Hijab Raw: ತಾರಕಕ್ಕೇರಿದ ಹಿಜಾಬ್ ವಿವಾದ, ಬೆಂಕಿಗೆ ತುಪ್ಪ ಸುರಿದ ಡಿಕೆಶಿ ಟ್ವೀಟ್
* ರಾಜ್ಯಾದ್ಯಂತ ಕಾವು ಪಡೆದ ಹಿಜಾಬ್- ಕೇಸರಿ ಶಾಲು ವಿವಾದ
* ಧ್ವಜಸ್ತಂಭದಲ್ಲಿ ಹಾರಾಡಿದ ಕೇಸರಿ ಧ್ವಜ
* ಬೆಂಕಿಗೆ ತುಪ್ಪ ಸುರಿದ ಡಿಕೆಶಿ ಟ್ವೀಟ್
ಶಿವಮೊಗ್ಗ(ಫೆ.09): ಉಡುಪಿಯ ಕಾಲೇಜೊಂದರಲ್ಲಿ ಆರಂಭವಾದ ಹಿಜಾಬ್- ಕೇಸರಿ ಶಾಲು ಗಲಾಟೆ ಇದೀಗ ಇತರ ಜಿಲ್ಲೆಗಳಿಗೂ ವ್ಯಾಪಿಸಿದ್ದು, ವಿದ್ಯಾರ್ಥಿಗಳನ್ನು ನಿಯಂತ್ರಿಸಲು ಸಾಧ್ಯವಾಗದಂತಾಗಿದೆ. ವಿದ್ಯಾರ್ಥಿಗಳು ಅನ್ಯಕೋಮಿನ ವಿದ್ಯಾರ್ಥಿಗಳ ವಿರುದ್ಧ ಕಿಡಿ ಕಾರುತ್ತಿದ್ದು, ಕಲ್ಲು ತೂರಾಟ ಸಾಮಾನ್ಯವಾಗಿದೆ. ಈ ವಿಚಾರ ದೇಶಾದ್ಯ<ತ ಸದ್ದು ಮಾಡುತ್ತಿದ್ದು, ಪರಿಸ್ಥಿತಿ ನಿಯಂತ್ರಿಸಲು ರಾಜ್ಯಾದ್ಯಂತ ಕಾಲೇಜುಗಳಿಗೆ ಮೂರು ದಿನಗಳ ರಜೆ ಘೋಷಿಸಲಾಗಿದೆ.
ಇನ್ನು ಈ ವಿವಾದದ ನಡುವೆಯೇ ಶಿವಮೊಗ್ಗದ ಕಾಲೇಜೊಂದರಲ್ಲಿ ರಾಷ್ಟ್ರಧ್ವಜ ಹಾರಿಸುವ ಧ್ವಜ ಸ್ತಂಭದಲ್ಲಿ ಕೇಸರಿ ಧ್ವಜ ಹಾರಿದ ವಿಚಾರ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಹೌದು ಕಾಲೇಜಿನ ಎದುರು ಇದ್ದ ಧ್ವಜಸ್ತಂಭವೊಂದಕ್ಕೆ ಕೇಸರಿ ಬಾವುಟ ಏರಿಸಿ ಹಾರಿಸಲು ವಿದ್ಯಾರ್ಥಿಯೋರ್ವ ಯತ್ನಿಸಿದ್ದು, ಮಂಗಳವಾರ ಶಿವಮೊಗ್ಗದಲ್ಲಿ ನಡೆದ ಹಿಜಾಬ್- ಕೇಸರಿ ಶಾಲು ವಿವಾದದ ಘಟನೆಯ ಸಂಘರ್ಷಕ್ಕೆ ಮೂಲ ಕಾರಣವಾಯಿತು.
ಬೆಳಗ್ಗೆ ಬಾಪೂಜಿ ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ವಿದ್ಯಾರ್ಥಿಗಳು ಜಮಾವಣೆಗೊಂಡ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ವಿದ್ಯಾರ್ಥಿಯೋರ್ವ ಕಾಲೇಜಿನ ಎದುರು ಇದ್ದ ಧ್ವಜಸ್ತಂಭವನ್ನು ಸರಸರನೆ ಏರಿ, ಕೇಸರಿ ಬಾವುಟ ಕಟ್ಟಲು ಯತ್ನಿಸಿದ. ಈ ವೇಳೆ ಅದೆಲ್ಲಿಂದಲೋ ಎರಡು ಮೂರು ಕಲ್ಲುಗಳು ಆತನೆಡೆಗೆ ತೂರಿ ಬಂದವು. ತಕ್ಷಣವೇ ಆತ ಕೆಳಗಿಳಿದ. ಆದರೆ ಕಲ್ಲುಗಳ ತೂರಾಟಕ್ಕೆ ಇದು ನಾಂದಿಯಾಯಿತು. ಬಳಿಕ ಮತ್ತಷ್ಟುಕಲ್ಲು ತೂರಿ ಬಂದವು. ಈ ವೇಳೆ ಪೊಲೀಸರು ಕಲ್ಲು ತೂರಿದ ವ್ಯಕ್ತಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದರು. ಬಳಿಕ ಎಲ್ಲಿಯೂ ಯಾವುದೇ ಮತ ಪಂಥ, ಸಂಘಟನೆಯ ಧ್ವಜ ಪ್ರದರ್ಶನಕ್ಕೆ ಅವಕಾಶ ನೀಡದಂತೆ ಮುನ್ನೆಚ್ಚರಿಕೆ ವಹಿಸಿದ್ದರು.
ರಾಷ್ಟ್ರ ಧ್ವಜ ಕೆಳಕ್ಕಿಳಿಸಿ, ಕೇಸರಿ ಧ್ವಜ ಹಾರಾಟ ಎಂದ ಡಿಕೆಶಿ
ಧ್ವಜಸ್ತಂಭದಲ್ಲಿ ಕೇಸರಿ ಧ್ವಜ ಹಾರಿಸಿದ ವಿಚಾರದ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಟ್ವೀಟ್ ಒಂದನ್ನು ಮಾಡಿದ್ದು, ಕಾಲೇಜು ಆವರಣದಲ್ಲಿದ್ದ ಧ್ವಜಸ್ತಂಭದಲ್ಲಿದ್ದ ಕೇಸರಿ ಬಾವುಟ ಕೆಳಕ್ಕಿಳಿಸಿ ಕೇಸರಿ ಧ್ವಜ ಹಾರಿಸಲಾಗಿದೆ ಎಂದಿದ್ದಾರೆ. ಈ ಮತ್ತಷ್ಟು ಗಲಭೆಗೆ ಸಾಕ್ಷಿಯಾಯಿತು. ಇದೇ ವೇಳೆ ಪರಿಸ್ಥಿತಿ ನಿಯಂತ್ರಿಸಲು ಕನಿಷ್ಟ ಒಂದು ವಾರ ರಜೆ ಘೋಷಿಸಬೇಕು. ಆನ್‌ಲೈನ್ ಮೂಲಕ ತರಗತಿಗಳನ್ನು ಮುಂದುವರೆಸಬಹುದು ಎಂದೂ ಅವರು ಸಲಹೆ ನೀಡಿದ್ದಾರೆ.
ತ್ರಿವರ್ಣ ಧ್ವಜ ಹಾರಿಸಿರಲಿಲ್ಲ
ಇನ್ನು ತ್ರಿವರ್ಣ ಧ್ವಜ ವಿಚಾರ ಬಗ್ಗೆ ಇಲ್ಲಿನ ಸ್ಥಳೀಯರೊಬ್ಬರು ಪ್ರತಿಕ್ರಿಯಿಸಿದ್ದು, ಗಣರಾಜ್ಯೋತ್ಸವದಂದು ಇಲ್ಲಿ ತ್ರಿವರ್ಣ ಧ್ವಜ ಹಾರಿಸಲಾಗಿತ್ತು. ಆದರೆ ಇಂದು ಇಲ್ಲಿ ಯಾವುದೇ ಧ್ವಜಾರೋಹಣ ನಡೆದಿರಲಿಲ್ಲ ಎಂದಿದ್ದಾರೆ. ಸದ್ಯ ವಿದ್ಯಾರ್ಥಿಯೊಬ್ಬ ಧ್ವಜಸ್ತಂಭ ಏರಿ ಕೇಸರಿ ಬಾವುಟ ಹಾರಿಸಿದ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ ಎಂಬುವುದು ವಾಸ್ತವ.