ಆರೋಪಿತರಿಗೆ ಎಫ್ಐಆರ್ ಪ್ರತಿ ನೀಡಲು ನಿರಾಕರಿಸುವ ಪೊಲೀಸ್ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಬೇಕಾಗುತ್ತದೆ ಎಂದು ಹೈಕೋರ್ಟ್ ಕಟು ಎಚ್ಚರಿಕೆ ನೀಡಿದೆ. ಡ್ರೋನ್ ಪತನ ಪ್ರಕರಣದಲ್ಲಿ ಆರೋಪಿತರಿಗೆ ಎಫ್ಐಆರ್ ಪ್ರತಿ ಪಡೆಯುವ ಹಕ್ಕಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಬೆಂಗಳೂರು (ಏ.12): ಅಪರಾಧ ಪ್ರಕರಣದಲ್ಲಿ ದಾಖಲಾಗುವ ಎಫ್ಐಆರ್‌ ಪ್ರತಿಯನ್ನು ಆರೋಪಿತರಿಗೆ ಒದಗಿಸದಿರುವ ಪೊಲೀಸ್‌ ಅಧಿಕಾರಿಗಳ ನಡೆ ಇಲಾಖಾ ವಿಚಾರಣೆ ನಡೆಸಲು ಅವಕಾಶ ಸೃಷ್ಟಿಸಲಿದೆ ಎಂದು ಹೈಕೋರ್ಟ್ ಪೊಲೀಸರಿಗೆ ಕಟು ಎಚ್ಚರಿಕೆ ನೀಡಿದೆ.

Add Asianetnews Kannada as a Preferred SourcegooglePreferred

ತಾನು ಸಂಶೋಧಿಸಿ, ಅಭಿವೃದ್ಧಿಪಡಿಸಿದ ಡ್ರೋನ್‌ ಖಾಸಗಿ ಜಮೀನಿನಲ್ಲಿ ಬಿದ್ದ ಕಾರಣ ಜಮೀನು ಅತಿಕ್ರಮ ಪ್ರವೇಶ ಮತ್ತು ಮಾಲೀಕರಿಗೆ ಅಪಾಯ ಉಂಟು ಮಾಡಿದ ಆರೋಪ ಸಂಬಂಧ ದೊಡ್ಡಬಳ್ಳಾಪುರ ಗ್ರಾಮೀಣ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದು ಕೋರಿ ಸೇನಾಪಡೆಗಳಿಗೆ ಡ್ರೋನ್‌ ಪೂರೈಸುವ ಸಂಸ್ಥೆ ಮೆ.ನ್ಯೂ ಸ್ಪೇಸ್ ರಿಸರ್ಚ್ ಆ್ಯಂಡ್‌ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಈ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ಅರ್ಜಿದಾರ ಸಂಸ್ಥೆ ವಿರುದ್ಧದ ಎಫ್ಐಆರ್ ರದ್ದುಪಡಿಸಿದೆ. ಇದೇ ವೇಳೆ ಅರ್ಜಿದಾರ ಸಂಸ್ಥೆಗೆ ಎಫ್ಐಆರ್‌ ಪ್ರತಿ ನೀಡಲು ನಿರಾಕರಿಸಿದ್ದ ಪೊಲೀಸರ ನಡೆಗೆ ತೀವ್ರವಾಗಿ ಆಕ್ಷೇಪಿಸಿದೆ.

ಆರೋಪಿತರಿಗೆ ಹಕ್ಕಿದೆ:

ಎಫ್ಐಆರ್ ದಾಖಲಾದ ಬಳಿಕ ತಕ್ಷಣ ಅದರ ಪ್ರತಿ ಪಡೆಯುವ ಹಕ್ಕನ್ನು ಆರೋಪಿತರು ಹೊಂದಿರುತ್ತಾರೆ. ಎಫ್ಐಆರ್ ಆನ್‌ಲೈನ್‌ನಲ್ಲಿ ಲಭ್ಯವಿದೆ ಎಂಬ ಕಾರಣ ನೀಡಿ ಪೊಲೀಸರು ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಎಫ್ಐಆರ್‌ಗೆ ಸಂಬಂಧಿಸಿದ ಅಗತ್ಯ ವಿವರಗಳನ್ನು ನಿರಾಕರಿಸುವುದು ಮಾಹಿತಿ ಪಡೆಯುವ ಹಕ್ಕಿನ ಉಲ್ಲಂಘನೆ. ಎಫ್ಐಆರ್ ಪ್ರತಿ ನೀಡದ ಅಧಿಕಾರಿಗಳ ನಡೆಯನ್ನು ಗಂಭೀರವಾಗಿ ಪರಿಗಣಿಸಲ್ಪಡುತ್ತದೆ. ಸಂಬಂಧಪಟ್ಟ ಠಾಣಾಧಿಕಾರಿ/ಠಾಣಾ ಉಸ್ತುವಾರಿ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಅವಕಾಶ ಸೃಷ್ಟಿಸಲಿದೆ ಎಂದು ಪೀಠ ಎಚ್ಚರಿಕೆ ನೀಡಿದೆ.

ಪ್ರಕರಣದ ಹಿನ್ನೆಲೆ:

ಅರ್ಜಿದಾರ ಸಂಸ್ಥೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ 48 ಎಕರೆ ಜಮೀನನ್ನು ಗುತ್ತಿಗೆಗೆ ಪಡೆದಿದ್ದು ಕಳೆದ ಐದು ವರ್ಷಗಳಿಂದ ಡ್ರೋನ್‌ ಪರೀಕ್ಷಿಸುವ ಉದ್ದೇಶಕ್ಕಾಗಿ ಸಂಶೋಧನೆ ಮಾಡುತ್ತಿದೆ. ಅಲ್ಲದೆ, ಮಾನವ ರಹಿತ ವೈಮಾನಿಕ ವ್ಯವಸ್ಥೆಗಳು ಮತ್ತು ಏರೋಸ್ಪೇಸ್ ತಂತ್ರಜ್ಞಾನಗಳ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ನಿರತವಾಗಿದೆ.

2026ರ ಜ.29ರಂದು ನಿಯಮಿತ ಪರೀಕ್ಷೆಯ ಸಮಯದಲ್ಲಿ ಸುಮಾರು ಏಳು ಕೆ.ಜಿ. ತೂಕದ ಹಗುರವಾದ ಥರ್ಮೋಕೋಲ್ ಸಂಶೋಧನಾ ಡ್ರೋನ್‌ನಲ್ಲಿ ಬ್ಯಾಟರಿ ಸಮಸ್ಯೆ ಉಂಟಾಗಿ ದೊಡ್ಡಬಳ್ಳಾಪುರ ಪಾಲಜೋಗನ ಹಳ್ಳಿಯ ಖಾಸಗಿ ಜಮೀನಲ್ಲಿ ಬಿದ್ದಿತ್ತು. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸ್ ಸಿಬ್ಬಂದಿಗೆ ಸ್ಥಳೀಯರು ಕರೆ ಮಾಡಿ ವಿಚಾರ ತಿಳಿಸಿದ್ದರು. ಬಳಿಕ ಸ್ಥಳಕ್ಕೆ ಬಂದು ಪೊಲೀಸ್ ಸಿಬ್ಬಂದಿ ಡ್ರೋನ್‌ ವಶಕ್ಕೆ ಪಡೆದಿದ್ದು, ಅಪರಿಚಿತ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಅತಿಕ್ರಮಣ ಆರೋಪದಲ್ಲಿ ಸ್ವಯಂಪ್ರೇರಿತ ಎಫ್ಐಆರ್ ದಾಖಲಿಸಿಕೊಂಡಿದ್ದರು. ಅದನ್ನು ಪ್ರಶ್ನಿಸಿ ಅರ್ಜಿದಾರ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು.