ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರದಿಂದ ಜನಸಾಮಾನ್ಯರು ಪರದಾಡುವಂತಾಗಿದೆ. ಬಿಎಂಟಿಸಿ ಹೊರತುಪಡಿಸಿ ಉಳಿದ ನಿಗಮಗಳಲ್ಲಿ ಬಸ್ ಸಂಚಾರ ವಿರಳವಾಗಿದ್ದು, ಮೆಜೆಸ್ಟಿಕ್‌ನಲ್ಲಿ ಖಾಸಗಿ ಬಸ್‌ಗಳಿಗೆ ಅವಕಾಶ ನೀಡಲಾಗಿದೆ. ಈ ನಡುವೆ ಸರ್ಕಾರದ ವಿರುದ್ಧ ವಿಪಕ್ಷ ನಾಯಕರು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು (ಆ.05): ರಾಜ್ಯಾದ್ಯಂತ ಸಾರಿಗೆ ನೌಕರರು ತಮ್ಮ ವೇತನ ಹೆಚ್ಚಳ, ಭದ್ರತೆ ಹಾಗೂ ಕಲ್ಯಾಣ ಸಂಬಂಧಿತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಬೃಹತ್ ಪ್ರತಿಕ್ರಿಯೆ ಲಭಿಸಿದೆ. ನಾಲ್ಕು ನಿಗಮಗಳಲ್ಲಿ ಸರಾಸರಿ ಶೇ.58.5ರಷ್ಟು ಮಾತ್ರ ಬಸ್‌ಗಳು ರಸ್ತೆಗೆ ಇಳಿದಿದ್ದರೆ, KSRTC, NWKRTC ಹಾಗೂ KKRTC ನೌಕರರಿಂದ ಮುಷ್ಕರಕ್ಕೆ ಸಂಪೂರ್ಣ ಬೆಂಬಲ ಸಿಕ್ಕಿದೆ.
ನಿಗಮವಾರು ಬಸ್ ಸಂಚಾರದ ವಿವರ:
- BMTC: ಶೇ.99.8ರಷ್ಟು ಕಾರ್ಯಾಚರಣೆ
- KSRTC: ಶೇ.43.9
- NWKRTC: ಶೇ.59.4
- KKRTC: ಶೇ.29.8
- ಇದರಿಂದ ಸರಾಸರಿ 58.5% ಬಸ್ ಸಂಚಾರ ಮಾತ್ರ ನಡೆಯಿತು.
ಮೆಜೆಸ್ಟಿಕ್‌ನಲ್ಲಿ ಖಾಸಗಿ ಬಸ್ ಎಂಟ್ರಿ, ಹೈ ಡ್ರಾಮ:
KSRTC ಬಸ್‌ಗಳ ಕೊರತೆಯ ನಡುವೆ, ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಮೊದಲ ದಿನವೇ ಜಗಳ ಆರಂಭವಾಯಿತು. ಬಸ್‌ಗೆ ಜನ ಕೂರಿಸುವ ವಿಷಯದಲ್ಲಿ ಎರಡು ಗುಂಪುಗಳ ನಡುವೆ ವಾಗ್ವಾದ ಉಂಟಾಯಿತು. ಈ ಸಂದರ್ಭ ಸ್ಥಳದಲ್ಲಿ ಹಾಜರಿದ್ದ ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಸಹ ಈ ಸಮಸ್ಯೆ ಅನುಭವಿಸಿ ಮಾತನಾಡಿದರು. 'ನಾನು ಮಾಜಿ ಶಾಸಕರಾಗಿ ಬಸ್ ಪಾಸ್ ಹೊಂದಿದ್ದೇನೆ. ಬಸ್ಸಿನ ಬುಕಿಂಗ್ ಕೂಡಾ ಆಗಿದೆ, ಈಗ ಬಸ್ ಬರದೇ ಕಾಯುತ್ತಿದ್ದೇನೆ ಎಂದರು. ಆದರೆ ಸಾಮಾನ್ಯ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರ ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಬೇಕು' ಎಂದು ಆಗ್ರಹಿಸಿದರು.
ಸರ್ಕಾರ ಸಮಯಕ್ಕೆ ಸ್ಪಂದಿಸಿಲ್ಲ; ವಿಜಯೇಂದ್ರ ವಾಗ್ದಾಳಿ
ಸರ್ಕಾರಕ್ಕೆ ಸಾರಿಗೆ ಮುಷ್ಕರ ಬೇಡಿಕೆ ಮೊದಲೇ ಗೊತ್ತಿತ್ತು. ರಾಹುಲ್ ಗಾಂಧಿ ಹೋರಾಟ ಇದೆ ಅಂತ ಸಿಎಂ ನಿನ್ನೆ ಸಭೆ ಮಾಡಿದ್ದು, ಇಲ್ಲ ಅಂದಿದ್ದರೆ ಸಭೆ ಕರೆಯುತ್ತಿರಲಿಲ್ಲ. ಸಿದ್ದರಾಮಯ್ಯ ಅವರೇ ಸಮಸ್ಯೆ ಪರಿಹಾರ ನೀಡಬೇಕು. ಎರಡು ಬೇಡಿಕೆ ಅವರು ಕೇಳಿರೋದು, ಅದನ್ನ ಈಡೇರಿಸಿ. ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಸಮಸ್ಯೆ ಆಗಿದೆ. ನೌಕರರಿಗೆ ಸಂಬಳ ಕೊಡ್ತಿಲ್ಲ. ಇವರ ಬಳಿ ಹಣ ಇಲ್ಲ. ಅದಕ್ಕೆ ಬೇಡಿಕೆ ಈಡೇರಿಕೆ ಮಾಡಲು ಸಿಎಂಗೆ ಆಗ್ತಿಲ್ಲ. ಸಿಎಂ ಅವರು ತಡ ಮಾಡದೇ ಸಂಘಟನೆಗಳ ಸಭೆ ಕರೆದು ಸಮಸ್ಯೆ ಪರಿಹಾರ ಕೊಡಬೇಕು. ಜನರಿಗೆ ಆಗೋ ಸಮಸ್ಯೆ ಪರಿಹಾರ ಮಾಡಬೇಕು. ಸರ್ಕಾರ ಯಾವುದೇ ಪರ್ಯಾಯ ವ್ಯವಸ್ಥೆ ಮಾಡಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳ ಬಸ್ ಬೇಕು ಅಂತ ಪತ್ರ ಬರೆದಿದ್ದಾರೆ. ಏನ್ ಮಾಡೋಕೆ ಇವರು ಹೊರಟಿದ್ದಾರೆ. ಗಡ್ಡಕ್ಕೆ ಬೆಂಕಿ ಹತ್ತಿದಾಗ ಸಮಸ್ಯೆ ಪರಿಹಾರಕ್ಕೆ ಮುಂದಾಗಿದ್ದಾರೆ. ಈಗಲೂ ಕಾಲ ಮಿಂಚಿಲ್ಲ. ಕೂಡಲೇ ಸಿಎಂ ಅವರು ಸಭೆ ಕರೆದು ಸಮಸ್ಯೆ ಪರಿಹಾರ ಮಾಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಗ್ರಹಿಸಿದರು.
ನೌಕರರ ಬೇಡಿಕೆ ನ್ಯಾಯಯುತ, ಸರ್ಕಾರ ನಿರ್ಲಕ್ಷ್ಯ
ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ರಾಜ್ಯದಲ್ಲಿ ಸಾರಿಗೆ ನೌಕರರ ಹೋರಾಟ ನಡೆಯುತ್ತಿದೆ. ಈ ಸರ್ಕಾರ ಮಹಿಳೆಯರಿಗೆ ಫ್ರೀ ಬಸ್ ಅಂತ ಹೇಳಿದ್ರು. ಇವತ್ತು ಫ್ರೀ ಬಸ್ ಕಟ್ ಆಗಿದೆ. ಇವರು ಹೇಳ್ತಿದ್ದರು ಸರ್ಕಾರ ನಾವು ಪಾಪರ್ ಆಗಿಲ್ಲ.ಹಣ ನಮ್ಮ ಬಳಿ ಕೊಳೆಯುತ್ತಿದೆ. ಖಜಾನೆ ತುಂಬಿ ಆಚೆ ಹೋಗ್ತಿದೆ ಅಂತ ಸಿದ್ದರಾಮಯ್ಯ ಹೇಳಿದ್ದರು. ಮಿಸ್ಟರ್ ಸಿದ್ದರಾಮಯ್ಯ ಅವರೇ ಯಡಿಯೂರಪ್ಪ ಸಿಎಂ ಆಗಿದ್ದಾಗ, ನಾನು ಸಾರಿಗೆ ಮಂತ್ರಿ ಆಗಿದ್ದಾಗ ಶೇ.15% ಸಂಬಳ ಜಾಸ್ತಿ ಮಾಡಿದ್ದರು. ಅಂದೇ ನಾವು ಸುಮಾರು 480 ಕೋಟಿ ರೂ. ಹಣ ಕೊಟ್ಟಿದ್ದೆವು. ಸಾರಿಗೆ ನೌಕರರ ಅವರ ಎಲ್ಲಾ ಬೇಡಿಕೆ ನಾವು ಈಡೇರಿಸಿದ್ದೇವೆ.
ಕೋವಿಡ್ ವೇಳೆ ಬೇರೆ ರಾಜ್ಯದಲ್ಲಿ ಸಂಬಳವೇ ಕೊಟ್ಟಿಲ್ಲ, ಆದ್ರೆ ಹೈಕ್ ಮಾತ್ರ ಕೊಟ್ಟಿರಲಿಲ್ಲ:
ಆದರೆ, ಕೋವಿಡ್‌ನಲ್ಲಿ ಬಿಜೆಪಿ ಅವರು ಹೈಕ್ ಮಾಡಿಲ್ಲ ಅಂತ ಹೇಳ್ತಾರೆ. ಸಿದ್ದರಾಮಯ್ಯ ಅವರೇ ಬೇರೆ ರಾಜ್ಯಗಳಲ್ಲಿ ಸಂಬಳವೇ ಕೊಟ್ಟಿರಲಿಲ್ಲ. ನಾವು ಸಂಬಳ ಕೊಟ್ಟಿದ್ದೆವು. ಕೋವಿಡ್ ಕಾರಣ ಹೈಕ್ ಮಾತ್ರ ಕೊಟ್ಟಿರಲಿಲ್ಲ. ಇಡೀ ವಿಶ್ವದಲ್ಲಿ ಯಾರು ಹೈಕ್ ಕೊಟ್ಟಿರಲಿಲ್ಲ. ಅದನ್ನ ಇಟ್ಟುಕೊಂಡು ನಮ್ಮ ಮೇಲೆ ಆರೋಪ ಮಾಡೋದು ಸರಿಯಲ್ಲ. ನಾವು ಆಗ ಹೈಕ್ ಕೊಟ್ಟಿರಲಿಲ್ಲ. ಈಗ ನೀವು ಕೊಡಿ. ಸಾರಿಗೆ ನೌಕರರ ಹೊಟ್ಟೆ ಮೇಲೆ ಹೊಡೆಯಬೇಡಿ. ನೌಕರರ ನ್ಯಾಯಯುತ ಬೇಡಿಕೆಗಳಿಗೆ ನಮ್ಮ ಬೆಂಬಲ ಇದೆ. ಸಿಎಂ ಸಿದ್ದರಾಮಯ್ಯ ನಿದ್ರೆ ಮಾಡೋದು ಬಿಟ್ಟು ನೌಕರರ ಸಭೆ ಮಾಡಿ ಸಮಸ್ಯೆ ಪರಿಹಾರ ಮಾಡಿ. ನಿಮ್ಮಿಂದ ಸಮಸ್ಯೆ ಪರಿಹಾರ ಮಾಡಲು ಆಗದೇ ಹೋದರೆ ಅಧಿಕಾರ ಬಿಟ್ಟು ಹೋಗಿ. ಜನರಿಗೆ ಈ ಸರ್ಕಾರ ಸಮಸ್ಯೆ ಕೊಡ್ತಿದೆ. ಈ ಶಾಪ ನಿಮಗೆ ತಟ್ಟುತ್ತದೆ. ಇದು ಪಾಪದ ಸರ್ಕಾರ. ನೌಕರರ ಬೇಡಿಕೆ ಸರ್ಕಾರ ಈಡೇರಿಸಬೇಕು ಎಂದು ಆರ್. ಅಶೋಕ್ ಆಗ್ರಹಿಸಿದರು.
