Asianet Suvarna News Asianet Suvarna News

ಸರ್ಕಾರಿ ಉದ್ಯೋಗ ಕೊಡಿಸೋದಾಗಿ ಮಹಿಳೆಗೆ ₹47 ಲಕ್ಷ ವಂಚಿಸಿದ ಶಸಸ್ತ್ರ ಮೀಸಲು ಪಡೆ ಕಾನ್‌ಸ್ಟೇಬಲ್

ಇಬ್ಬರು ಮಕ್ಕಳಿಗೆ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಮಹಿಳೆಯೊಬ್ಬರಿಂದ ₹47 ಲಕ್ಷ ಹಾಗೂ 857 ಗ್ರಾಂ ಚಿನ್ನಾಭರಣ ಪಡೆದು ವಂಚಿಸಿದ ಆರೋಪದಡಿ ನಗರ ಶಸಸ್ತ್ರ ಮೀಸಲು ಪಡೆ(ಸಿಎಆರ್‌) ಹೆಡ್‌ ಕಾನ್‌ಸ್ಟೇಬಲ್‌ ಸೇರಿ ಮೂವರ ವಿರುದ್ಧ ನಂದಿನಿ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. 

A constable cheated a woman of 47 lakh by offering her a government job gvd
Author
First Published Oct 21, 2024, 9:45 AM IST | Last Updated Oct 21, 2024, 9:45 AM IST

ಬೆಂಗಳೂರು (ಅ.21): ಇಬ್ಬರು ಮಕ್ಕಳಿಗೆ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಮಹಿಳೆಯೊಬ್ಬರಿಂದ ₹47 ಲಕ್ಷ ಹಾಗೂ 857 ಗ್ರಾಂ ಚಿನ್ನಾಭರಣ ಪಡೆದು ವಂಚಿಸಿದ ಆರೋಪದಡಿ ನಗರ ಶಸಸ್ತ್ರ ಮೀಸಲು ಪಡೆ(ಸಿಎಆರ್‌) ಹೆಡ್‌ ಕಾನ್‌ಸ್ಟೇಬಲ್‌ ಸೇರಿ ಮೂವರ ವಿರುದ್ಧ ನಂದಿನಿ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ವಂಚನೆಗೆ ಒಗೊಳಗಾದ ಅನ್ನಪೂರ್ಣೇಶ್ವರಿನಗರ ಶ್ರೀಗಂಧದ ಕಾವಲು ನಿವಾಸಿ ಭಾಗ್ಯ ಅವರು ನೀಡಿದ ದೂರಿನ ಮೇರೆಗೆ ಸಿಎಆರ್‌ ಹೆಡ್‌ ಕಾನ್ಸ್‌ಟೇಬಲ್‌ ಪ್ರಶಾಂತ್ ಕುಮಾರ್‌, ಆತನ ಪತ್ನಿ ದೀಪಾ ಹಾಗೂ ಡಿ.ಪ್ರಶಾಂತ್‌ ಎಂಬುವವರ ವಿರುದ್ಧ ವಂಚನೆ, ನಂಬಿಕೆ ದ್ರೋಹ, ಜೀವ ಬೆದರಿಕೆ ಆರೋಪದಡಿ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂರಿನ ವಿವರ: ತನ್ನ ಇಬ್ಬರು ಮಕ್ಕಳು ಸರ್ಕಾರಿ ಕೆಲಸಕ್ಕೆ ಪ್ರಯತ್ತಿಸುತ್ತಿದ್ದ ವೇಳೆ 2021ರಲ್ಲಿ ಪರಿಚಯನಾಗಿದ್ದ ತಮ್ಮದೇ ಊರಿನ ಚಾಮರಾಜಪೇಟೆಯ ಸಿಎಆರ್‌ ಹೆಡ್‌ ಕಾನ್‌ಸ್ಟೇಬಲ್‌ ಪ್ರಶಾಂತಕುಮಾರ್‌ ಅವರ ಬಳಿ ಮಕ್ಕಳು ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸುವ ವಿಚಾರ ಪ್ರಸ್ತಾಪಿಸಿದ್ದೆ. ಈ ವೇಳೆ ಆತ ನಾನು ಸದ್ಯ ಎಡಿಜಿಪಿ ಉಮೇಶ್‌ ಕುಮಾರ್‌ ಅವರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದು, ತನಗೆ ಹಲವು ಸರ್ಕಾರಿ ಅಧಿಕಾರಿಗಳು ಮತ್ತು ಕೆಪಿಎಸ್‌ಸಿ ಅಧಿಕಾರಿಗಳು ಪರಿಚಯವಿದ್ದಾರೆ. ಹೀಗಾಗಿ ಮೂರು ತಿಂಗಳೊಳಗೆ ನೇರ ನೇಮಕಾತಿ ಮುಖಾಂತರ ನಿಮ್ಮ ಮಗಳಿಗೆ ಎಸ್‌ಡಿಎ ಮತ್ತು ಮಗನಿಗೆ ಎಫ್‌ಡಿಎ ಕೆಲಸ ಕೊಡಿಸುವುದಾಗಿ ಭರವರಸೆ ನೀಡಿದ್ದ. ಈ ವೇಳೆ ಆತನ ಪತ್ನಿ ದೀಪಾ ಸಹ ಕೆಲಸ ಭರವಸೆ ನೀಡಿದ್ದಳು. ಎಸ್‌ಡಿಎ ಹುದ್ದೆಗೆ ₹15 ಲಕ್ಷ ಹಾಗೂ ಎಫ್‌ಡಿಎ ಹುದ್ದೆಗೆ ₹25 ಲಕ್ಷ ಕೊಡಬೇಕು ಎಂದು ಕೇಳಿದ್ದರು. ಮುಂಗಡವಾಗಿ ₹5.50 ಲಕ್ಷ ಪಡೆದುಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಉಪಸಮರಕ್ಕೆ ಕಾಂಗ್ರೆಸ್‌ ರಣತಂತ್ರ: ಪ್ರತಿ ಕ್ಷೇತ್ರಕ್ಕೂ 10 ಜನ ಸಚಿವರು, 30 ಶಾಸಕರ ನಿಯೋಜನೆಗೆ ಚಿಂತನೆ

ವಿವಿಧ ಹಂತಗಳಲ್ಲಿ ₹47 ಲಕ್ಷ ವರ್ಗ: ಈ ನಡುವೆ ಪ್ರಶಾಂತ್‌ ಕುಮಾರ್‌, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಂಜುನಾಥ ಪ್ರಸಾದ್‌ ಅವರ ಆಪ್ತಸಹಾಯಕ ಎಂದು ಡಿ.ಪ್ರಶಾಂತ್‌ ಎಂಬಾತನನ್ನು ಭಾಗ್ಯ ಅವರಿಗೆ ಪರಿಚಯಿಸಿದ್ದಾನೆ. ಈ ವೇಳೆ ಪ್ರಶಾಂತ್‌, ನೀವು ಬೇಗ ಹಣ ಕೊಟ್ಟರೆ ಬೇಗ ಕೆಲಸವಾಗುತ್ತದೆ ಎಂದು ಹೇಳಿದ್ದಾನೆ. ಅದರಂತೆ ಭಾಗ್ಯ ಅವರು ತಮ್ಮ ಪತಿ ಹೆಸರಿನಲ್ಲಿ ಸಾಲ ಪಡೆದು ₹10 ಲಕ್ಷವನ್ನು ಆರೋಪಿಗಳಿಗೆ ನೀಡಿದ್ದಾರೆ. ಬಳಿಕ ವಿವಿಧ ಹಂತಗಳಲ್ಲಿ ಆರೋಪಿಗಳು ನಗದು, ಬ್ಯಾಂಕ್‌ಗಳಿಗೆ ವರ್ಗಾವಣೆ ಮುಖಾಂತರ ಒಟ್ಟು ₹47 ಲಕ್ಷ ಪಡೆದಿದ್ದಾರೆ.

ನಕಲಿ ಆಯ್ಕೆ ಪಟ್ಟಿ ದಾಖಲೆ: ಬಳಿಕ ಆರೋಪಿಗಳು 2020ರ ಜೂ.12ರಂದು ಭಾಗ್ಯ ಅವರ ಮಗನಿಗೆ ನೀರಾವರಿ ಇಲಾಖೆ ಮತ್ತು ಮಗಳಿಗೆ ಬೇರೊಂದು ಇಲಾಖೆಯಲ್ಲಿ ಕ್ರಮವಾಗಿ ಎಸ್‌ಡಿಎ, ಎಫ್‌ಡಿಎ ಹುದ್ದೆ ಸಿಕ್ಕಿದೆ. ಕೆಪಿಎಸ್ಸಿ 2ನೇ ಹೆಚ್ಚುವರಿ ಆಯ್ಕೆ ಪಟ್ಟಿಯಲ್ಲಿ ಇಬ್ಬರ ಹೆಸರಿದೆ ಎಂದು ಆಯ್ಕೆ ಪಟ್ಟಿ ಮಾದರಿಯ ಪ್ರತಿಯನ್ನು ನೀಡಿದ್ದಾರೆ. ಬಳಿಕ ಮತ್ತೆ ₹5 ಲಕ್ಷಕ್ಕೆ ಬೇಡಿಕೆ ಇರಿಸಿದಾಗ, ಅನುಮಾನಗೊಂಡು ಆರೋಪಿಗಳು ನೀಡಿದ ದಾಖಲೆಗಳನ್ನು ಪರಿಶೀಲಿಸಿದಾಗ ಅದು ನಕಲಿ ಎಂಬುದು ಗೊತ್ತಾಗಿದೆ.

ಜೀವ ಬೆದರಿಕೆ: ಈ ಬಗ್ಗೆ ಪ್ರಶ್ನೆ ಮಾಡಿದಾಗ ಆರೋಪಿಗಳು ₹58 ಲಕ್ಷ ಮೊತ್ತದ ಚೆಕ್‌ ನೀಡಿದ್ದಾರೆ. ಈ ಚೆಕ್‌ ಬೌನ್ಸ್‌ ಆಗಿದೆ. ಈ ಬಗ್ಗೆ ಪ್ರಶ್ನೆ ಮಾಡಿದಾಗ ನಿಮಗೆ ಯಾವುದೇ ಹಣ ನೀಡುವುದಿಲ್ಲ. ಯಾವುದೇ ಹುದ್ದೆಯನ್ನೂ ಕೊಡಿಸುವುದಿಲ್ಲ. ಏನು ಬೇಕಾದರೂ ಮಾಡಿಕೊಳ್ಳಿ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

58 ಗ್ರಾಂ ಚಿನ್ನ ಮಾತ್ರ ವಾಪಸ್‌: ದೂರುದಾರೆ ಭಾಗ್ಯ ನಗರದ ಬ್ಯಾಂಕ್‌ವೊಂದರಲ್ಲಿ 915 ಗ್ರಾಂ ಚಿನ್ನಾಭರಣ ಅಡಮಾನ ಇರಿಸಿರುವ ಬಗ್ಗೆ ತಿಳಿದ ಆರೋಪಿಗಳು ತಾವೇ ₹25 ಲಕ್ಷ ಪಾವತಿಸಿ ಬ್ಯಾಂಕ್‌ನಿಂದ ಚಿನ್ನಾಭರಣ ಬಿಡಿಸಿದ್ದಾರೆ. ಈ ಪೈಕಿ 58 ಗ್ರಾಂ ಚಿನ್ನಾಭರಣ ಮಾತ್ರ ಭಾಗ್ಯಾ ಅವರಿಗೆ ನೀಡಿ ಉಳಿದ 857 ಗ್ರಾಂ ಚಿನ್ನಾಭರಣಗಳನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ.

2 ಮಕ್ಕಳು ಇದ್ದವರಿಗಷ್ಟೇ ಎಲೆಕ್ಷನ್ ಟಿಕೆಟ್: ಜನಸಂಖ್ಯೆ ಏರಿಕೆಗೆ ಚಂದ್ರಬಾಬು ಪ್ಲಾನ್!

ಆರೋಪಿ ಪೇದೆ ಸಸ್ಪೆಂಡ್‌: ತಮ್ಮ ವಿರುದ್ಧ ವಂಚನೆ ಪ್ರಕರಣ ದಾಖಲಾದ ಬೆನ್ನಲ್ಲೇ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಹೀಗಾಗಿ ಆರೋಪಿ ಸಿಎಆರ್‌ ಹೆಡ್‌ಕಾನ್‌ಸ್ಟೇಬಲ್‌ ಪ್ರಶಾಂತ್ ಕುಮಾರ್‌ನನ್ನು ಸೇವೆಯಿಂದ ಅಮಾನತುಗೊಳಿಸಿ ಇಲಾಖಾ ತನಿಖೆಗೆ ಆದೇಶಿಸಲಾಗಿದೆ. ಆರೋಪಿ ಪ್ರಶಾಂತ್‌ ಕುಮಾರ್‌ ಈ ಹಿಂದೆಯೂ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಹಲವರಿಂದ ಲಕ್ಷಾಂತರ ರು. ಹಣ ಪಡೆದು ವಂಚಿಸಿರುವ ಆರೋಪಗಳು ಕೇಳಿ ಬಂದಿವೆ.

Latest Videos
Follow Us:
Download App:
  • android
  • ios