ಬೆಂಗಳೂರಲ್ಲಿ ಸ್ಕೂಟರ್‌ಗೆ ಕಾರು ಡಿಕ್ಕಿ ಹೊಡೆದ ಟೆಕ್ಕಿಯ ರೋಡ್ ರೇಜ್ ಪ್ರಕರಣ. ಕೊಲೆ ಯತ್ನ FIR ರದ್ದು ಕೋರಿದ್ದ ಅರ್ಜಿಗೆ ಹೈಕೋರ್ಟ್ ಹೇಳಿದ್ದೇನು? ಪೂರ್ಣ ವಿವರ ತಿಳಿಯಲು ಕ್ಲಿಕ್ ಮಾಡಿ.

ಬೆಂಗಳೂರು (ಏ.7): ಮಗುವಿನೊಂದಿಗೆ ದಂಪತಿ ಸಂಚರಿಸುತ್ತಿದ್ದ ಸ್ಕೂಟರ್‌ಗೆ ಅಜಾಕರೂತೆಯಿಂದ ಕಾರು ಚಲಾಯಿಸಿ ಡಿಕ್ಕಿ ಹೊಡೆದ ಕಾರು ಮಾಲೀಕ ಸಾಫ್ಟ್‌ವೇರ್‌ ಎಂಜಿನಿಯರ್‌ಗೆ ಚಾಟಿ ಬೀಸಿರುವ ಹೈಕೋರ್ಟ್‌, ನಿರ್ಲಕ್ಷ್ಯದ ಚಾಲನೆಗೆ, ರಸ್ತೆ ರಂಪಾಟಕ್ಕೆ (ರೋಡ್‌ ರೇಜ್‌) ಕ್ಷಮೆಯೇ ಇಲ್ಲ ಎಂದು ನುಡಿದಿದೆ.

Add Asianetnews Kannada as a Preferred SourcegooglePreferred

ಕೊಲೆ ಯತ್ನ ಅಪರಾಧ ಸಂಬಂಧ ತಮ್ಮ ವಿರುದ್ಧ ಸದಾಶಿವನಗರ ಠಾಣೆಯ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ಕೊಡಿಗೆಹಳ್ಳಿ ನಿವಾಸಿ ಸುಕೃತ್‌ ಕೇಶವ್‌ ಗೌಡ ಸಲ್ಲಿಸಿದ್ದ ಅರ್ಜಿ ಇತ್ಯರ್ಥಪಡಿಸಿದ ವೇಳೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಹಾಜರಾಗಿ, ಇದು ರೋಡ್‌ ರೇಜ್‌ (ರಸ್ತೆ ರಂಪಾಟ) ಅಪಘಾತ. ಯಾವುದೇ ಹೇಳಿಕೆ ಇಲ್ಲದೇ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ. ಅರ್ಜಿದಾರರಿಗೆ ಅಂತಹ ಯಾವುದೇ ದುರುದ್ದೇಶವಿರಲಿಲ್ಲ ಎಂದು ತಿಳಿಸಿದರು.

ಆಗ ನ್ಯಾಯಪೀಠ, ಮೊದಲು ಪೊಲೀಸರು ಬಿಎನ್‌ಎಸ್‌ ಸೆಕ್ಷನ್‌ 109 ಅಡಿಯಲ್ಲಿ ಕೊಲೆಯತ್ನ ಅಪರಾಧ ಸಂಬಂಧ ಎಫ್‌ಐಆರ್‌ ದಾಖಲಿಸಿರಲಿಲ್ಲ. ನಂತರ ಆ ಮೇಲೆ ಸಕ್ಷಮ ನ್ಯಾಯಾಲಯದ ಅನುಮತಿ ಪಡೆದು ಪೊಲೀಸರು ಸರಿಯಾಗಿ ಪ್ರಕರಣ ದಾಖಲಿಸಿದ್ದಾರೆ ಎಂದು ನುಡಿಯಿತು.

ಬೆಂಗಳೂರು ಸಂಚಾರ ದಟ್ಟಣೆ ತಾಳ್ಮೆ ಕಲಿಸಲಿದೆ. ಆದರೆ, ಅರ್ಜಿದಾರರಿಗೆ ತಾಳ್ಮೆ ಇಲ್ಲವಲ್ಲ. ರೋಡ್‌ ರೇಜ್‌ಗೆ ಕ್ಷಮೆಯೇ ಇಲ್ಲ ಎಂದು ನುಡಿದ ಪೀಠ, ದೋಷಾರೋಪ ಪಟ್ಟಿ ಸಲ್ಲಿಕೆಯಾದ ನಂತರ ಅದನ್ನು ಪ್ರಶ್ನಿಸುವ ಆ ಸ್ವಾತಂತ್ರ್ಯವನ್ನು ಅರ್ಜಿದಾರರಿಗೆ ಕಾಯ್ದಿರಿಸಿ ಅರ್ಜಿ ಇತ್ಯರ್ಥಪಡಿತು.