ದಾವಣಗೆರೆ[ಅ.09]: ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಅತಿವೃಷ್ಟಿ, ಪ್ರವಾಹದಿಂದ .17 ಸಾವಿರ ಕೋಟಿ ಪರಿಹಾರವನ್ನು ಆಗಿನ ರಾಜ್ಯ ಸರ್ಕಾರ ಕೇಳಿದ್ದರೂ ಕೇವಲ .700 ಕೋಟಿ ಪರಿಹಾರ ನೀಡಿದ್ದು ಮಾಜಿ ಸಿಎಂ ಸಿದ್ದರಾಮಯ್ಯಗೆ ಗೊತ್ತಿಲ್ಲವೇ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತಿವೃಷ್ಟಿ, ನೆರೆ ಪರಿಹಾರಕ್ಕೆ ಈಗ ಅರೆ ಕಾಸಿನ ಮಜ್ಜಿಗೆಯಂತೆ ಪರಿಹಾರ ನೀಡಿದ್ದಾರೆಂದು ಕೇಂದ್ರ ಸರ್ಕಾರವನ್ನು ಟೀಕಿಸಿರುವ ಸಿದ್ದರಾಮಯ್ಯ ಹಿಂದೆ ರಾಜ್ಯಕ್ಕೆ ಯುಪಿಎ ಸರ್ಕಾರ ಬರೀ .700 ಕೋಟಿ ಪರಿಹಾರ ನೀಡಿದಾಗ ಯಾಕೆ ಧ್ವನಿ ಎತ್ತಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದ ಬೊಕ್ಕಸ ಖಾಲಿಯಾಗುವ ಪ್ರಶ್ನೆಯೇ ಇಲ್ಲ. ಸಾರಿಗೆ ನಿಗಮದ್ದು ಅನೇಕ ವರ್ಷಗಳ ಸಮಸ್ಯೆ ಇದೆ. ಈ ಕಾರಣಕ್ಕಾಗಿ ಕೆಲ ಕೆಲಸ ಬಾಕಿ ಇದೆಯಷ್ಟೇ. ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಕ್ಕೆ ಯಾವುದೇ ತೊಂದರೆಯೂ ಇಲ್ಲ ಎಂದು ತಿಳಿಸಿದರು.

ಔರಾದಕರ್‌ ವರದಿ ಜಾರಿಗೆ ಮಾಡುವ ಬಗ್ಗೆ ಪರಿಶೀಲನೆ ನಡೆಸಿದ್ದೇವೆ. ಪೊಲೀಸರಿಗೆ ನಾಲ್ಕನೇ ರಜೆ ದಿನದ ಬಗ್ಗೆಯೂ ಚರ್ಚೆ ಸಾಗಿದೆ. ಆದಷ್ಟುಬೇಗನೆ ಈ ಬಗ್ಗೆ ಸೂಕ್ತ ನಿರ್ಧಾರವನ್ನು ಕೈಗೊಳ್ಳುತ್ತೇವೆ. ಹಿಂದೆ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ 14 ತಿಂಗಳ ಕಾಲ ಹೇಗೆ ಆಡಳಿತ ಮಾಡಿದ್ದಾರೆಂಬುದು ಎಲ್ಲರಿಗೂ ಗೊತ್ತಿದೆ ಎಂದು ತಿಳಿಸಿದರು.