ಕಾಂಗ್ರೆಸ್‌ ಟ್ವೀಟರ್‌ ಖಾತೆ ನಿಷೇಧ ರದ್ದು: ಕೆಜಿಎಫ್‌ ಹಾಡು ತೆಗೆಯಲು ಕಾಂಗ್ರೆಸ್‌ಗೆ ಹೈಕೋರ್ಟ್‌ ಸೂಚನೆ

‘ಕೆಜಿಎಫ್‌-2’ ಚಿತ್ರದ ಹಾಡಿನ ಸಂಗೀತ ಬಳಸಿಕೊಂಡಿರುವ ಹಿನ್ನೆಲೆಯಲ್ಲಿ ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ (ಐಎನ್‌ಸಿ) ಮತ್ತು ಭಾರತ್‌ ಜೋಡೋ ಯಾತ್ರೆಯ ಅಧಿಕೃತ ಖಾತೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವಂತೆ ಟ್ವೀಟರ್‌ಗೆ ನಿರ್ದೇಶಿಸಿ ನಗರದ ವಾಣಿಜ್ಯ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ ಮಂಗಳವಾರ ರದ್ದುಪಡಿಸಿದೆ. 

Karnataka High Court sets aside commercial court order blocking Twitter handles of Congress Bharat Jodo Yatra gvd

ಬೆಂಗಳೂರು (ನ.09): ‘ಕೆಜಿಎಫ್‌-2’ ಚಿತ್ರದ ಹಾಡಿನ ಸಂಗೀತ ಬಳಸಿಕೊಂಡಿರುವ ಹಿನ್ನೆಲೆಯಲ್ಲಿ ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ (ಐಎನ್‌ಸಿ) ಮತ್ತು ಭಾರತ್‌ ಜೋಡೋ ಯಾತ್ರೆಯ ಅಧಿಕೃತ ಖಾತೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವಂತೆ ಟ್ವೀಟರ್‌ಗೆ ನಿರ್ದೇಶಿಸಿ ನಗರದ ವಾಣಿಜ್ಯ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ ಮಂಗಳವಾರ ರದ್ದುಪಡಿಸಿದೆ. ವಾಣಿಜ್ಯ ನ್ಯಾಯಾಲಯದ ಆದೇಶ ರದ್ದು ಕೋರಿ ಐಎನ್‌ಸಿ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್‌ ಫ್ಲಾಟ್‌ಫಾರ್ಮ್‌ ಮುಖ್ಯಸ್ಥೆ ಸುಪ್ರಿಯಾ ಶ್ರೀನೇತ್‌ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ನರೇಂದರ್‌ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಭಾರತ್‌ ಜೋಡೋ ಯಾತ್ರೆ ಪ್ರಚಾರದಲ್ಲಿ ಬಳಸಿಕೊಂಡಿರುವ ಕೆಜಿಎಫ್‌-2 ಚಿತ್ರದ ಹಾಡು (ಸೌಂಡ್‌ ರೆಕಾರ್ಡ್‌) ತೆಗೆಯುವುದಾಗಿ ಮೇಲ್ಮನವಿದಾರರ ಪರ ವಕೀಲರು ಮುಚ್ಚಳಿಕೆ ನೀಡಿರುವ ಹಿನ್ನೆಲೆಯಲ್ಲಿ ಹೈಕೋರ್ಟ್‌ ಈ ಆದೇಶ ಮಾಡಿದೆ. ಮುಚ್ಚಳಿಕೆ ಪರಿಗಣಿಸಿದ ನ್ಯಾಯಪೀಠ, ಮೇಲ್ಮನವಿದಾರರು ತಮ್ಮ ಟ್ವೀಟರ್‌ ಖಾತೆಯಿಂದ ವಿವಾದಿತ ಹಾಡು ತೆಗೆಯಲು ಒಪ್ಪಿದ್ದಾರೆ. ಇದರಿಂದ ಐಎನ್‌ಸಿ ಮತ್ತು ಭಾರತ್‌ ಜೋಡೋದ ಟ್ವೀಟರ್‌ ಖಾತೆಯ ಮೇಲಿನ ನಿರ್ಬಂಧವನ್ನು ತೆರವುಗೊಳಿಸಬೇಕು. ಮೇಲ್ಮನವಿದಾರರು ಬಳಕೆ ಮಾಡಿರುವ ಹಾಡನ್ನು ತಮ್ಮ ಎಲ್ಲ ಸಾಮಾಜಿಕ ಜಾಲತಾಣಗಳಿಂದ ತೆಗೆಯಬೇಕು ಎಂದು ನಿರ್ದೇಶಿಸಿತು.

ಕೈ ಬರಹದ ಪೊಲೀಸ್‌ ದಾಖಲೆ ಇನ್ನು ಸ್ವೀಕರಿಸಲ್ಲ: ಹೈಕೋರ್ಟ್‌

ವಿಚಾರಣೆ ವೇಳೆ ಮೇಲ್ಮನವಿದಾರರ ಪರ ಹಿರಿಯ ನ್ಯಾಯವಾದಿ ಅಭಿಷೇಕ್‌ ಮನು ಸಿಂಘ್ವಿ ವಾದ ಮಂಡಿಸಿ, ಮೇಲ್ಮನವಿದಾರರಿಗೆ ನೋಟಿಸ್‌ ನೀಡದೆಯೇ ಏಕಾಏಕಿ ಒಂದು ಪ್ರಮುಖ ರಾಜಕೀಯ ಪಕ್ಷದ ಸಾಮಾಜಿಕ ಜಾಲತಾಣದ ಟ್ವೀಟರ್‌ ಖಾತೆ ನಿರ್ಬಂಧಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಆಗಲಿದೆ. ಅದರಲ್ಲೂ ಭಾರತ ಜೋಡೋ ಯಾತ್ರೆ ನಡೆಯುವ ಸಂದರ್ಭದಲ್ಲಿ ಈ ಆದೇಶ ಮಾಡಲಾಗಿದೆ. ಹಾಡನ್ನು ಪ್ರಚಾರಕ್ಕೆ ಬಳಸಲಾಗಿದೆಯೇ ಹೊರತು ವಾಣಿಜ್ಯ ಉದ್ದೇಶಕ್ಕೆ ಅಲ್ಲ. ಬುಧವಾರ ಮಧ್ಯಾಹ್ನ 12 ಗಂಟೆಯೊಳಗೆ ಕೆಜಿಎಫ್‌ 2 ಹಾಡನ್ನು ಟ್ವೀಟರ್‌ ಸೇರಿದಂತೆ ಕಾಂಗ್ರೆಸ್‌ನ ಎಲ್ಲ ಸಾಮಾಜಿಕ ಜಾಲತಾಣದಲ್ಲಿ ತೆಗೆಯಲಾಗುವುದು. ಅದರ ಸ್ಕ್ರೀನ್‌ ಶಾಟ್‌ಗಳನ್ನು ಮೂಲ ದಾವೆದಾರರಾದ ಎಂಆರ್‌ಟಿ ಮ್ಯೂಸಿಕ್‌ ಸಂಸ್ಥೆಗೆ ದಾಖಲೆ ಒದಗಿಸುತ್ತೇವೆ ಎಂದು ತಿಳಿಸಿದರು.

ಗೂಗಲ್‌ ರಿವ್ಯೂ ಕಾನೂನುಬದ್ಧ ಸಾಕ್ಷ್ಯ ಅಲ್ಲ: ಹೈಕೋರ್ಟ್‌

ಪ್ರಕರಣದ ಹಿನ್ನೆಲೆ: ಕೆಜಿಎಫ್‌-2 ಚಿತ್ರದ ಹಾಡಿನ ಸಂಗೀತ (ಸೌಂಡ್‌ ರೆಕಾರ್ಡ್‌) ಬಳಸಿಕೊಂಡಿರುವ ಹಿನ್ನೆಲೆಯಲ್ಲಿ ಐಎನ್‌ಸಿ ಮತ್ತು ಭಾರತ್‌ ಜೋಡೋ ಯಾತ್ರೆಯ ಅಧಿಕೃತ ಟ್ವೀಟರ್‌ ಖಾತೆಯನ್ನು ನ.21ರವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಲು ನಗರದ 86ನೇ ವಾಣಿಜ್ಯ ನ್ಯಾಯಾಲಯ ನ.7 (ಸೋಮವಾರ) ಮಧ್ಯಂತರ ಆದೇಶ ಮಾಡಿತು. ಈ ಕುರಿತು ಕೆಜಿಎಫ್‌-2 ಚಿತ್ರದ ಸಂಗೀತದ ಹಕ್ಕು ಸ್ವಾಮ್ಯ ಪಡೆದುಕೊಂಡಿರುವ ಎಂಆರ್‌ಟಿ ಮ್ಯೂಸಿಕ್‌ ಕಂಪನಿ ದಾವೆ ದಾಖಲಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.

Latest Videos
Follow Us:
Download App:
  • android
  • ios