* ಅಪರೂಪದ ಕಾಯಿಲೆ; ಮಗುವಿಗೆ ಅಪಾಯವಾದ್ರೆ ಪ್ರತಿವಾದಿಗಳೇ ಹೊಣೆ* ಮಗುವನ್ನು ತಕ್ಷಣ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ಕರೆದೊಯ್ಯಲು ಸೂಚನೆ* ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಮಗುವಿನ ಆರೋಗ್ಯ
ಬೆಂಗಳೂರು(ಅ.02): ಅಪರೂಪದ ಬೆನ್ನುಮೂಳೆ ಸ್ನಾಯುಗಳ ಕ್ಷೀಣತೆ ಕಾಯಿಲೆಯಿಂದ ಬಳಲುತ್ತಿರುವ ನಗರದ ಒಂದೂವರೆ ವರ್ಷದ ಮಗು ಎನ್. ಜನೀಶ್‌ನನ್ನು ಆರೋಗ್ಯ ತಪಾಸಣೆಗಾಗಿ ತಕ್ಷಣವೇ ನಗರದ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ (ಐಜಿಐಸಿಎಚ್) ವೈದ್ಯರ ಬಳಿಗೆ ಕರೆದೊಯ್ಯಬೇಕು ಎಂದು ಮಗುವಿನ ಪಾಲಕರಿಗೆ ಹೈಕೋರ್ಟ್(High Court) ಶುಕ್ರವಾರ ನಿರ್ದೇಶಿಸಿದೆ.
ಜನೀಶ್ ಚಿಕಿತ್ಸೆಗೆ(Treatment) ಆರ್ಥಿಕ ನೆರವು ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸುವಂತೆ ಕೋರಿ ಮಗುವಿನ(Child) ತಂದೆ ನವೀನ್ ಕುಮಾರ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು ಈ ನಿರ್ದೇಶನ ನೀಡಿದರು.
ಹೈಕೋರ್ಟ್ ನಿರ್ದೇಶನದಂತೆ ಕೇಂದ್ರ ಸರ್ಕಾರದ ಪರ ವಕೀಲರು ಶುಕ್ರವಾರ ಮೆಮೊ ಸಲ್ಲಿಸಿ, ಮಗುವನ್ನು ತಪಾಸಣೆಗಾಗಿ ಐಜಿಐಸಿಎಚ್‌ಗೆ ಕರೆದೊಯ್ಯಬಹುದು. ಅಲ್ಲಿನ ವೈದ್ಯ ಡಾ. ಜಿ.ಎನ್. ಸಂಜೀವ್ ಮಗುವಿನ ಆರೋಗ್ಯ ಸ್ಥಿತಿ ಕುರಿತು ತಪಾಸಣೆ ನಡೆಸಿ, ತಜ್ಞರ ಸಮಿತಿಗೆ ವರದಿ ಸಲ್ಲಿಸುತ್ತಾರೆ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಬಹುದು ಎಂದು ವಿವರಿಸಿದರು.
ಹೈಕೋರ್ಟ್‌ಗೇ ಸವಾಲು ಹಾಕಿದ ವಕೀಲನಿಗೆ 50,000 ದಂಡ..!
ಅದನ್ನು ಪರಿಗಣಿಸಿದ ಪೀಠ, ಮಗುವನ್ನು ಶುಕ್ರವಾರವೇ ವೈದ್ಯ ಜಿ.ಎನ್. ಸಂಜೀವ್ ಅವರ ಬಳಿ ಕರೆದೊಯ್ಯಬೇಕು. ಮಗುವಿನ ಪಾಲಕರು ಅಥವಾ ಪೋಷಕರು ಕೂಡಲೇ ವೈದ್ಯರನ್ನು ಇ-ಮೇಲ್ ಅಥವಾ ದೂರವಾಣಿ ಕರೆ ಮೂಲಕ ಸಂಪರ್ಕಿಸಬೇಕು. ವೈದ್ಯರು ತಕ್ಷಣವೇ ಸಕಾರಾತ್ಮಕವಾಗಿ ಸ್ಪಂದಿಸಬೇಕು. ವೈದ್ಯರು ಸೂಕ್ತವಾಗಿ ಸ್ಪಂದಿಸದಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಹಾಗೆಯೇ, ಅರ್ಜಿಯಲ್ಲಿನ ಪ್ರತಿವಾದಿಗಳ ವಿಳಂಬದಿಂದ ಮಗುವಿನ ಜೀವಕ್ಕೆ ಅಪಾಯವಾದರೆ, ಅದಕ್ಕೆ ಅವರೇ ಹೊಣೆಯಾಗಲಿದ್ದಾರೆ ಎಂದು ಎಚ್ಚರಿಸಿತು.
ಜನೀಶ್ ಅಪರೂಪದ ಬೆನ್ನುಮೂಳೆ ಸ್ನಾಯುಗಳ ಕ್ಷೀಣತೆ (ಸ್ಪೈನಲ್ ಮಸ್ಕುಲರ್ ಆಸ್ಟೊರಫಿ ಟೈಪ್-1) ಕಾಯಿಲೆಯಿಂದ ಬಳಲುತ್ತಿದ್ದು, ಭಾರತದಲ್ಲಿ ಔಷಧ ಲಭ್ಯವಿಲ್ಲ. ಚಿಕಿತ್ಸೆಗೆ ಅತ್ಯವಿರುವ ಜೊಲ್ಗೆನಿಸ್ಮ ಚುಚ್ಚುಮದ್ದನ್ನು ಅಮೆರಿಕದಿಂದಲೇ ಆಮದು ಮಾಡಿಕೊಳ್ಳಬೇಕಿದೆ. ಅದಕ್ಕಾಗಿ ಸುಮಾರು 16 ಕೋಟಿ ರು. ಖರ್ಚು ಬರುತ್ತದೆ. ಸಾರ್ವಜನಿಕರು ಹಿತೈಷಿಗಳು ಹಾಗೂ ದಾನಿಗಳ ಮೂಲಕ 8.24 ಕೋಟಿ ರು. ಸಂಗ್ರಹಿಸಿದ್ದು, ಉಳಿದ 7.76 ಕೋಟಿ ರು. ಅಗತ್ಯವಿದೆ. 17 ತಿಂಗಳ ಮಗುವಿನ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, 18ರಿಂದ 24 ತಿಂಗಳ ತುಂಬುವುದರೊಳಗೆ ಚಿಕಿತ್ಸೆ ಕೊಡಿಸಬೇಕು. ಇಲ್ಲವಾದರೆ ಜೀವಕ್ಕೆ ಅಪಾಯವಿದೆ. ಇದರಿಂದ ಮಗುವಿನ ಚಿಕಿತ್ಸೆ ಮೇಲ್ವಿಚಾರಣೆಗೆ ವೈದ್ಯಕೀಯ ಮಂಡಳಿ ರಚಿಸಬೇಕು. ಆ ಮಂಡಳಿ ವತಿಯಿಂದಲೇ ಚಿಕಿತ್ಸೆ ಕೊಡಿಸಬಹುದು. ಇಲ್ಲವೆ ಚಿಕಿತ್ಸೆಗೆ ಅಗತ್ಯವಿರುವ ಬಾಕಿ ಹಣವನ್ನು ಕೂಡಲೇ ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
