ಎಸ್ಮಾ ಜಾರಿಯಾದರೂ ಕರ್ತವ್ಯಕ್ಕೆ ಹಾಜರಾಗದೇ ಮುಷ್ಕರ ಮಾಡುತ್ತಿದ್ದ ನೌಕರರನ್ನು ಬಂಧಿಸುವಂತೆ ಹೈಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಸಾರಿಗೆ ನೌಕರರು ಮುಷ್ಕರ ವಾಪಸ್ ಪಡೆದಿದ್ದಾರೆ. ಮುಂದಿನ ಹೋರಾಟದ ಬಗ್ಗೆ ಜಂಟಿ ಕ್ರಿಯಾ ಸಮಿತಿ ಚಿಂತನೆ ನಡೆಸುತ್ತಿದೆ. ನೌಕರರು ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

ಬೆಂಗಳೂರು (ಆ.05): ರಾಜ್ಯದಲ್ಲಿ ಎಸ್ಮಾ ಜಾರಿಗೊಂಡರೂ ಆದೇಶ ಧಿಕ್ಕರಿಸಿ ಮುಷ್ಕರ ಮಾಡುತ್ತಿರುವ ಸಾರಿಗೆ ನೌಕರರನ್ನು ಬಂಧಿಸುವಂತೆ ಹೈಕೋರ್ಟ್ ಆದೇಶ ಹೊರಡಿಸಿದ ಬೆನ್ನಲ್ಲಿಯೇ, ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಮುಖಂಡ ಅನಂತ ಸುಬ್ಬರಾವ್ ಅವರು ಸಾರಿಗೆ ನೌಕರರಿಗೆ ಮುಷ್ಕರ ಮೊಟಕುಗೊಳಿಸಿದ್ದಾಗಿ ತಿಳಿಸಿದ್ದಾರೆ. ಜೊತೆಗೆ, ಎಲ್ಲ ನೌಕರರಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ತಿಳಿಸಿದ್ದು, ಮುಂದಿನ ಹೋರಾಟದ ದಿನಾಂಕ ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ.

ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ ಸೇರಿ ನಾಲ್ಕೂ ನಿಗಮಗಳ ಸಾರಿಗೆ ನೌಕರರು ಇಂದಿನಿಂದ ಕರ್ತವ್ಯಕ್ಕೆ ಗೈರಾಗಿ ಸಾಮೂಹಿಕವಾಗಿ ಮುಷ್ಕರ ಹಮ್ಮಿಕೊಂಡಿದ್ದರು. ಆದರೆ, ಇದರಿಂದ ರಾಜ್ಯದ ಲಕ್ಷಾಂತರ ಜನ ಪ್ರಯಾಣಿಕರು ಸರ್ಕಾರಿ ಸಾರಿಗೆ ಸಂಪರ್ಕ ಇಲ್ಲದೇ ಭಾರೀ ತೊಂದರೆಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲ ನೌಕರರಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ-ಎಸ್ಮಾ (Essential Services Maintenance Act) ಜಾರಿ ಮಾಡಲಾಗಿತ್ತು. ಎಸ್ಮಾ ಆದೇಶವನ್ನೂ ಉಲ್ಲಂಘಿಸಿ ನೌಕರರು ಸರ್ಕಾರದ ವಿರುದ್ಧ ಮುಷ್ಕರಕ್ಕೆ ಮುಂದಾಗಿದ್ದರು. ಇದನ್ನು ಪ್ರಶ್ನಿಸಿ ಸರ್ಕಾರದಿಂದ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು.

ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ಮಾಡಿದ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿಎಂ ಜೋಶಿಯವರಿದ್ದ ಪೀಠ, (Essential Services Maintenance Act) ಕಾಯಿದೆ ಜಾರಿಯಾದರೂ ಕೂಡ ಮುಷ್ಕರ ಮುಂದುವರಿಯುತ್ತಿದ್ದ ಹಿನ್ನೆಲೆಯಲ್ಲಿ, ಕಾನೂನು ಉಲ್ಲಂಘಿಸಿದವರಿಗೆ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. 'ಕೋರ್ಟ್ ಆದೇಶ ಮೀರಿ ಮುಷ್ಕರ ನಡೆಸುವುದು ಕಾನೂನುಬಾಹಿರ' ಎಂದು ಹೈಕೋರ್ಟ್ ಸ್ಪಷ್ಟನೆ ನೀಡಿದೆ. ಎಸ್ಮಾ ಜಾರಿಯಾದರೂ ಮುಷ್ಕರ ನಡೆಸುವವರನ್ನು ಎಸ್ಮಾ ಕಾಯಿದೆ ಸೆಕ್ಷನ್ 9 ಅಡಿ ಬಂಧಿಸಬಹುದು ಎಂದು ಹೈಕೋರ್ಟ್ ಸೂಚನೆ ನೀಡಿತು. ಮುಂದಿನ ವಿಚಾರಣೆ ಆಗಸ್ಟ್ 7ರಂದು ಮುಂದೂಡಲಾಯಿತು. ಇದರ ಬೆನ್ನಲ್ಲಿಯೇ ಸಾರಿಗೆ ನೌಕರರು ಮುಷ್ಕರವನ್ನು ವಾಪಸ್ ಪಡೆದಿದ್ದಾರೆ.

ಜಂಟಿ ಕ್ರಿಯಾ ಸಮಿತಿಯಿಂದ ಪ್ರತಿಕ್ರಿಯೆ

ಹೈಕೋರ್ಟ್ ಆದೇಶ ಬಂದ ಬಳಿಕ ತಕ್ಷಣವೇ ಜಂಟಿ ಕ್ರಿಯಾ ಸಮಿತಿಯು ಸುದ್ದಿಗೋಷ್ಠಿ ನಡೆಸಿದ್ದು, ತಮ್ಮ ಕ್ರಮವನ್ನು ಕಾನೂನುಬದ್ಧವಾಗಿ ಮುಂದೂಡಲಿದ್ದಾರೆ ಎಂದು ಘೋಷಿಸಿದೆ. ಸಮಿತಿಯ ಅಧ್ಯಕ್ಷ ಅನಂತ್ ಸುಬ್ಬರಾವ್ ಹೇಳಿದರು. 'ವಕೀಲರ ಸಲಹೆ ಮೇರೆಗೆ ತಾತ್ಕಾಲಿಕವಾಗಿ ಮುಷ್ಕರ ಮುಂದೂಡಿದ್ದೇವೆ. ಹೈಕೋರ್ಟ್ ಆದೇಶದ ವಿರುದ್ಧ ನಾವು ನಡೆದುಕೊಳ್ಳುವುದಿಲ್ಲ. ನೌಕರರ ಪರವಾಗಿ ನಮ್ಮ ಹೋರಾಟ ಮುಂದುವರಿಯಲಿದೆ. ನೌಕರರಿಗೆ ಯಾವುದೇ ತೊಂದರೆ ಉಂಟಾದರೆ, ಜಂಟಿ ಕ್ರಿಯಾ ಸಮಿತಿ ಅವರ ಜೊತೆಗೆ ನಿಂತಿರುತ್ತದೆ. ಇದೀಗ ಎಲ್ಲ ನೌಕರರು ಮುಷ್ಕರದಿಂದ ತಾತ್ಕಾಲಿಕ ಹಿಂಜರಿದು, ತಮ್ಮ ಕರ್ತವ್ಯಕ್ಕೆ ಹಾಜರಾಗುವಂತೆ ಮನವಿ ಮಾಡಿದ್ದಾರೆ. ಸರ್ಕಾರದ ಪ್ರತಿಭಟನಾ ನಿರತ ನೌಕರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ, ಪರಿಸ್ಥಿತಿಯನ್ನು ಕಲುಷಿತಗೊಳಿಸದಂತೆ ಎಚ್ಚರಿಕೆ ನೀಡಿದ್ದಾರೆ.

ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಲು ಈಗಲಾದರೂ ಮುಂದಾಗಲಿ. ನೌಕರರ ಮೇಲಿನ ಕ್ರಮ ತೆಗೆದುಕೊಳ್ಳಬೇಡಿ. ನಾವು ಮತ್ತೆ ಮಾತುಕತೆಗೆ ಸಿದ್ದ ಎಂದು ಅನಂತ ಸುಬ್ಬರಾವ್ ತಿಳಿಸಿದ್ದಾರೆ. ಇನ್ನು ಸಾರಿಗೆ ಮುಷ್ಕರದ ವಿಚಾರ ಮುಂದಿನ ಹಂತವನ್ನು ತೀರ್ಮಾನಿಸುವಂತೆ ಆಗಸ್ಟ್ 7ರಂದು ಕೋರ್ಟ್ ನಲ್ಲಿ ನಡೆಯುವ ವಿಚಾರಣೆ ಮೇಲೆ ಎಲ್ಲರ ಚಿತ್ತ ನೆಟ್ಟಿವೆ. ರಾಜ್ಯ ಸರ್ಕಾರ ಈಗಲಾದರೂ ಹೊಸ ಪ್ರಸ್ತಾವನೆ ಸಹಿತ ನೌಕರರ ಬೇಡಿಕೆಗಳ ಈಡೇರಿಕೆಗೆ ಮುಂದಾಗಬಹುದಾ ಎಂಬ ನಿರೀಕ್ಷೆ ಮೂಡಿದೆ. ಹೈಕೋರ್ಟ್ ಆದೇಶದ ಬೆನ್ನಲ್ಲೇ ನೌಕರರ ಮುಷ್ಕರ ತಾತ್ಕಾಲಿಕವಾಗಿ ಹಿಂಪಡೆದುಕೊಂಡಿದ್ದು, ಸರ್ಕಾರ ಮತ್ತು ನೌಕರರ ಸಂಘದ ನಡುವಿನ ಸಂಬಂಧ ಗಂಭೀರ ಘಟ್ಟ ತಲುಪಿದೆ. ಕಾನೂನು ಉಲ್ಲಂಘನೆಗೆ ಅವಕಾಶವಿಲ್ಲ ಎನ್ನುವ ನ್ಯಾಯಾಂಗದ ಸ್ಪಷ್ಟ ಸಂದೇಶ, ಮುಷ್ಕರದ ರಾಜಕಾರಣಕ್ಕೆ ಕೊಡಲಿ ಪೆಟ್ಟು ಹಾಕಿದೆ.