ರಾಜ್ಯ ಹೈಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳನ್ನು ದೇಶದ ಇತರೆ ಹೈಕೋರ್ಟ್‌ಗಳಿಗೆ ವರ್ಗಾವಣೆ ಮಾಡಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ. 

ಬೆಂಗಳೂರು (ಏ.22): ರಾಜ್ಯ ಹೈಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳನ್ನು ದೇಶದ ಇತರೆ ಹೈಕೋರ್ಟ್‌ಗಳಿಗೆ ವರ್ಗಾವಣೆ ಮಾಡಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ. ಹೈಕೋರ್ಟ್‌ ಹಿರಿಯ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್ ಅವರನ್ನು ಒಡಿಶಾ, ನ್ಯಾಯಮೂರ್ತಿ ಕೆ.ನಟರಾಜನ್ ಅವರನ್ನು ಕೇರಳ, ನ್ಯಾಯಮೂರ್ತಿ ಎನ್.ಎಸ್.ಸಂಜಯ್ ಗೌಡ ಅವರನ್ನು ಗುಜರಾತ್ ಮತ್ತು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರನ್ನು ಮದ್ರಾಸ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ.

ಜೊತೆಗೆ, ತೆಲಂಗಾಣ ಹೈಕೋರ್ಟ್‌ ನ್ಯಾಯಮೂರ್ತಿ ಪೆರುಗು ಶ್ರೀಸುಧಾ ಮತ್ತು ಆಂಧ್ರ ಪ್ರದೇಶದ ಹೈಕೋರ್ಟ್‌ ನ್ಯಾಯಮೂರ್ತಿ ಡಾ.ಕುಂಭಜಡಲ ಮನ್ಮಥ ರಾವ್ ಅವರನ್ನು ಕರ್ನಾಟಕ ಹೈಕೋರ್ಟ್‌ಗೆ ಹಾಗೂ ತೆಲಂಗಾಣದ ನ್ಯಾಯಮೂರ್ತಿ ಕಸೊಜು ಸುರೇಂದರ್ (ಕೆ.ಸುರೇಂದರ್‌) ಅವರನ್ನು ಮದ್ರಾಸ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಲು ಇದೇ ವೇಳೆ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಶಿಫಾರಸು ಮಾಡಿದೆ. ಉನ್ನತ ನ್ಯಾಯಾಲಯಗಳಲ್ಲಿ ವೈವಿಧ್ಯತೆ ತುಂಬುವ ಮತ್ತು ನ್ಯಾಯದಾನ ಆಡಳಿತದ ಗುಣಮಟ್ಟ ಬಲಪಡಿಸುವ ಉದ್ದೇಶದಿಂದ ಹೈಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳ ವರ್ಗಾವಣೆಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ತನ್ನ ಶಿಫಾರಸು ನಿರ್ಣಯದಲ್ಲಿ ಸುಪ್ರೀಂ ಕೋರ್ಟ್‌ ತಿಳಿಸಿದೆ.

ಮಲ್ಲೇಶ್ವರ ಬಾಂಬ್‌ ಬ್ಲಾಸ್ಟ್‌: ರಾಜ್ಯ ಸರ್ಕಾರದ ಆದೇಶ ರದ್ದತಿಗೆ ಸಲ್ಲಿಸಿದ್ದಆರೋಪಿಗಳ ಅರ್ಜಿ ವಜಾ

ಅರ್ಕಾವತಿ ನದಿ ಮಾಲಿನ್ಯ ತಡೆಗೆ ಹೈಕೋರ್ಟ್‌ 8 ವಾರ ಗಡುವು: ಕಾರ್ಖಾನೆ ಹಾಗೂ ವಸತಿ ಕಟ್ಟಡಗಳಿಂದ ಅರ್ಕಾವತಿ ನದಿ ಜಲಾಯನ ಪ್ರದೇಶದಲ್ಲಿ ಉಂಟಾಗುತ್ತಿರುವ ಮಾಲಿನ್ಯವನ್ನು ತಡೆಯಲು ಎಂಟು ವಾರಗಳಲ್ಲಿ ಕ್ರಮ ಜರುಗಿಸಬೇಕು ಎಂದು ರಾಜ್ಯ ಸರ್ಕಾರ ಮತ್ತು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಕೆಎಸ್‌ಪಿಸಿಬಿ) ಹೈಕೋರ್ಟ್‌ ನಿರ್ದೇಶಿಸಿದೆ. ಅರ್ಕಾವತಿ ನದಿಯ ಮಾಲಿನ್ಯ ತಡೆಯಲು ಮತ್ತು ನದಿಯ ಜಲಾಯನ ಪ್ರದೇಶದಿಂದ ಬಫರ್ ವಲಯದ ರಕ್ಷಣೆ ಮಾಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ವಕೀಲ ಎನ್‌.ಕಿರಣ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ. 

ಅರ್ಜಿದಾರರು ತಮ್ಮ ಕೋರಿಕೆಗಳ ಕುರಿತು ಮೂರು ವಾರಗಳಲ್ಲಿ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಬೇಕು. ಮನವಿ ಸಲ್ಲಿಸಿದ ಎಂಟು ವಾರಗಳಲ್ಲಿ ಅರ್ಕಾವತಿ ನದಿ ಮಾಲಿನ್ಯದ ತಡೆಗೆ ಸರ್ಕಾರ ಕ್ರಮ ಜರುಗಿಸಬೇಕು. ನದಿಯನ್ನು ಮಾಲಿನ್ಯಗೊಳಿಸುತ್ತಿರುವ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ನದಿಯ ಬಫರ್ ವಲಯದಲ್ಲಿ ನಡೆದಿರುವ ಒತ್ತುವರಿ ತೆರವುಗೊಳಿಸಬೇಕು. ಒತ್ತುವರಿದಾರರ ವಿರುದ್ಧ ಕಾನೂನು ಪ್ರಕಾರ ಅಗತ್ಯ ಕ್ರಮ ಜರುಗಿಸಬೇಕು ಎಂದು ನಿರ್ದೇಶನ ನೀಡಿದೆ.

ಹೃದಯವೇ ಬೆಳೆದಿರಲಿಲ್ಲ, 2ನೇ ಕೂಸನ್ನೂ ತೆಗೆಸಿಬಿಟ್ವಿ: ಗರ್ಭಪಾತಕ್ಕೆ ವೈದ್ಯರ ಸಲಹೆ

ಅರ್ಜಿದಾರರ ಮನವಿ ವಿವರ: ಅರ್ಕಾವತಿ ನದಿಯ ಜಲಾಯನ ಪ್ರದೇಶದ ಒಂದು ಕಿಲೋ ಮೀಟರ್‌ ಸುತ್ತಳತೆಯಲ್ಲಿ ಬಫರ್‌ ವಲಯದ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಬಫರ್‌ ವಲಯದಲ್ಲಿ ಯಾವುದೇ ವಸತಿ ಕಟ್ಟಡ ಅಥವಾ ಕೈಗಾರಿಕೆ ನಿರ್ಮಾಣ ಮಾಡಲು ಅನುಮತಿ ನೀಡಬಾರದು. ನದಿಯ ಸಂರಕ್ಷಣೆ ಮತ್ತು ನಿರ್ವಹಣೆಗೆ ಶಾಸನಬದ್ಧ ಪ್ರಾಧಿಕಾರ ರಚನೆ ಮಾಡಬೇಕು. ಅರ್ಕಾವತಿ ನದಿ ಜಲಾಶಯನ ಪ್ರದೇಶದಲ್ಲಿ ಆಗಿರುವ ಒತ್ತುವರಿ ಮತ್ತು ಅದರ ತೆರವಿಗೆ ಸಂಬಂಧಿಸಿದಂತೆ ಸಮಗ್ರ ವರದಿ ಸಲ್ಲಿಸಬೇಕು. ನದಿಗೆ ನಿರ್ಮಿಸಲಾಗಿರುವ ಚಾಮರಾಜಸಾಗರ ಮತ್ತು ಮಂಚನ ಬೆಲೆ ಜಲಾಶಯದಲ್ಲಿ ನೀರು, ಡೆಡ್ಡ್‌ ಸ್ಟೋರೇಜ್‌ ಮತ್ತು ಹೂಳಿನ ಮಟ್ಟದ ಬಗ್ಗೆ ವರದಿ ಸಲ್ಲಿಸಲು ರಾಜ್ಯ ಸರ್ಕಾರ, ಕೆಎಸ್‌ಪಿಸಿಬಿ, ಜಲಸಂಪನ್ಮೂಲ ಇಲಾಖೆ, ರಾಮನಗರ ಜಿಲ್ಲಾಡಳಿತ ಮತ್ತು ಬೆಂಗಳೂರು ಜಲಮಂಡಳಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.