ಸರ್ಕಾರಿ ಶಾಲಾ ಮಕ್ಕಳಿಗೆ ಕೇವಲ ಒಂದು ಜೊತೆ ಸಮವಸ್ತ್ರ ಮತ್ತು ಶೂ ಒದಗಿಸಿರುವುದಕ್ಕೆ ರಾಜ್ಯ ಸರ್ಕಾರವನ್ನು ತೀವ್ರ ತರಾಟೆ ತೆಗೆದುಕೊಂಡಿರುವ ಹೈಕೋರ್ಟ್‌, ಉತ್ಸವ ನಡೆಸಲು ಕೋಟ್ಯಂತರ ಹಣ ಖರ್ಚು ಮಾಡುವ ಸರ್ಕಾರಕ್ಕೆ ಶಾಲಾ ಮಕ್ಕಳಿಗೆ ಸಮವಸ್ತ್ರ ನೀಡಲು ಆಗದಿರುವುದಕ್ಕೆ ನಿಜಕ್ಕೂ ನಾಚಿಕೆಯಾಗಬೇಕು. 

ಬೆಂಗಳೂರು (ಫೆ.01): ಸರ್ಕಾರಿ ಶಾಲಾ ಮಕ್ಕಳಿಗೆ ಕೇವಲ ಒಂದು ಜೊತೆ ಸಮವಸ್ತ್ರ ಮತ್ತು ಶೂ ಒದಗಿಸಿರುವುದಕ್ಕೆ ರಾಜ್ಯ ಸರ್ಕಾರವನ್ನು ತೀವ್ರ ತರಾಟೆ ತೆಗೆದುಕೊಂಡಿರುವ ಹೈಕೋರ್ಟ್‌, ಉತ್ಸವ ನಡೆಸಲು ಕೋಟ್ಯಂತರ ಹಣ ಖರ್ಚು ಮಾಡುವ ಸರ್ಕಾರಕ್ಕೆ ಶಾಲಾ ಮಕ್ಕಳಿಗೆ ಸಮವಸ್ತ್ರ ನೀಡಲು ಆಗದಿರುವುದಕ್ಕೆ ನಿಜಕ್ಕೂ ನಾಚಿಕೆಯಾಗಬೇಕು. ಅಧಿಕಾರಿಗಳಿಗೆ ಮಾನ-ಮರ್ಯಾದೆ, ಆತ್ಮಸಾಕ್ಷಿ ಇಲ್ಲ. ಸರ್ಕಾರಿ ಶಾಲಾ ಮಕ್ಕಳ ಕುರಿತು ಮಾನವೀಯತೆ ತೋರುತ್ತಿಲ್ಲ. ಸರ್ಕಾರ ಈಗಲಾದರೂ ಕಣ್ಣು ತೆರೆದು ಸಮವಸ್ತ್ರ ಒದಗಿಸಬೇಕು ಎಂದು ಚಾಟಿ ಬೀಸಿದೆ.

ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಎರಡು ಜೊತೆ ಸಮವಸ್ತ್ರ, ಒಂದು ಜೊತೆ ಶೂ ಮತ್ತು ಎರಡು ಜೊತೆ ಕಾಲು ಚೀಲ ನೀಡಬೇಕು ಎಂದು 2018ರ ಆಗಸ್ಟ್‌ನಲ್ಲಿ ಹೈಕೋರ್ಟ್‌ ಹೊರಡಿಸಿರುವ ಆದೇಶ ಪಾಲನೆಯಾಗಿಲ್ಲ ಎಂದು ಆರೋಪಿಸಿ ಕೊಪ್ಪಳ ಜಿಲ್ಲೆಯ ಮಾಸ್ಟರ್‌ ಮಂಜುನಾಥ್‌ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿಗಳಾದ ಬಿ.ವೀರಪ್ಪ ಅವರ ನೇತೃತ್ವದ ವಿಭಾಗೀಯ ಪೀಠ, ಸರ್ಕಾರ ಮತ್ತು ಅಧಿಕಾರಿಗಳ ಕಾರ್ಯವೈಖರಿಗೆ ಅತೃಪ್ತಿ ವ್ಯಕ್ತಪಡಿಸಿತು. 

ಸಂಪುಟ ವಿಸ್ತರಣೆ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಣಯ: ಸಿಎಂ ಬೊಮ್ಮಾಯಿ

ವಿಚಾರಣೆ ವೇಳೆ ಸರ್ಕಾರ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ 2019-20 ಮತ್ತು 2020-21ನೇ ಶಾಲಿನಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಕೇವಲ ಒಂದು ಜೊತೆ ಸಮವಸ್ತ್ರ ಕೊಟ್ಟಿದ್ದು, ಎರಡನೇ ಜೊತೆ ಖರೀದಿಗೆ ಶಾಲಾ ಮುಖ್ಯಸ್ಥರ ಎಸ್‌ಡಿಎಂಸಿ ಖಾತೆಗೆ ಹಣ ವರ್ಗಾಯಿಸಿರುವ ಅಂಶ ತಿಳಿದು ಬಂದಿತು. ಇದರಿಂದ ಗರಂ ಆದ ನ್ಯಾಯಮೂರ್ತಿ ವೀರಪ್ಪ ಅವರು, ಸರ್ಕಾರ ಎರಡು ಜೊತೆ ಸಮವಸ್ತ್ರಕ್ಕೆ ಹಣ ಕಳುಹಿಸಿರುವುದಾಗಿ ಹೇಳುತ್ತಿದೆ. ಆದರೆ, ಇಲ್ಲಿ ಒಂದು ಜೊತೆಗೆ ಮಾತ್ರ ಇದೆ. ಬಹುಶಃ ಒಂದು ಜತೆಯಲ್ಲಿ ಒಂದು ಬಟ್ಟೆಯಿರುವುದಿಲ್ಲ. ಮೇಲಿನದ್ದು ಇದ್ದರೆ, ಕೆಳಗಿನದ್ದು ಇರುವುದಿಲ್ಲ. 

ಒಂದು ಕಾಲುಚೀಲ ಮತ್ತು ಒಂದು ಶೂಗೆ ಹಣ ಕಳುಹಿಸಿರಬೇಕು. ಫಲಾನುಭವಿ ಮಕ್ಕಳಿಗೆ ಸಮವಸ್ತ್ರ, ಶೂ-ಕಾಲು ಚೀಲ ಸಿಕ್ಕಿದೆಯೇ ಎಂಬುದು ದೇವರಿಗೆ ಮಾತ್ರ ಗೊತ್ತು ಎಂದು ವ್ಯಂಗ್ಯವಾಗಿ ನುಡಿದರಲ್ಲದೆ, ಸರಿಯಾದ ರೀತಿಯಲ್ಲಿ ಏಕೆ ಸಮವಸ್ತ್ರ ನೀಡಿಲ್ಲ? ಸಮವಸ್ತ್ರ, ಶೂ-ಕಾಲುಚೀಲ ವಿತರಣೆ ಹೊಣೆ ಹೊತ್ತಿರುವ ಅಧಿಕಾರಿ ಯಾರು ಎಂಬುದನ್ನು ತಿಳಿಸಿ. ನ್ಯಾಯಾಲಯ ಅವರ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ನಿಗದಿ ಮಾಡುತ್ತದೆ ಎಂದು ಸರ್ಕಾರಿ ವಕೀಲರಿಗೆ ಸೂಚಿಸಿತು. ಒಂದು ಬಾರಿ ಮಕ್ಕಳ ಮನಸ್ಸು ಹಾಳಾದರೆ ಜೀವನಪೂರ್ತಿ ಅವರು ಯಾತನೆಗೆ ಸಿಲುಕುತ್ತಾರೆ. 

ಕೊಡುವುದಾದರೆ ಸೂಕ್ತ ರೀತಿಯಲ್ಲಿ ಸಮವಸ್ತ್ರ ಕೊಡಿ. ಇಲ್ಲವಾದರೆ ಬೇಡ. ಪೂರ್ತಿಯಾಗಿ ಸಾಯಿಸಿಬಿಡಿ. ಅರ್ಧಂಬರ್ಧ ಸಾಯಿಸಬೇಡಿ. ಅಧಿಕಾರಿಗಳಿಗೆ ಸರ್ಕಾರಿ ಶಾಲಾ ಮಕ್ಕಳ ಬಗ್ಗೆ ಮಾನವೀಯತೆ ಇಲ್ಲದಿರುವುದೇ ಸಮಸ್ಯೆ ಮೂಲ. ಅವರ ಮಕ್ಕಳು ಸರ್ಕಾರಿ ಶಾಲೆಗೆ ಹೋಗುವುದಿಲ್ಲ. ಅಧಿಕಾರಿಗಳ ಮಕ್ಕಳು ಖಾಸಗಿ ಶಾಲೆಗೆ ಕಾರಿನಲ್ಲಿ ಹೋಗಿ, ಬರುತ್ತಾರೆ. ಮಕ್ಕಳ ವಿಚಾರದಲ್ಲಿ ಮಲತಾಯಿ ಧೋರಣೆಯನ್ನು ಸಹಿಸುವುದಿಲ್ಲ ಎಂದು ನ್ಯಾಯಮೂರ್ತಿ ಕಟುವಾಗಿ ನುಡಿದರು. ಸರ್ಕಾರ ಏನೇನಕ್ಕೋ ಕೋಟಿಗಟ್ಟಲೇ ಖರ್ಚು ಮಾಡುತ್ತದೆ. ಮಕ್ಕಳ ಹಕ್ಕು, ಶಿಕ್ಷಣ ವಿಚಾರದಲ್ಲಿ ಸರ್ಕಾರ ತನ್ನ ಸಾಂವಿಧಾನಿಕ ಹೊಣೆಗಾರಿಕೆಯನ್ನು ನಿರ್ವಹಿಸಬೇಕಲ್ಲವೇ ಎಂದು ನ್ಯಾಯಪೀಠ ಪ್ರಶ್ನಿಸಿತು. 

13 ವರ್ಷಗಳ ಹೋರಾಟದ ಫಲ: ಸಿಎಂ ಬೊಮ್ಮಾಯಿ ಅವರಿಂದ ಇಂದು ವಿಷ್ಣು ಸ್ಮಾರಕ ಉದ್ಘಾಟನೆ

ಸಂಬಂಧಪಟ್ಟ ಅಧಿಕಾರಿಗಳಿಗೆ ಮಾನ-ಮರ್ಯಾದೆ ಇದ್ದರೆ, ಆತ್ಮಸಾಕ್ಷಿ ಇದ್ದರೆ ಕೂಡಲೇ ಮಕ್ಕಳಿಗೆ ಸಮವಸ್ತ್ರ, ಶೂ ಹಾಗೂ ಕಾಲು ಚೀಲ ವಿತರಿಸಬೇಕು. ಅಂತಿಮವಾಗಿ ಎರಡು ವಾರ ಕಾಲಾವಕಾಶ ನೀಡಲಾಗುವುದು. ಅಷ್ಟರಲ್ಲಿ ಹೈಕೋರ್ಟ್‌ ಹೊರಡಿಸಿರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ಕಲ್ಪಿಸಬೇಕು. ಇಲ್ಲವಾದರೆ ಸಂಬಂಧಿತ ಅಧಿಕಾರಿಯ ವಿರುದ್ಧ ಆರೋಪ ನಿಗದಿ ಮಾಡಲಾಗುತ್ತದೆ. ಅಂದು ಅವರು ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ತಿಳಿಸಿ ವಿಚಾರಣೆ ಮುಂದೂಡಿತು.