* ರಾಜ್ಯ ಹೈಕೋರ್ಟ್‌ ಕಲಾಪ ಲೈವ್‌!* ಇತಿಹಾಸದಲ್ಲಿ ಮೊದಲ ಬಾರಿ ಯೂಟ್ಯೂಬ್‌ನಲ್ಲಿ ನೇರಪ್ರಸಾರ* ಪ್ರಾಯೋಗಿಕವಾಗಿ 2 ಅರ್ಜಿ ವಿಚಾರಣೆ* ಎಲ್ಲರ ವೀಕ್ಷಣೆಗೆ ಲಭ್ಯ

ಬೆಂಗಳೂರು(ಜೂ.01): ಸುಪ್ರೀಂಕೋರ್ಟ್‌ ತನ್ನ ಕಲಾಪಗಳನ್ನು ನೇರಪ್ರಸಾರ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿರುವ ಹೊತ್ತಿನಲ್ಲೇ, ಇನ್ನೂ ಒಂದು ಒಂದು ಹೆಜ್ಜೆ ಮುಂದಿಟ್ಟಿರುವ ರಾಜ್ಯ ಹೈಕೋರ್ಟ್‌, ಎರಡು ಅರ್ಜಿಗಳ ವಿಚಾರಣೆ ಕುರಿತ ಕಲಾಪವನ್ನು ಸೋಮವಾರ ಯೂಟ್ಯೂಬ್‌ನಲ್ಲಿ ನೇರಪ್ರಸಾರ ಮಾಡುವ ಮೂಲಕ ಐತಿಹಾಸಿಕ ಹೆಜ್ಜೆ ಇಟ್ಟಿದೆ. ರಾಜ್ಯದ ನ್ಯಾಯಾಂಗ ಇತಿಹಾಸದಲ್ಲಿ ಮೊಟ್ಟಮೊದಲ ಈ ಯಶಸ್ವಿ ಪ್ರಯೋಗದ ಮೂಲಕ ಪಾರದರ್ಶಕತೆ ಕಾಯ್ದುಕೊಳ್ಳುವಲ್ಲಿ ರಾಜ್ಯ ಹೈಕೋರ್ಟ್‌ ಐತಿಹಾಸಿಕ ಹೆಜ್ಜೆ ಇಟ್ಟಿದೆ.

18 ಮೇಲ್ಪಟ್ಟವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಇದೆ, ಸರ್ಕಾರದ ಬಳಿ ಏಕಿಲ್ಲ: ಹೈಕೋರ್ಟ್‌ ಪ್ರಶ್ನೆ

ತಂತ್ರಜಾನ ಬೆಳೆದಂತೆ ಕೋರ್ಟ್‌ ಕಲಾಪಗಳನ್ನು ನೇರ ಪ್ರಸಾರ ಮಾಡಬೇಕೆಂಬ ಮಾತುಗಳು ಹಲವು ವರ್ಷಗಳಿಂದ ನ್ಯಾಯಾಂಗ ಮತ್ತು ಸಾರ್ವಜನಿಕ ವಲಯದಲ್ಲಿ ಪದೇ ಪದೇ ಕೇಳಿಬರುತ್ತಿತ್ತು. ಅದಕ್ಕೆ ಪೂರಕವಾಗಿ ನ್ಯಾಯಾಲಯದ ಕಲಾಪಗಳನ್ನು ಸಾಮಾನ್ಯ ಜನರಿಗೂ ತಲುಪಿಸುವ ನಿಟ್ಟಿನಲ್ಲಿ ನೇರ ಪ್ರಸಾರ ಮಾಡಬೇಕೆಂಬ ಆಶಯ ಮತ್ತು ಅಭಿಪ್ರಾಯವನ್ನು ಸುಪ್ರೀಂಕೋರ್ಟ್‌ ಸಹ ವ್ಯಕ್ತಪಡಿಸಿತ್ತು. ಅಲ್ಲದೆ, ಇ-ಕೋರ್ಟ್‌ ಕಲಾಪಗಳ ಕುರಿತು ಕೆಲ ದಿನಗಳ ಹಿಂದಷ್ಟೇ ಮಾರ್ಗಸೂಚಿ ಸಹ ಹೊರಡಿಸಿತ್ತು. ಅದರನ್ವಯ ಇದೀಗ ರಾಜ್ಯ ಹೈಕೋರ್ಟ್‌, ಸೋಮವಾರ ತನ್ನ ಕಲಾಪನ್ನು ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಿ ರಾಷ್ಟ್ರಕ್ಕೆ ಮಾದರಿಯಾಗಿದೆ.

2 ಅರ್ಜಿ ವಿಚಾರಣೆ ನೇರಪ್ರಸಾರ:

ಕಾರವಾರ ವಾಣಿಜ್ಯ ಬಂದರು ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ಅಭಿವೃದ್ಧಿ ಚಟುವಟಿಕೆ ನಡೆಸಲಾಗುತ್ತಿದೆ ಎಂದು ಆಕ್ಷೇಪಿಸಿ ‘ಬೈತಕೊಲ್‌ ಬಂದರು ನಿರಾಶ್ರಿತರ ಯಾಂತ್ರೀಕೃತ ದೋಣಿ ಮೀನುಗಾರರ ಸಹಕಾರ ಸಂಘ ನಿಯಮಿತ’ ಹಾಗೂ ‘ಉತ್ತರ ಕನ್ನಡ ಜಿಲ್ಲಾ ಮೀನುಗಾರರ ಸಂಘ’ ಸಲ್ಲಿಸಿದ್ದ ಹೈಕೋರ್ಟ್‌ಗೆ ಎರಡು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿದ್ದವು.

ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ವಿಭಾಗೀಯ ಪೀಠ ಸೋಮವಾರ ಮಧ್ಯಾಹ್ನ 2.40ಕ್ಕೆ ನಡೆಸಿದ ವಿಚಾರಣೆ ಪ್ರಕ್ರಿಯೆಯನ್ನು ಪ್ರಾಯೋಗಿಕವಾಗಿ ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಲಾಯಿತು. ಪ್ರಾಯೋಗಿಕವಾದ ಕಾರಣ ಈ ಎರಡು ಅರ್ಜಿಗಳ ವಿಚಾರಣೆಯನ್ನು ಮಾತ್ರ ನೇರ ಪ್ರಸಾರ ಮಾಡಲಾಯಿತು.

ಆಕ್ಸಿಜನ್‌ ಸಮಸ್ಯೆ ಇದ್ರೆ ಕೇಂದ್ರದ ಗಮನಕ್ಕೆ ತನ್ನಿ: ಹೈಕೋರ್ಟ್‌

ಈಗಾಗಲೇ ಗುಜರಾತ್‌ ಹೈಕೋರ್ಟ್‌ನಲ್ಲಿ ಪ್ರಾಯೋಗಿಕವಾಗಿ ನ್ಯಾಯಾಲಯದ ಕಲಾಪವನ್ನು ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಲಾಗಿದೆ. ಇದೀಗ ಪ್ರಾಯೋಗಿಕವಾಗಿ ಕರ್ನಾಟಕ ಹೈಕೋರ್ಟ್‌ ಕಲಾಪವನ್ನು ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡುವ ಮಹತ್ವದ ಕ್ರಮವನ್ನು ಜಾರಿ ಮಾಡಲಾಗಿದೆ. ನೇರ ಪ್ರಸಾರವಾದ ನ್ಯಾಯಾಲಯದ ಕಲಾಪ ವೀಕ್ಷಿಸಲು https://www.youtube/watch?v=p-4vySjITYY ಯೂಟ್ಯೂಬ್‌ ಲಿಂಕ್‌ ವೀಕ್ಷಿಸಬಹುದು.

ಸೌಕರ್ಯ ಮೇಲ್ಜರ್ಜೆಗೇರಿಸುವ ಅನಿವಾರ್ಯತೆ ಇದೆ

ಪ್ರಾಯೋಗಿಕ ಹಂತವಾಗಿ ಎರಡು ಪ್ರಕರಣಗಳ ಸಂಬಂಧ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ಅವರ ನೇತೃತ್ವದ ವಿಭಾಗೀಯ ಪೀಠದ ವಿಚಾರಣೆಯನ್ನು ಯೂಟ್ಯೂಬ್‌ನಲ್ಲಿ ನೇರಪ್ರಸಾರ ಮಾಡಲಾಗಿದೆ. ತಾಂತ್ರಿಕ ಸಮಸ್ಯೆಗಳು ತುಂಬಾ ಇದೆ. ಸದ್ಯ ಲಭ್ಯವಿರುವ ಮೂಲ ಸೌಕರ್ಯಗಳು ಒಂದೂವರೆ ದಶಕದಷ್ಟುಹಳೆಯದು. ಅವುಗಳನ್ನು ಮೇಲ್ದರ್ಜೆಗೆ ಏರಿಸಬೇಕಿದೆ. ಇಷ್ಟುದಿನ ವಚ್ರ್ಯೂಯೆಲ್‌ ಕೋರ್ಟ್‌ ನಡೆಸಲಾಗುತ್ತಿದೆ. ಆ ಕಲಾಪದ ಲಿಂಕ್‌ ಅನ್ನು ಯೂಟ್ಯೂಬ್‌ ಇಂಟರ್‌ಫೇಸ್‌ ಮಾಡಿ ನೇರ ಪ್ರಸಾರ ಮಾಡಲಾಗಿದೆ. ಇದರ ಸಾಧಕ-ಬಾಧಕಗಳನ್ನು ಗಮನಿಸಿ ಬೇರೆ ನ್ಯಾಯಪೀಠಗಳ ಕಲಾಪಗಳನ್ನು ನೇರ ಪ್ರಸಾರ ಮಾಡುವ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನಿಸಲಾಗುವುದು ಎಂದು ಹೈಕೋರ್ಟ್‌ ರಿಜಿಸ್ಟ್ರಾರ್‌ ಕಚೇರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಕಲಿ ದಾಖಲೆ ಸೃಷ್ಟಿ: ಬಿಜೆಪಿ ವಿರುದ್ಧ ಕಾಂಗ್ರೆಸ್‌ ದೂರು, ಖಾದರ್‌

ನೇರ ಪ್ರಸಾರದ ಲಾಭ

ಮೊಬೈಲ್‌, ಕಂಪ್ಯೂಟರ್‌, ಲ್ಯಾಪ್‌ಟಾಪ್‌ಗಳ ಮೂಲಕ ವೀಕ್ಷಣೆ

ವಕೀಲರ ವಾದ, ತೀರ್ಪುಗಳ ಸಂಪೂರ್ಣ ಮಾಹಿತಿ ಲಭ್ಯ

ಕಕ್ಷಿದಾರರಿಗೆ ದೂರದ ಊರುಗಳಿಂದ ಬರುವ ಅಗತ್ಯವಿಲ್ಲ, ಸಮಯ, ಹಣ ಉಳಿತಾಯ

ಕೋರ್ಟ್‌ನಲ್ಲಿ ಜನ ಸಂದಣಿ ಕಡಿಮೆ. ನ್ಯಾಯಾಂಗದಲ್ಲಿ ಪಾರದರ್ಶಕತೆ