*   ಹೆದ್ದಾರಿಯಲ್ಲಿ ದೀಪ ಅಳವಡಿಕೆ ಒಪ್ಪಂದ ದಾಖಲೆ ಹಾಜರುಪಡಿಸಿದ ರಮೇಶ್‌*   ಸಾರ್ವಜನಿಕ ಹಿತಾಸಕ್ತಿಯಿಂದಲೇ ಅರ್ಜಿ ದಾಖಲು *   ಹೈಕೋರ್ಟ್‌ಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದ ರಮೇಶ್‌ ನಾಯಕ 

ಬೆಂಗಳೂರು(ಅ.04): ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನೆಲಮಂಗಲದಿಂದ ತುಮಕೂರು ನಡುವಿನ 32.5 ಕಿ.ಮೀ. ಉದ್ದದ ರಸ್ತೆಯಲ್ಲಿ ಬೀದಿ ದೀಪ ಅಳವಡಿಸಿಲ್ಲ ಎಂದು ಆಕ್ಷೇಪಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಅರ್ಜಿದಾರನಿಗೆ ವಿಧಿಸಿದ್ದ 50 ಸಾವಿರ ರುಪಾಯಿ ದಂಡವನ್ನು ಹೈಕೋರ್ಟ್‌(High Court) ಕೈ ಬಿಟ್ಟಿದೆ.

ಈ ಕುರಿತು ವಕೀಲ(Advocate) ಎಲ್‌.ರಮೇಶ್‌ ನಾಯಕ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್‌.ಸಿ.ಶರ್ಮಾ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ 2021ರ ಸೆ.22ರಂದು ವಜಾಗೊಳಿಸಿತ್ತು. ಹೆದ್ದಾರಿಯಲ್ಲಿ ಕಡ್ಡಾಯವಾಗಿ ಬೀದಿ ದೀಪ ಅಳವಡಿಸಬೇಕು ಎಂಬುವುದನ್ನು ಪ್ರತಿಪಾದಿಸುವ ನಿಯಮಗಳು ಮತ್ತು ಆ ಕುರಿತ ದಾಖಲೆಗಳನ್ನು ಅರ್ಜಿದಾರರು ನ್ಯಾಯಾಲಯಕ್ಕೆ ಒದಗಿಸಿಲ್ಲ. ಟೋಲ್‌ ಪಾವತಿ ವಿಚಾರದಲ್ಲಿ ಟೋಲ್‌ ಸಂಗ್ರಹ ಸಂಸ್ಥೆ ವಿರುದ್ಧ ಅರ್ಜಿದಾರರಿಗೆ ಕುಂದುಕೊರತೆಯಿದ್ದು, ಎಫ್‌ಐಆರ್‌ ಸಹ ದಾಖಲಿಸಿದ್ದಾರೆ. ಮತ್ತೊಂದೆಡೆ ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಸಿದ್ದಾರೆ. ಇದು ಕಾನೂನಿನ ಪ್ರಕ್ರಿಯೆ ದುರ್ಬಳಕೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದ ಹೈಕೋರ್ಟ್‌ ಅರ್ಜಿದಾರರಿಗೆ 25 ಸಾವಿರ ರು. ದಂಡ ವಿಧಿಸಿತ್ತು.

ಹೈಕೋರ್ಟ್‌ಗೇ ಸವಾಲು ಹಾಕಿದ ವಕೀಲನಿಗೆ 50,000 ದಂಡ..!

ಆಗ ರಮೇಶ್‌ ನಾಯಕ ವಾದ ಮಂಡಿಸಿ, ಹೆದ್ದಾರಿಯಲ್ಲಿ ಬೀದಿ ದೀಪ ಅಳವಡಿಸುವ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಹೆದ್ದಾರಿ ನಿರ್ವಹಣೆ ಗುತ್ತಿಗೆ ಪಡೆದಿರುವ ಜೆಎಎಸ್‌ಎಸ್‌ ಟೋಲ್‌ ರೋಡ್‌ ಕಂಪನಿ ನಡುವಿನ ಒಪ್ಪಂದ ನಡೆದಿದೆ. ಕಾಲಾವಕಾಶ ನೀಡಿದರೆ ದಾಖಲೆ ಸಲ್ಲಿಸಲಾಗುವುದು. ಸಾರ್ವಜನಿಕ ಹಿತಾಸಕ್ತಿಯಿಂದಲೇ ಅರ್ಜಿ ದಾಖಲಿಸಲಾಗಿದೆ. ಅಗತ್ಯವಾದರೆ ಆ ಕುರಿತು ನನ್ನ ವಿರುದ್ಧ ವಿಚಾರಣೆಗೂ ಆದೇಶಿಸಬಹುದು. ಸ್ವ ಹಿತಾಸಕ್ತಿಯಿಂದ ಅರ್ಜಿ ದಾಖಲಿಸಿರುವುದು ಸಾಬೀತಾದರೆ 50 ಸಾವಿರ ರು. ದಂಡ(Fine) ಬೇಕಾದರೂ ಪಾವತಿಸುತ್ತೇನೆ ಎಂದು ತಿಳಿಸಿದ್ದರು.

ಅದನ್ನು ಪರಿಗಣಿಸಿದ್ದ ಹೈಕೋರ್ಟ್‌ ದಂಡ ಮೊತ್ತವನ್ನು 50 ಸಾವಿರ ರು.ಗೆ ಹೆಚ್ಚಿಸಿತ್ತು. ಸದ್ಯ ಆದೇಶ ಪ್ರತಿಯನ್ನು ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಅರ್ಜಿದಾರರಿಗೆ ವಿಧಿಸಿದ್ದ ದಂಡವನ್ನು ಕೈಬಿಟ್ಟಿದೆ. ಪ್ರಕರಣದಲ್ಲಿ 50 ಸಾವಿರ ರು. ದಂಡ ವಿಧಿಸಿರುವುದನ್ನು ಹಿಂಪಡೆಯುವಂತೆ ಕೋರಿ ವಕೀಲ ರಮೇಶ್‌ ನಾಯಕ, ಸೆ.27ರಂದು ಹೈಕೋರ್ಟ್‌ಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಹೆದ್ದಾರಿಯಲ್ಲಿ ಬೀದಿ ದೀಪ ಅಳವಡಿಸುವ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಜೆಎಎಸ್‌ಎಸ್‌ ಟೋಲ್‌ ರೋಡ್‌ ಕಂಪನಿ ನಡುವಿನ ಒಪ್ಪಂದದ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.