ಬೆಂಗಳೂರು [ಜ.05]:  ರಾಜ್ಯ ಸರ್ಕಾರಕ್ಕೆ ಸಂಸದೀಯ ಕಾರ್ಯದರ್ಶಿಗಳನ್ನು ನೇಮಕ ಮಾಡಿಕೊಳ್ಳಲು ಅವಕಾಶ ನೀಡುತ್ತಿದ್ದ ‘ಕರ್ನಾಟಕ ಸಂಸದೀಯ ಕಾರ್ಯದರ್ಶಿಗಳ (ವೇತನ-ಭತ್ಯೆ) ಕಾಯ್ದೆ-1963’ ಹಾಗೂ 1999ರ ತಿದ್ದುಪಡಿ ಕಾಯ್ದೆಯನ್ನು ಹೈಕೋರ್ಟ್‌ ಅಸಿಂಧುಗೊಳಿಸಿ ಮಹತ್ವದ ತೀರ್ಪು ನೀಡಿದೆ. ಈ ತೀರ್ಪಿನಿಂದಾಗಿ ಸಚಿವ ಸ್ಥಾನ ವಂಚಿತರಾದ ಜನಪ್ರತಿನಿಧಿಗಳಿಗೆ ಕ್ಯಾಬಿನೆಟ್‌ ದರ್ಜೆಯ ಹುದ್ದೆ ನೀಡಲು ರಾಜಕೀಯ ಪಕ್ಷಗಳಿಗೆ ಲಭ್ಯವಿದ್ದ ಒಳಮಾರ್ಗವೊಂದು ಕೈತಪ್ಪಿದಂತಾಗಿದೆ.

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಸರ್ಕಾರದ ಅವಧಿಯಲ್ಲಿ ರಾಜಕೀಯ ಕಾರ್ಯದರ್ಶಿಗಳನ್ನು ನೇಮಕ ಮಾಡಿದ್ದ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಬೆಂಗಳೂರಿನ ನಿವಾಸಿ ಎಂ.ಬಿ. ಆದಿನಾರಾಯಣ ಹಾಗೂ ವಕೀಲ ಕೆ.ಬಿ. ವಿಜಯಕುಮಾರ್‌ ಸಲ್ಲಿಸಿದ್ದ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಹಾಗೂ ನ್ಯಾ.ಎಸ್‌.ಆರ್‌. ಕೃಷ್ಣಕುಮಾರ್‌ ಅವರಿದ್ದ ವಿಭಾಗೀಯ ಪೀಠ 2019ರ ನವೆಂಬರ್‌ 14ರಂದು ತೀರ್ಪನ್ನು ಕಾಯ್ದಿರಿಸಿತ್ತು. ಶನಿವಾರ ತೀರ್ಪನ್ನು ಪ್ರಕಟಿಸಿದ ನ್ಯಾಯಪೀಠ, ‘ಕರ್ನಾಟಕ ಸಂಸದೀಯ ಕಾರ್ಯದರ್ಶಿಗಳ (ವೇತನ-ಭತ್ಯೆ) ಕಾಯ್ದೆ-1963’ ಹಾಗೂ 1999ರ ತಿದ್ದುಪಡಿ ಕಾಯ್ದೆ ಅಸಾಂವಿಧಾನಿಕ ಎಂದು ಅಭಿಪ್ರಾಯಪಟ್ಟು, ಅರ್ಜಿಯನ್ನು ಮಾನ್ಯ ಮಾಡಿತು.

ಕರ್ನಾಟಕ ರಾಜ್ಯ ಸಂಸದೀಯ ಕಾರ್ಯದರ್ಶಿಗಳ (ವೇತನಗಳು ಮತ್ತು ಉಪದಾನ ಅವಕಾಶಗಳು) ಕಾಯ್ದೆ-1963 ಹಾಗೂ 1999ರ 7ನೇ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರುವ ಶಾಸನಾತ್ಮಕ ಅರ್ಹತೆ ಕರ್ನಾಟಕ ಶಾಸನ ಸಭೆಗೆ (ವಿಧಾನಸಭೆ) ಇಲ್ಲ. ಅಲ್ಲದೆ, ಇದು ಸಂವಿಧಾನಕ್ಕೆ ವ್ಯತಿರಿಕ್ತವಾಗಿದೆ. ಹಾಗಾಗಿ, ಕಾಯ್ದೆಯನ್ನು ರದ್ದುಗೊಳಿಸಲಾಗಿದೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಿತು.

ಈಗಾಗಲೇ ಮೈತ್ರಿ ಸರ್ಕಾರ ಪತನಗೊಂಡಿದೆ. ಈ ಹಿನ್ನಲೆಯಲ್ಲಿ ಹಿಂದಿನ ಮೈತ್ರಿ ಸರ್ಕಾರದ ಅವಧಿಯಲ್ಲಿ ಸಂಸದೀಯ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಹೊರಡಿಸಿದ್ದ ಆದೇಶ ರದ್ದುಗೊಳಿಸಬೇಕು ಎಂಬ ಅರ್ಜಿದಾರರ ಮನವಿ ಈಗ ಊರ್ಜಿತವಾಗುವುದಿಲ್ಲ. ಅಲ್ಲದೆ, ಮೈತ್ರಿ ಸರ್ಕಾರದಲ್ಲಿ ನೇಮಕವಾಗಿದ್ದ ಸಂಸದೀಯ ಕಾರ್ಯದರ್ಶಿ ಹುದ್ದೆಗಳು ಸ್ವಾಭಾವಿಕವಾಗಿ ರದ್ದುಗೊಂಡಿವೆ ಎಂದು ಆದೇಶದಲ್ಲಿ ತಿಳಿಸಿತು.

8 ಜನರ ನೇಮಿಸಿದ್ದ ಕುಮಾರಸ್ವಾಮಿ:

ಶಾಸಕರಾದ ಮಹಾಂತೇಶ್‌ ಕೌಜಲಗಿ, ಡಾ.ಅಂಜಲಿ ಹೇಮಂತ ನಿಂಬಾಳ್ಕರ್‌, ರೂಪಕಲಾ ಎಂ.ಶಶಿಧರ್‌, ರಾಘವೇಂದ್ರ ಬಸವರಾಜ್‌ ಹಿಟ್ನಾಳ್‌, ಡಿ.ಎಸ್‌.ಹೂಲಗೇರಿ, ವಿಧಾನ ಪರಿಷತ್‌ ಸದಸ್ಯರಾದ ಕೆ.ಅಬ್ದುಲ್‌ ಜಬ್ಬಾರ್‌, ಐವಾನ್‌ ಡಿಸೋಜಾ ಮತ್ತು ಕೆ.ಗೋವಿಂದರಾಜ್‌ ಅವರನ್ನು ಸಂಸದೀಯ ಕಾರ್ಯದರ್ಶಿಗಳನ್ನಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನೇಮಿಸಿದ್ದರು. ಈ ಸಂಬಂಧ ರಾಜ್ಯ ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ 2019ರ ಜ.7ರಂದು ಗೆಜೆಟ್‌ ನೋಟಿಫಿಕೇಷನ್‌ ಹೊರಡಿಸಿದ್ದರು. ಇದನ್ನು ಪ್ರಶ್ನಿಸಿ ಎಂ.ಬಿ.ಆದಿನಾರಾಯಣ 2019ರ ಜ.14ರಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ವಾಲ್ಮೀಕಿ ಸಮಾಜಕ್ಕೆ ಮಂತ್ರಿಗಿರಿ: ಒಂದು ತೀರ್ಮಾನಕ್ಕೆ ಬಂದ BSY...

ಸಂವಿಧಾನದ ಪರಿಚ್ಛೇದ 164 (1-ಎ) ಪ್ರಕಾರ ಶಾಸನಭೆಯ ಒಟ್ಟು ಶಾಸಕರ ಸಂಖ್ಯೆಯಲ್ಲಿ ಸಚಿವರ ಸ್ಥಾನಗಳು ಶೇ.15 ಮೀರಬಾರದು ಎಂದಿದೆ. ಆದರೆ, ಸಚಿವ ದರ್ಜೆ ಸ್ಥಾನಮಾನ ನೀಡಿ ಸಂಸದೀಯ ಕಾರ್ಯದರ್ಶಿಗಳನ್ನು ನೇಮಕ ಮಾಡಿರುವುದು ಸಂವಿಧಾನದ ಪರಿಚ್ಛೇದ 164 (1-ಎ)ಗೆ ವಿರುದ್ಧವಾಗಿದೆ. ‘ಕರ್ನಾಟಕ ಸಂಸದೀಯ ಕಾರ್ಯದರ್ಶಿಗಳ (ವೇತನ-ಭತ್ಯೆ) ಕಾಯ್ದೆ-1963’ ಹಾಗೂ 1999ರ ತಿದ್ದುಪಡಿ ಕಾಯ್ದೆಯನ್ನು ಸಂವಿಧಾನಬಾಹಿರ ಎಂದು ಘೋಷಿಸಿ ಸರ್ಕಾರದ ಆದೇಶವನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.

ಅರ್ಜಿ ವಿಚಾರಣೆ ವೇಳೆ, ಸಂಸದೀಯ ಕಾರ್ಯದರ್ಶಿಗಳನ್ನು ನೇಮಕ ಮಾಡುವ ಉದ್ದೇಶ ಸದ್ಯಕ್ಕಿಲ್ಲ ಎಂದು 2019ರ ಸೆ.23ರಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿತ್ತು. ಅರ್ಜಿದಾರರ ವಕೀಲ ಎಂ.ಬಿ. ಆದಿನಾರಾಯಣ ಪರ ಜಿ.ಆರ್‌. ಮೋಹನ್‌ ವಾದ ಮಂಡಿಸಿದ್ದರು.

ಅಲ್ಲದೆ, ಕರ್ನಾಟಕ ಸಂಸದೀಯ ಕಾರ್ಯದರ್ಶಿಗಳ (ವೇತನ-ಭತ್ಯೆ) ಕಾಯ್ದೆ-1963 ಹಾಗೂ 1999ರ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ವಕೀಲ ಕೆ.ಬಿ. ವಿಜಯಕುಮಾರ್‌ ಖುದ್ದು ವಾದ ಮಂಡಿಸಿದ್ದರು.

ಏನಿದು ವಿವಾದ?

ಜೆಡಿಎಸ್‌, ಕಾಂಗ್ರೆಸ್‌ ಮೈತ್ರಿ ಸರ್ಕಾರವಿದ್ದಾಗ ಮಂತ್ರಿಮಂಡಲದಲ್ಲಿ ಸ್ಥಾನ ಸಿಗದ 8 ಶಾಸಕರನ್ನು ಸಂಸದೀಯ ಕಾರ್ಯದರ್ಶಿಗಳಾಗಿ ಅಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇಮಿಸಿದ್ದರು. ಇದನ್ನು ವಿರೋಧಿಸಿ ಬೆಂಗಳೂರಿನ ಆದಿನಾರಾಯಣ, ವಕೀಲ ವಿಜಯಕುಮಾರ್‌ ಪ್ರತ್ಯೇಕ ಪಿಐಎಲ್‌ ಸಲ್ಲಿಸಿದ್ದರು.

ಕೋರ್ಟ್ ಹೇಳಿದ್ದೇನು?

ಕರ್ನಾಟಕ ರಾಜ್ಯ ಸಂಸದೀಯ ಕಾರ್ಯದರ್ಶಿಗಳ (ವೇತನಗಳು ಮತ್ತು ಉಪದಾನ ಅವಕಾಶಗಳು) ಕಾಯ್ದೆ-1963 ಹಾಗೂ 1999ರ 7ನೇ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರುವ ಶಾಸನಾತ್ಮಕ ಅರ್ಹತೆ ಕರ್ನಾಟಕ ಶಾಸನ ಸಭೆಗೆ (ವಿಧಾನಸಭೆ) ಇಲ್ಲ. ಅಲ್ಲದೆ, ಇದು ಸಂವಿಧಾನಕ್ಕೆ ವ್ಯತಿರಿಕ್ತವಾಗಿದೆ. ಹಾಗಾಗಿ, ಕಾಯ್ದೆಯನ್ನು ರದ್ದುಗೊಳಿಸಲಾಗಿದೆ.

ಪರಿಣಾಮ ಏನು?

ಸಚಿವ ಸ್ಥಾನ ವಂಚಿತರಾದವರಿಗೆ ಸಂಪುಟ ದರ್ಜೆಯ ಸಂಸದೀಯ ಕಾರ್ಯದರ್ಶಿ ಹುದ್ದೆ ನೀಡುವ ಅಡ್ಡದಾರಿಯನ್ನು ಹಲವು ಆಡಳಿತಾರೂಢ ಪಕ್ಷಗಳು ನಡೆಸುತ್ತಲೇ ಬಂದಿವೆ. ದಿಲ್ಲಿ ಸಿಎಂ ಕೇಜ್ರಿವಾಲ್‌ ಕೂಡ ಹಿಂದೆ 21 ಆಪ್‌ ಶಾಸಕರಿಗೆ ಈ ಹುದ್ದೆ ನೀಡಿದ್ದರು. ಬಳಿಕ ಅದು ರದ್ದಾಗಿತ್ತು. ಇದೀಗ ಕರ್ನಾಟಕದಲ್ಲೂ ಈ ಅಡ್ಡದಾರಿ ಬಂದ್‌ ಆಗಿದೆ.