ವಾಲ್ಮೀಕಿ ಸಮಾಜಕ್ಕೆ ಮಂತ್ರಿಗಿರಿ: ಒಂದು ತೀರ್ಮಾನಕ್ಕೆ ಬಂದ BSY
ಮಕರ ಸಂಕ್ರಾಂತಿ ಬಳಿಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ನೇತೃತ್ವದ ಸಂಪುಟ ವಿಸ್ತರಣೆ ಮಾಡಲಿದ್ದು, ಇತ್ತ ಸಚಿವ ಸ್ಥಾನದ ಆಕಾಂಕ್ಷಿಗಳು ಯಡಿಯೂರಪ್ಪ ಬಳಿ ಮಂತ್ರಿಗಿರಿಗಾಗಿ ಲಾಬಿ ತೀವ್ರಗೊಳಿಸಿದ್ದಾರೆ. ಇದರ ಮಧ್ಯೆ ಶ್ರೀರಾಮುಲು ನಡೆ ಮಾತ್ರ ಬಿಎಸ್ವೈ ದಿಕ್ಕು ತೋಚದಂತಾಗಿದೆ.
ಬೆಂಗಳೂರು/ಹಾಸನ, [ಜ.04]: ಉಪಚುನಾವಣೆ ಉಪಮುಖ್ಯಮಂತ್ರಿ ಹುದ್ದೆ ಬಿಜೆಪಿಯಲ್ಲಿ ಬಿಸಿತುಪ್ಪವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಸದ್ಯ ಇರುವ ಮೂವರು ಡಿಸಿಎಂಗಳನ್ನು ತೆಗೆಯಬೇಕೆನ್ನುವುದು ಕೆಲ ಬಿಜೆಪಿ ನಾಯಕರು ಎದ್ದು ನಿಂತಿದ್ದಾರೆ.
ಇದರ ಮಧ್ಯೆ ರಮೇಶ್ ಜಾರಕಿಹೊಳಿ ಮತ್ತು ಆರೋಗ್ಯ ಸಚಿವ ಬಿ.ಶ್ರೀರಾಮುಲು ಡಿಸಿಎಂ ಕಣ್ಣಿಟ್ಟಿದ್ದಾರೆ. ಶ್ರೀರಾಮುಲು ಪರೋಕ್ಷವಾಗಿ ವಾಲ್ಮೀಕಿ ಸಮುದಾಯದ ಶ್ರೀಗಳನ್ನು ಮುಂದಿಟ್ಟುಕೊಂಡು ಉಪಮುಖ್ಯಮಂತ್ರಿ ಹುದ್ದೆಗೆ ಭರ್ಜರಿ ಲಾಬಿ ನಡೆಸಿದ್ದಾರೆ.
ಪಕ್ಷಕ್ಕಾಗಿ ತ್ಯಾಗ ಮಾಡಲು ಸಿದ್ಧ: ಶ್ರೀರಾಮುಲು
ಅಲ್ಲದೇ ಡಿಸಿಎಂ ಹುದ್ದೆಗೆ ಪರಿಗಣಿಸಬೇಕೆಂದು ಶ್ರೀರಾಮುಲು ದೆಹಲಿಯಲ್ಲಿ ಬೀಡುಬಿಟ್ಟು ಹೈಕಮಾಂಡ್ ಗಮನಕ್ಕೆ ತರಲು ಪ್ರಯತ್ನ ನಡೆಸಿದ್ದಾರೆ ಎನ್ನುವ ಮಾಹಿತಿಗಳು ಲಭ್ಯವಾಗಿವೆ.
ಒಂದು ತೀರ್ಮಾನಕ್ಕೆ ಬಂದ ಬಿಎಸ್ ವೈ
ಹಾಸನದಲ್ಲಿ ಪುಷ್ಪಗಿರಿ ಉತ್ಸವಕ್ಕೆ ಚಾಲನೆ ನೀಡಿ ಹಳೇಬೀಡಿನಲ್ಲಿ ಸಿಎಂ, ವಾಲ್ಮೀಕಿ ಸಮಾಜಕ್ಕೆ ಮಂತ್ರಿಗಿರಿ ನೀಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದರು.
ಸಮಾಜದ ಸ್ವಾಮೀಜಿಗಳ ಜತೆ ಚರ್ಚಿಸಿ ತೀರ್ಮಾನಕ್ಕೆ ಬರುತ್ತೇನೆ. ಸಂಪುಟ ವಿಸ್ತರಣೆ ಹಿನ್ನೆಲೆ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗುತ್ತೇನೆ. ಪ್ರಧಾನಿ ರಾಜ್ಯಕ್ಕೆ ಬಂದಾಗ ಇಲ್ಲಿನ ಸಮಸ್ಯೆಯನ್ನು ಅವರ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದರು.
ಈಗಾಗಲೇ ಪ್ರಸನ್ನಾನಂದ ಸ್ವಾಮೀಜಿಗಳು ವಾಲ್ಮೀಕಿ ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿ ನೀಡಬೇಕು. ಜತೆಗೆ ನಮ್ಮ ಸಮುದಾಯದ ನಾಯಕನಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕೆಂದು ಪರೋಕ್ಷವಾಗಿ ಶ್ರೀರಾಮುಲು ಪರ ಬ್ಯಾಟಿಂಗ್ ಮಾಡಿದ್ದಾರೆ.