘಟನೆಗಳು ಒಳ್ಳೆಯ ಉದ್ದೇಶದಿಂದ ಹೋರಾಟ ಮಾಡಿದ ಸಂದರ್ಭದಲ್ಲಿ ಕೇಸು ದಾಖಲಾಗಿದ್ದರೆ, ಅವುಗಳನ್ನು ಪರಿಶೀಲಿಸಲು ಸಚಿವ ಸಂಪುಟ ಉಪಸಮಿತಿ ಮಾಡಲಾಗಿದೆ. ರಾಜ್ಯದ ಯಾವುದೇ ಪೊಲೀಸ್ ಠಾಣೆಯಲ್ಲಿ ಕೇಸು ಹಾಕಿದ್ದರೆ, ಅವುಗಳನ್ನು ಪರಿಶೀಲಿಸಿ ಸಮಿತಿ ವರದಿ ನೀಡುತ್ತದೆ. ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಗತ್ಯವಿದ್ದರೆ ಕೇಸು ವಾಪಸ್ ತೆಗೆದುಕೊಳ್ಳಲಾಗುವುದು ಎಂದರು.
ಈಗ ಅರ್ಜಿ ನೀಡಿದ್ರೆ ನಾಳೆಯೇ ವಾಪಸ್ ತಗೊಳ್ಳೋಕೆ ಆಗೋಲ್ಲ:
ಈಗ ಅರ್ಜಿ ನೀಡಿದರೆ ನಾಳೆಯೇ ವಾಪಸ್ ತೆಗೆದುಕೊಳ್ಳಲು ಆಗುವುದಿಲ್ಲ. ಎಲ್ಲವನ್ನೂ ಕೂಲಂಕಷವಾಗಿ ಚರ್ಚಿಸಿ, ಪರಿಶೀಲಿಸಿ, ಕ್ಯಾಬಿನೆಟ್ ತೀರ್ಮಾನ ತೆಗೆದುಕೊಳ್ಳುತ್ತದೆ. ಯಾವು ಕಾನೂನು ವಿರುದ್ಧವಾಗಿ ಕೆಲಸ ಮಾಡಿರುತ್ತಾರೋ ಅವರ ಮೇಲೆ ಕ್ರಮ ಆಗಲಿದೆ ಎಂದು ಹೇಳಿದರು.
