ಬೆಂಗಳೂರು(ಜೂ.02): ರಾಜ್ಯದಲ್ಲಿ ಆನ್‌ಲೈನ್‌ ಬೆಟ್ಟಿಂಗ್‌ ಮತ್ತು ಗ್ಯಾಂಬ್ಲಿಂಗ್‌ ನಿಷೇಧಿಸುವ ಕುರಿತ ನಿಲುವು ತಿಳಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ 15 ದಿನಗಳ ಕಾಲಾವಕಾಶ ನೀಡಿದೆ. 

ರಾಜ್ಯದಲ್ಲಿ ಆನ್‌ಲೈನ್‌ ಬೆಟ್ಟಿಂಗ್‌ ಮತ್ತು ಗ್ಯಾಂಬ್ಲಿಂಗ್‌ ನಿಷೇಧಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ದಾವಣಗೆರೆಯ ಡಿ.ಆರ್‌. ಶಾರದಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ನ್ಯಾಯಪೀಠ ಮಂಗಳವಾರ ಈ ಸೂಚನೆ ನೀಡಿದೆ. ಆನ್‌ಲೈನ್‌ ಜೂಜು ಮತ್ತಿತರ ಆಟಗಳಿಂದ ಸಮಾಜದ ಆರೋಗ್ಯ ಕದಡುತ್ತಿದೆ. ಹೀಗಾಗಿ ಅವುಗಳನ್ನು ನಿಷೇಧಿಸುವಂತೆ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದಾರೆ.

ಶಾಲೆ ಆರಂಭವಾಗದಿದ್ದರೆ ಮುಂದೇನು?: ಹೈಕೋರ್ಟ್‌

ಅರ್ಜಿಯಲ್ಲಿ ಕೇಂದ್ರ ಸರ್ಕಾರವನ್ನು ಸಹ ಪ್ರತಿವಾದಿಯನ್ನಾಗಿಸಬೇಕು. ಆನ್‌ಲೈನ್‌ ಬೆಟ್ಟಿಂಗ್‌ ನಿಷೇಧ ಕುರಿತು ಕೇಂದ್ರ ಸರ್ಕಾರದ ನಿಲುವನ್ನು ನ್ಯಾಯಾಲಯ ತಿಳಿದುಕೊಳ್ಳಬೇಕು ಎಂದು ಸರ್ಕಾರದ ಪರ ವಕೀಲು ಕೋರಿದರು. ಅದಕ್ಕೆ ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲ ಶ್ರೀಧರ್‌ ಪ್ರಭು, ಭಾರತದ ಸಂವಿಧಾನದ ಏಳನೇ ಶೆಡ್ಯೂಲ್‌ನ ಎರಡನೇ ಪಟ್ಟಿಯ 34ನೇ ಅಂಶದ ಪ್ರಕಾರ, ಬೆಟ್ಟಿಂಗ್‌ ಮತ್ತು ಗ್ಯಾಬ್ಲಿಂಗ್‌ ವಿಚಾರಗಳು ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳಾಗಿವೆ. ಆ ಕುರಿತು ಕಾನೂನುಗಳನ್ನು ರಾಜ್ಯ ಸರ್ಕಾರವೇ ರೂಪಿಸಬಹುದು. ಹೀಗಾಗಿ, ಅರ್ಜಿಯಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿವಾದಿ ಮಾಡುವ ಪ್ರಮೇಯವಿಲ್ಲ. ಈಗಾಗಲೇ ಕೇರಳ ಮತ್ತು ತಮಿಳುನಾಡು ಸೇರಿ ಇತರೆ ರಾಜ್ಯಗಳಲ್ಲಿ ಆನ್‌ಲೈನ್‌ ಬೆಟ್ಟಿಂಗ್‌ ನಿಷೇಧಿಸಲಾಗಿದೆ ಎಂದು ಮಾಹಿತಿ ನೀಡಿದರು.

ಅರ್ಜಿದಾರರ ವಾದವನ್ನು ನ್ಯಾಯಪೀಠ ಪರಿಗಣಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಪರ ವಕೀಲರು, ಈ ಕುರಿತು 15 ದಿನಗಳಲ್ಲಿ ಸರ್ಕಾರದ ನಿಲುವು ತಿಳಿಸಲಾಗುವುದು ಎಂದರು. ಈ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಜೂನ್‌ 22ಕ್ಕೆ ಮುಂದೂಡಿತು.