ಕೆಆರ್‌ಎಸ್ ಸುತ್ತ ಗಣಿಗಾರಿಕೆಗೆ ಹೈಕೋರ್ಟ್ ಹಸಿರು ನಿಶಾನೆ
* ಲೈಸೆನ್ಸ್ ರದ್ದುಗೊಳಿಸಿದ್ದ ಡೀಸಿ ಆದೇಶವೇ ರದ್ದು
* ಕೆಆರ್‌ಎಸ್ ಸುತ್ತ ಗಣಿಗಾರಿಕೆಗೆ ಅನುಮತಿ
* ಮಂಡ್ಯ ಜಿಲ್ಲೆಯಲ್ಲಿರುವ ಕೃಷ್ಣರಾಜಸಾಗರ ಜಲಾಶಯ
ಬೆಂಗಳೂರು(ಸೆ.17): ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯ (ಕೆಆರ್‌ಎಸ್) ಸುತ್ತಮುತ್ತಲಿನ 28 ಕಲ್ಲುಗಣಿಗಾರಿಕೆ ಘಟಕಗಳ ಪರವಾನಗಿ ರದ್ದುಗೊಳಿಸಿ ಮಂಡ್ಯ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿ ಹೈಕೋರ್ಟ್ ಗುರುವಾರ ಆದೇಶಿಸಿದೆ
ಜಿಲ್ಲಾಧಿಕಾರಿಯ ಆದೇಶ ಪ್ರಶ್ನಿಸಿ ಮೆರ್ಸೆಸ್ ಶ್ರೀ ಲಕ್ಷ್ಮೀವೆಂಕಟೇಶ್ವರ ಕಲ್ಲು ಗಣಿಗಾರಿಕೆ ಘಟಕ ಸೇರಿದಂತೆ 28 ಕಲ್ಲು ಗಣಿಗಾರಿಕೆ ಕಂಪನಿ ಹಾಗೂ ಅವುಗಳ ಮಾಲೀಕರು ಸಲ್ಲಿಸಿದ್ದ ಪ್ರತ್ಯೇಕ ತಕರಾರು ಅರ್ಜಿಗಳನ್ನು ಪುರಸ್ಕರಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಮಂಡ್ಯ ಜಿಲ್ಲಾಧಿಕಾರಿ ಕಲ್ಲು ಗಣಿಗಾರಿಕೆ ಘಟಕಗಳಿಗೆ ನೀಡಲಾಗಿದ್ದ ಪರವಾನಗಿಯನ್ನು ರದ್ದಪಡಿಸುವ ಮುನ್ನ ಕಲ್ಲು ಗಣಿಗಾರಿಕೆಯ ಘಟಕಗಳ ಮಾಲೀಕರ ಅಹವಾಲು ಆಲಿಸಿಲ್ಲ. ಹಾಗಾಗಿ ಜಿಲ್ಲಾಧಿಕಾರಿಯ ಆದೇಶ ರದ್ದುಪಡಿಸಲಾಗುತ್ತಿದೆ. ಆದರೆ, ಮತ್ತೆ ಕಲ್ಲು ಗಣಿಗಾರಿಕೆ ಘಟಕಗಳ ಮಾಲೀಕರಿಗೆ ಜಿಲ್ಲಾಧಿಕಾರಿ ಮತ್ತೆ ನೋಟಿಸ್ ಜಾರಿ ಮಾಡಿ, ಆಕ್ಷೇಪಣೆ ಸಲ್ಲಿಸಲು 15 ದಿನ ಕಾಲಾವಕಾಶ ನೀಡಬೇಕು. ಘಟಕಗಳ ಮಾಲೀಕರ ಅಹವಾಲು ಆಲಿಸಿದ ನಂತರ ಕಾನೂನು ಪ್ರಕಾರ ತೀರ್ಮಾನ ಕೈಗೊಳ್ಳಬಹುದು ಎಂದು ಆದೇಶದಲ್ಲಿ ನ್ಯಾಯಪೀಠ ತಿಳಿಸಿದೆ.
ಸಚಿವ ಹಾಲಪ್ಪ ಭೇಟಿ ಮಾಡಿದ ಸಂಸದೆ ಸುಮಲತಾ : ದೂರು
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಕಲ್ಲು ಗಣಿಗಾರಿಕೆ ನೀಡಲಾಗಿದ್ದ ಪರವಾನಗಿ ರದ್ದುಪಡಿಸಿ ಜಿಲ್ಲಾ ಕಲ್ಲು ಗಣಿಗಾರಿಕೆ ನಿಯಂತ್ರಣ ಮತ್ತು ಪರವಾನಗಿ ಪ್ರಾಧಿಕಾರದ ಮುಖ್ಯಸ್ಥರೂ ಆಗಿರುವ ಮಂಡ್ಯ ಜಿಲ್ಲಾಧಿಕಾರಿ 2021ರ ಜು.31ರಂದು ಆದೇಶ ಹೊರಡಿಸಿದ್ದಾರೆ. ಆದರೆ, ಪರವಾನಗಿ ರದ್ದುಪಡಿಸುವ ಮುನ್ನ ಕಲ್ಲು ಗಣಿಗಾರಿಕೆ ಘಟಕಗಳಿಗೆ ನೋಟಿಸ್ ನೀಡಿಲ್ಲ ಮತ್ತು ಘಟಕಗಳ ಮಾಲೀಕರ ವಾದ ಆಲಿಸಿಲ್ಲ ಎಂದು ಅರ್ಜಿದಾರರು ದೂರಿದ್ದರು.
ಜಿಲ್ಲಾ ಮುಖ್ಯರಸ್ತೆಯ 100 ಮೀಟರ್ ವ್ಯಾಪ್ತಿಯೊಳಗೆ ಬರುತ್ತದೆ ಎಂಬ ಕಾರಣ ನೀಡಿ ಕರ್ನಾಟಕ ಕಲ್ಲು ಗಣಿಗಾರಿಕೆ ನಿಯಂತ್ರಣ ಕಾಯ್ದೆಯಡಿ ಪರವಾನಗಿ ರದ್ದುಪಡಿಸಲಾಗಿದೆ. ಆದರೆ, ಕಾಯ್ದೆಯು ಜಾರಿಗೆ ಬರುವ ಹಲವು ವರ್ಷಗಳ ಮುನ್ನವೇ ಅರ್ಜಿದಾರರ ಕಲ್ಲು ಗಣಿಗಾರಿಕೆ ಘಟಕಗಳು ಸ್ಥಾಪನೆಗೊಂಡು ಕಾರ್ಯಚರಣೆ ನಡೆಸುತ್ತಿವೆ. ಪರವಾನಗಿ ನೀಡುವಾಗ ಸರ್ಕಾರದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದರು. ನಿಯಮಾನುಸಾರ ಘಟಕ ಆರಂಭಿಸುತ್ತಿದ್ದ ಕಾರಣಕ್ಕೆ ಪರವಾನಗಿ ನೀಡಲಾಗಿತ್ತು ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.
ಅಲ್ಲದೇ, ಸರ್ಕಾರ ಪರವಾನಗಿ ರದ್ದುಪಡಿಸಿರುವುದರ ಜೊತೆಗೆ 15 ದಿನಗಳಲ್ಲಿ ಕಲ್ಲು ಗಣಿಗಾರಿಕೆ ಘಟಕವನ್ನು ತೆರವುಗೊಳಿಸಬೇಕು ಎಂದು ಸೂಚಿಸಿದೆ. ಅಧಿಕೃತವಾಗಿ ಪರವಾನಗಿ ಪಡೆದುಕೊಂಡು ಕೋಟ್ಯಂತರ ರು. ಬಂಡವಾಳ ಹೂಡಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ. ಏಕಾಏಕಿ ಮತ್ತು ಅವಸರದಲ್ಲಿ ಪರವಾನಗಿ ರದ್ದುಪಡಿಸಿ ಆದೇಶ ಹೊರಡಿಸಲಾಗಿದೆ. ಈ ಆದೇಶ ಕರ್ನಾಟಕ ಕಲ್ಲು ಗಣಿಗಾರಿಕೆ ನಿಯಂತ್ರಣ ಕಾಯ್ದೆ -2011ರ ಸೆಕ್ಷನ್ 11ಕ್ಕೆ ವಿರುದ್ಧವಾಗಿದೆ. ಹಾಗಾಗಿ ಪರವಾನಗಿ ರದ್ದುಪಡಿಸಿದ ಮಂಡ್ಯ ಜಿಲ್ಲಾಧಿಕಾರಿಯ ಆದೇಶ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದರು.