ಸಮಯಕ್ಕೆ ಕಚೇರಿಗೆ ಬಾರದ ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಯ ವರ್ಗಾವಣೆಯನ್ನು ಹೈಕೋರ್ಟ್ ಸಮರ್ಥಿಸಿದೆ. ಶಾಸಕರ ಶಿಫಾರಸ್ಸಿನ ಮೇರೆಗೆ ವರ್ಗಾವಣೆ ಮಾಡಿದ್ದು ಸರಿಯಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

 ಬೆಂಗಳೂರು (ಆ.30): ಕಚೇರಿಗೆ ನಿಗದಿತ ಸಮಯಕ್ಕೆ ಬಾರದ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಲ್ಪಿಸದ ಆರೋಪವಿದ್ದಾಗ ಸ್ಥಳೀಯ ಶಾಸಕರ (ಜನಪ್ರತಿನಿಧಿ) ಸಲಹೆ-ಶಿಫಾರಸು ಮೇರೆಗೆ ಸರ್ಕಾರಿ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದು ತಪ್ಪಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಬಂಗಾರಪೇಟೆ ತಹಸೀಲ್ದಾರ್ ಗ್ರೇಡ್ -1 ಆಗಿ ಸೇವೆ ಸಲ್ಲಿಸುತ್ತಿದ್ದ ತಮ್ಮನ್ನು ಅವಧಿಪೂರ್ವವಾಗಿ ಕೋಲಾರ ಜಿಲ್ಲಾಧಿಕಾರಿಗಳ ಕಚೇರಿಗೆ ವರ್ಗಾವಣೆ ಮಾಡಿದ ಸರ್ಕಾರದ ಕ್ರಮ ಪುರಸ್ಕರಿಸಿದ ಕರ್ನಾಟಕ ಆಡಳಿತಾತ್ಮಕ ನ್ಯಾಯಾಧೀಕರಣದ (ಕೆಎಟಿ) ಆದೇಶ ಪ್ರಶ್ನಿಸಿ ಎಸ್. ವೆಂಕಟೇಶಪ್ಪ ಎಂಬುವವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಅವರ ನೇತೃತ್ವದ ವಿಭಾಗೀಯ ಪೀಠ, ಅರ್ಜಿದಾರರ ವಿರುದ್ಧ ಕಚೇರಿಗೆ ಸಮಯಕ್ಕೆ ಬಾರದ, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸದ ಆರೋಪವಿತ್ತು. ಈ ಕುರಿತು ಬಂಗಾರಪೇಟೆ ಕ್ಷೇತ್ರದ ಶಾಸಕರಿಗೆ ಸಾರ್ವಜನಿಕರೇ ದೂರು ನೀಡಿದ್ದರು. ಆ ದೂರು ಆಧರಿಸಿ ಶಾಸಕರು ಕಂದಾಯ ಸಚಿವರಿಗೆ ಪತ್ರ ಬರೆದು, ಅರ್ಜಿದಾರರ ವರ್ಗಾವಣೆಗೆ ಕೋರಿದ್ದರು. ಬಳಿಕ ಸರ್ಕಾರ ಅರ್ಜಿದಾರರವನ್ನು ವರ್ಗಾಯಿಸಿದೆ. ಈ ಎಲ್ಲಾ ಅಂಶ ಪರಿಗಣಿಸಿ ಕೆಎಟಿಯು ಅರ್ಜಿದಾರರ ಅವಧಿಪೂರ್ವ ವರ್ಗಾವಣೆ ಪುರಸ್ಕರಿಸಿದ್ದು, ಅದರಲ್ಲಿ ಯಾವುದೇ ದೋಷಗಳು ಕಂಡು ಬರುತ್ತಿಲ್ಲ ಎಂದು ಹೇಳಿದೆ.

ಪ್ರಕರಣವೇನು?:

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌, 2024ರಲ್ಲಿ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳ ಷರತ್ತುಗಳ ಪ್ರಕಾರ ವಿಶೇಷ ಅಥವಾ ಅಸಮಾನ್ಯ ಕಾರಣಗಳ ಆಧಾರದ ಮೇಲೆ ಮುಖ್ಯಮಂತ್ರಿಗಳಿಂದ ಅನುಮೋದನೆ ಪಡೆದು ಸರ್ಕಾರಿ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಅವಕಾಶವಿದೆ. ಪ್ರಕರಣದಲ್ಲಿ ಮುಖ್ಯಮಂತ್ರಿಗಳಿಂದ ಅನುಮತಿ ಪಡೆದ ಬಳಿಕವೇ ವರ್ಗಾವಣೆ ಮಾಡಿರುವುದು ದಾಖಲೆಗಳಿಂದ ತಿಳಿದುಬರುತ್ತದೆ. ಆದ್ದರಿಂದ ದುರುದ್ದೇಶದಿಂದ ಅರ್ಜಿದಾರರನ್ನು ವರ್ಗಾಯಿಸಲಾಗಿದೆ ಎಂಬ ಆರೋಪಕ್ಕೆ ಯಾವುದೇ ಆಧಾರಗಳಿಲ್ಲ. ಅರ್ಜಿದಾರರೇ ಈ ವರ್ಗಾವಣೆಗೆ ಹೊಣೆಗಾರರಾಗಿದ್ದು, ಕೋಲಾರ ಜಿಲ್ಲೆಯಲ್ಲಿ ಮತ್ತೊಂದು ಸ್ಥಳಕ್ಕೆ ನಿಯೋಜಿಸಿರುವುದರಿಂದ ಅವರಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ತಿಳಿಸಿದೆ.

+++

ಅರ್ಜಿದಾರರು 2024ರ ಜು.31ರಿಂದ ಕೋಲಾರ ಜಿಲ್ಲೆಯ ಬಂಗಾರಪೇಟೆಯ ತಹಸೀಲ್ದಾರ್ ಕಚೇರಿಯಲ್ಲಿ ಗ್ರೇಡ್ -1 ತಹಸೀಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಕಚೇರಿಗೆ ಸಮಯಕ್ಕೆ ಸರಿಯಾಗಿ ಹಾಜರಾಗದ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ಆರೋಪದ ಮೇಲೆ ಸ್ಥಳೀಯ ಶಾಸಕರ ಮನವಿ ಮೇರೆಗೆ ಸರ್ಕಾರವು ಅರ್ಜಿದಾರರನ್ನು ಬಂಗಾರಪೇಟೆ ತಹಸೀಲ್ದಾರ್ ಗ್ರೇಡ್-1 ತಹಸೀಲ್ದಾರ್‌ ಹುದ್ದೆಯಿಂದ ಕೋಲಾರ ಜಿಲ್ಲಾಧಿಕಾರಿಗಳ ಕಚೇರಿಗೆ 2024ರ ಡಿ.13ರಂದು ವರ್ಗಾಯಿಸಿಯಿತ್ತು. ಈ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಕೆಎಟಿ ವಜಾಗೊಳಿಸಿದ್ದರಿಂದ ಅರ್ಜಿದಾರರು ಹೈಕೋರ್ಟ್‌ ಮೆಟ್ದಿಲೇರಿದ್ದರು. ಬಂಗಾರಪೇಟೆಯಲ್ಲಿ ಅಧಿಕಾರ ವಹಿಸಿಕೊಂಡ ಆರೇ ತಿಂಗಳಲ್ಲಿ ಮತ್ತೊಂದಡೆಗೆ ವರ್ಗಾಯಿಸಿರುವುದು ಕಾನೂನು ಬಾಹಿರ ಎಂದು ಆಕ್ಷೇಪಿಸಿದ್ದರು.