ಮದುವೆ ವಂಚನೆ ಆರೋಪ ಎದುರಿಸುತ್ತಿರುವ ಎಸ್‌ಐ ಬದಲಿಗೆ ಅವರ ಅಮಾಯಕ ಸಹೋದರನನ್ನು ಬಂಧಿಸಿದ ಚಿತ್ರದುರ್ಗ ಮಹಿಳಾ ಪೊಲೀಸರ ಕ್ರಮಕ್ಕೆ ಹೈಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕಾನೂನುಬಾಹಿರವಾಗಿ ನಡೆದುಕೊಂಡ ಇನ್ಸ್‌ಪೆಕ್ಟರ್ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿದ್ದು, ಪೊಲೀಸರ ಕಾರ್ಯವೈಖರಿಯನ್ನು ತೀವ್ರವಾಗಿ ಖಂಡಿಸಿದೆ.

ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚಿಸಿದ ಆರೋಪ ಎದುರಿಸುತ್ತಿರುವ ಪ್ರೊಬೆಷನರಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ (ಎಸ್‌ಐ) ಬದಲಿಗೆ, ಯಾವುದೇ ತಪ್ಪು ಮಾಡದ ಅವರ ಸಹೋದರನನ್ನು ಬಂಧಿಸಿದ ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಯ ಕ್ರಮಕ್ಕೆ ಹೈಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. "ಮೈಮೇಲೆ ಖಾಕಿ ಸಮವಸ್ತ್ರವಿದೆ ಎಂದು ಏನು ಬೇಕಾದರೂ ಮಾಡುತ್ತೀರಾ? ವಿನಾಕಾರಣ ಜನರನ್ನು ಬಂಧಿಸುವುದು ಪೊಲೀಸರಿಗೆ ಒಂದು ಆಟವಾಗಿದೆಯೇ?" ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ಪೊಲೀಸರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾನೂನು ಬಾಹಿರವಾಗಿ ನಡೆದುಕೊಂಡ ಪೊಲೀಸ್ ಇಲಾಖೆ

ದಾವಣಗೆರೆಯ ಎನ್. ದರ್ಶನ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಕಾನೂನು ಬಾಹಿರವಾಗಿ ನಡೆದುಕೊಂಡ ಪೊಲೀಸ್ ಇಲಾಖೆಯ ಕಾರ್ಯವೈಖರಿಯನ್ನು ಖಂಡಿಸಿತಲ್ಲದೆ, ಜವಾಬ್ದಾರಿಯುತ ಅಧಿಕಾರಿಯ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಿದೆ.

"ಬಂಧನದ ನಂತರದ ಜೀವನದ ಅರಿವು ನಿಮಗಿದೆಯೇ?" – ನ್ಯಾಯಾಲಯದ ಖಡಕ್ ಪ್ರಶ್ನೆ ವಿಚಾರಣೆಯ ಸಂದರ್ಭದಲ್ಲಿ ಪೊಲೀಸರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, "ಪ್ರಕರಣದಲ್ಲಿ ಮುಖ್ಯ ಆರೋಪಿಯನ್ನು ಬಿಟ್ಟು, ಯಾವುದೇ ತಪ್ಪು ಮಾಡದ ಆತನ ಸಹೋದರನನ್ನು ಬಂಧಿಸಿದ್ದು ಏಕೆ? ಇಂತಹ ಅನಗತ್ಯ ಬಂಧನದಿಂದಾಗಿ ಆ ವ್ಯಕ್ತಿಯ ಜೀವನ ಮತ್ತು ಘನತೆಯ ಮೇಲಾಗುವ ಸಾಮಾಜಿಕ ಪರಿಣಾಮಗಳ ಬಗ್ಗೆ ಪೊಲೀಸರಿಗೆ ಕಿಂಚಿತ್ತಾದರೂ ಅರಿವಿದೆಯೇ?" ಎಂದು ಪ್ರಶ್ನಿಸಿದರು.

ಪೀಠ ಖಡಕ್ ಎಚ್ಚರಿಕೆ

"ಬಂಧನ ಅತ್ಯಗತ್ಯವಾಗಿರುವ ಗಂಭೀರ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸದ ಪೊಲೀಸರು, ಇಲ್ಲಿ ವಿನಾಕಾರಣ ಅಮಾಯಕರನ್ನು ಸೆರೆಮನೆಗೆ ತಳ್ಳುತ್ತಿದ್ದಾರೆ. ಕಾನೂನು ಉಲ್ಲಂಘಿಸಿ ಕಾರ್ಯನಿರ್ವಹಿಸುವ ಇಂತಹ ಪೊಲೀಸರನ್ನು ಕೇವಲ ವರ್ಗಾವಣೆ ಮಾಡುವುದಲ್ಲ, ನೇರವಾಗಿ ಅಮಾನತುಗೊಳಿಸಿ ಇಲಾಖಾ ತನಿಖೆಗೆ ಒಳಪಡಿಸಬೇಕಾಗುತ್ತದೆ" ಎಂದು ಪೀಠವು ಖಡಕ್ ಎಚ್ಚರಿಕೆ ನೀಡಿದೆ.

ಇನ್ಸ್‌ಪೆಕ್ಟರ್ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶ ಈ ಹಿಂದೆ ನಡೆದ ವಿಚಾರಣೆಯ ವೇಳೆ ಹೈಕೋರ್ಟ್ ಹೊರಡಿಸಿದ್ದ ನಿರ್ದೇಶನದಂತೆ ಚಿತ್ರದುರ್ಗ ಮಹಿಳಾ ಠಾಣೆಯ ಪೊಲೀಸರು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಿದ್ದರು. ಈ ವೇಳೆ ಘಟನೆಯ ಸಂಪೂರ್ಣ ವಿವರ ಪಡೆದ ನ್ಯಾಯಪೀಠವು, ಮುಖ್ಯ ಆರೋಪಿಯನ್ನು ಬಿಟ್ಟು ಆತನ ಸಹೋದರನನ್ನು ಬಂಧಿಸಿದ ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವಿರುದ್ಧ ತಕ್ಷಣವೇ ಇಲಾಖಾ ವಿಚಾರಣೆ (Departmental Enquiry) ನಡೆಸಬೇಕು ಎಂದು ಆದೇಶಿಸಿದೆ. ಅಲ್ಲದೆ, ಇಂತಹ ಕಾನೂನುಬಾಹಿರ ಬಂಧನಗಳಿಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳು ಕೂಡ ಸುಲಭವಾಗಿ ಅವಕಾಶ ನೀಡಬಾರದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ ಏನು?

ಪ್ರೊಬೇಷನರಿ ಸಬ್‌ಇನ್‌ಸ್ಪೆಕ್ಟರ್ ಒಬ್ಬರು ಯುವತಿಯೊಬ್ಬಳಿಗೆ ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಆರೋಪ ಎದುರಿಸುತ್ತಿದ್ದರು. ಈ ಸಂಬಂಧ ಚಿತ್ರದುರ್ಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಪೊಲೀಸರು ಮುಖ್ಯ ಆರೋಪಿಯಾದ ಎಸ್‌ಐ ಅವರನ್ನು ಬಂಧಿಸುವ ಬದಲಿಗೆ, ಪ್ರಕರಣದಲ್ಲಿ ಯಾವುದೇ ನೇರ ಸಂಬಂಧವಿಲ್ಲದ ಅವರ ಸಹೋದರ ದರ್ಶನ್ ಎಂಬುವರನ್ನು ಬಂಧಿಸಿದ್ದರು. ಇದನ್ನು ಪ್ರಶ್ನಿಸಿ ಸಂತ್ರಸ್ತ ಕುಟುಂಬಸ್ಥರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಸದ್ಯ ಪೊಲೀಸರಿಗೆ ಚಾಟಿ ಬೀಸಿರುವ ಹೈಕೋರ್ಟ್ ಪೀಠವು, ಇನ್ಸ್‌ಪೆಕ್ಟರ್ ವಿರುದ್ಧ ತನಿಖೆಗೆ ಆದೇಶಿಸಿ ಮುಂದಿನ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿದೆ.