Asianet Suvarna News Asianet Suvarna News

ಸುಳ್ಳು ಪ್ರಕರಣ ದಾಖಲಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ: ಪೊಲೀಸರ ಪ್ರಕರಣ ಮರು ವಿಚಾರಣೆಗೆ ಹೈಕೋರ್ಟ್‌ ಅಸ್ತು

ಅಧೀನ ನ್ಯಾಯಾಲಯದ ಆದೇಶ ರದ್ದುಪಡಿಸಿರುವ ಹೈಕೋರ್ಟ್‌, ನಾಗರಾಜು ಅವರ ಖಾಸಗಿ ದೂರನ್ನು ಮರು ಸ್ಥಾಪಿಸಿದೆ. ದೂರನ್ನು ಹೊಸದಾಗಿ ವಿಚಾರಣೆ ನಡೆಸುವಂತೆ ಜೆಎಂಎಫ್‌ಸಿ ಕೋರ್ಟ್‌ಗೆ ನಿರ್ದೇಶಿಸಿದೆ. 

Karnataka High Court Orders Retrial of Police Case gvd
Author
First Published Oct 21, 2024, 9:51 AM IST | Last Updated Oct 21, 2024, 9:51 AM IST

ವೆಂಕಟೇಶ್ ಕಲಿಪಿ

ಬೆಂಗಳೂರು (ಅ.21): ಸುಳ್ಳು ಪ್ರಕರಣ ದಾಖಲಿಸಿದ ಕ್ರಮ ಪ್ರಶ್ನಿಸಿದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಹಾಗೂ ಜಪ್ತಿ ಮಾಡಿದ್ದ ಹಣದ ಬಗ್ಗೆ ತಪ್ಪು ಲೆಕ್ಕ ತೋರಿಸಿದ ಆರೋಪ ಸಂಬಂಧ ಮಂಡ್ಯ ಜಿಲ್ಲೆಯ ನಾಗಮಂಗಲ ಮತ್ತು ಕೆ.ಆರ್‌.ಪೇಟೆ ಟೌನ್‌ ಠಾಣೆ ಪೊಲೀಸ್‌ ಅಧಿಕಾರಿಗಳ ವಿರುದ್ಧ ಸಲ್ಲಿಸಿದ್ದ ಖಾಸಗಿ ದೂರು ತಿರಸ್ಕರಿಸಿದ್ದ ಅಧೀನ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿರುವ ಹೈಕೋರ್ಟ್‌, ದೂರಿನ ಮರು ವಿಚಾರಣೆಗೆ ಆದೇಶಿಸಿದೆ.

ಅಧೀನ ನ್ಯಾಯಾಲಯದ ಆದೇಶ ರದ್ದುಪಡಿಸಿರುವ ಹೈಕೋರ್ಟ್‌, ನಾಗರಾಜು ಅವರ ಖಾಸಗಿ ದೂರನ್ನು ಮರು ಸ್ಥಾಪಿಸಿದೆ. ದೂರನ್ನು ಹೊಸದಾಗಿ ವಿಚಾರಣೆ ನಡೆಸುವಂತೆ ಜೆಎಂಎಫ್‌ಸಿ ಕೋರ್ಟ್‌ಗೆ ನಿರ್ದೇಶಿಸಿದೆ. ಖಾಸಗಿ ದೂರು ಸಲ್ಲಿಸುವ ವೇಳೆ ಪ್ರಿಯಾಂಕ ಶ್ರೀವಾತ್ಸವ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಮಾರ್ಗಸೂಚಿ ಪಾಲಿಸಿಲ್ಲ ಎಂದು ಜೆಎಂಎಫ್‌ಸಿ ಕೋರ್ಟ್‌ ನಾಗರಾಜು ಅವರ ಖಾಸಗಿ ದೂರನ್ನು ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ಸಿವಿಲ್‌ ಮತ್ತು ಜೆಎಂಎಫ್‌ಸಿ ಕೋರ್ಟ್‌ ತಿರಸ್ಕರಿಸಿದೆ. 

ಸರ್ಕಾರಿ ಉದ್ಯೋಗ ಕೊಡಿಸೋದಾಗಿ ಮಹಿಳೆಗೆ ₹47 ಲಕ್ಷ ವಂಚಿಸಿದ ಶಸಸ್ತ್ರ ಮೀಸಲು ಪಡೆ ಕಾನ್‌ಸ್ಟೇಬಲ್

ಆ ತೀರ್ಪಿನ ಪ್ರಕಾರ ಖಾಸಗಿ ದೂರು ದಾಖಲಿಸುವಾಗ ಅದರೊಂದಿಗೆ ದೂರಿನಲ್ಲಿ ಹೇಳಿರುವ ಅಂಶಗಳಲ್ಲೆವೂ ಸತ್ಯ ಎಂದು ದೂರುದಾರರು ಪ್ರಮಾಣೀಕರಿಸಿ ಸಿಆರ್‌ಪಿಸಿ 156 (3) ಅಡಿಯಲ್ಲಿ ಪ್ರಮಾಣಪತ್ರ ಸಲ್ಲಿಸಬೇಕು. ಕೋರ್ಟ್‌ನಲ್ಲಿ ಖಾಸಗಿ ದೂರು ಸಲ್ಲಿಸುವ ಮುನ್ನ ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಬೇಕು. ಪೊಲೀಸರು ದೂರಿನ ಮೇಲೆ ಕ್ರಮ ಜರುಗಿಸದೆ ಹೋದಲ್ಲಿ ಮೇಲಾಧಿಕಾರಿಗೆ ದೂರು ನೀಡಬೇಕು ಎಂದು ಹೇಳಿದೆ. ಈ ಎಲ್ಲ ಮಾರ್ಗಸೂಚಿ ಪಾಲಿಸಿದ್ದರೂ ನಾಗರಾಜು ಅವರ ಖಾಸಗಿ ದೂರನ್ನು ತಿರಸ್ಕರಿಸಿರುವ ಜೆಎಂಎಫ್‌ಸಿ ಕೋರ್ಟ್‌ ಕ್ರಮ ನ್ಯಾಯೋಚಿತವಾಗಿಲ್ಲ. ಇದರಿಂದ ದೂರನ್ನು ಮರು ಸ್ಥಾಪಿಸಲಾಗುತ್ತಿದೆ ಎಂದು ಆದೇಶದಲ್ಲಿ ಹೈಕೋರ್ಟ್‌ ತಿಳಿಸಿದೆ.

ಪ್ರಕರಣದ ವಿವರ: ಕೆ.ಆರ್‌.ಪೇಟೆ ಟೌನ್‌ ಸುಭಾಷ್‌ನಗರ ನಿವಾಸಿ ಕೆ.ಟಿ.ನಾಗರಾಜು (51) ಅವರ ಮನೆಗೆ 2019ರ ಆ.20ರಂದು ನಾಗಮಂಗಲ ಸರ್ಕಲ್‌ ಇನ್‌ಸ್ಪೆಕ್ಟರ್‌ ಆಗಿದ್ದ ಕೆ.ಎನ್‌.ಸುಧಾಕರ, ಕೆ.ಆರ್‌.ಪೇಟೆ ಟೌನ್‌ ಪೊಲೀಸ್‌ ಠಾಣೆ ಬೈತ್ರಗೌಡ, ಸಬ್‌ ಇನ್‌ಸ್ಪೆಕ್ಟರ್‌ ಶಿವಣ್ಣ ಹಾಗೂ ಮುಖ್ಯ ಪೇದೆ ಪ್ರಕಾಶ್‌ ಭೇಟಿ ನೀಡಿದ್ದರು. ಜೂಜಾಟ ಆಡುತ್ತಿರುವ ಬಗ್ಗೆ ಮಾಹಿತಿ ಬಂದಿರುವುದಾಗಿ ನಾಗರಾಜು ಮತ್ತವರ ಸ್ನೇಹಿತರಾದ ಬೋರೇಗೌಡ, ಚಂದ್ರೇಗೌಡ ಅವರನ್ನು ಪ್ರಶ್ನಿಸಿದ್ದರು.

ಅದನ್ನು ಅಲ್ಲಗಳೆದಾಗ ನಾಗರಾಜು ಮತ್ತವರ ಸ್ನೇಹಿತರ ಜೇಬಿನಿಂದ ₹970 ಪಡೆದಿದ್ದ ಪೊಲೀಸರು, ಎಲ್ಲರನ್ನೂ ಠಾಣೆಗೆ ಕರೆದೊಯ್ದಿದ್ದರು. ಠಾಣೆಯಲ್ಲಿ ಚಂದ್ರೇಗೌಡನಿಂದ ₹34 ಸಾವಿರ ಪಡೆದು, ಕರ್ನಾಟಕ ಪೊಲೀಸ್‌ ಕಾಯ್ದೆ ಸೆಕ್ಷನ್‌ 79 ಮತ್ತು 80 ಅಡಿಯಲ್ಲಿ (ಜೂಜಾಟ ಆಡಿದ) ಬಗ್ಗೆ ದೂರು ದಾಖಲಿಸಿದ್ದರು. ಇದರಿಂದ 2021ರಲ್ಲಿ ಕೆ.ಆರ್‌.ಪೇಟೆ ಸಿವಿಲ್‌ ಮತ್ತು ಜೆಎಂಎಫ್‌ಸಿ ಕೋರ್ಟ್‌ಗೆ ಖಾಸಗಿ ದೂರು ದಾಖಲಿಸಿದ್ದ ನಾಗರಾಜು, ಪೊಲೀಸರು ನಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ತನಿಖೆ ನಡೆಸಲು ಕೋರ್ಟ್‌ಯಿಂದ ಅನುಮತಿ ಪಡೆಯಲಾಗಿದೆಯೇ ಎಂದು ಕೇಳಿದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಉದ್ದೇಶಪೂರ್ವಕವಾಗಿ ಅವಮಾನಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದರು.

ಉಪಸಮರಕ್ಕೆ ಕಾಂಗ್ರೆಸ್‌ ರಣತಂತ್ರ: ಪ್ರತಿ ಕ್ಷೇತ್ರಕ್ಕೂ 10 ಜನ ಸಚಿವರು, 30 ಶಾಸಕರ ನಿಯೋಜನೆಗೆ ಚಿಂತನೆ

ಅಲ್ಲದೆ, ಸ್ನೇಹಿತ ಚಂದ್ರಗೌಡ ತನ್ನ ಮಗನ ಹುಟ್ಟುಹಬ್ಬ ಆಚರಣೆಗಾಗಿ ವಸ್ತುಗಳನ್ನು ಖರೀದಿಸಲು ಇಟ್ಟುಕೊಂಡಿದ್ದ ₹34 ಸಾವಿರ ವಶಕ್ಕೆ ಪಡೆದಿದ್ದರು. ಮನವಿ ಮಾಡಿದರೂ ಆ ಹಣವನ್ನು ನಮಗೆ ಹಿಂದಿರುಗಿಸಲಿಲ್ಲ. ಆದರೆ, ಪಂಚನಾಮೆಯಲ್ಲಿ ಕೇವಲ ₹14,280 ಎಂದು ಜಪ್ತಿ ಮಾಡಲಾಗಿದೆ ಎಂದು ತೋರಿಸಿದ್ದರು. ಈ ಬಗ್ಗೆ ದೂರು ನೀಡಿದರೂ ಮಂಡ್ಯ ಜಿಲ್ಲಾ ಎಸ್‌ಪಿ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಖಾಸಗಿ ದೂರಿನಲ್ಲಿ ನಾಗರಾಜು ಆರೋಪಿಸಿದ್ದರು. ಅದನ್ನು ಜೆಎಂಎಫ್‌ಸಿ ಕೋರ್ಟ್‌ ತಿರಸ್ಕರಿಸಿದ್ದರಿಂದ ಹೈಕೋರ್ಟ್‌ ಮೆಟ್ಟಿಲೇರಿದ್ದರು. ನಾಗರಾಜು ಪರ ವಕೀಲ ಸಿ.ಎನ್‌.ರಾಜು ವಾದ ಮಂಡಿಸಿದ್ದರು.

Latest Videos
Follow Us:
Download App:
  • android
  • ios