ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ ಒಂದು ವಾರ ಭಾರಿ ಮಳೆ ಸಾಧ್ಯತೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ. ಯಾದಗಿರಿಯಲ್ಲಿ ಭಾರಿ ಮಳೆಗೆ ತಾತ್ಕಾಲಿಕ ಸೇತುವೆ ಕೊಚ್ಚಿಹೋಗಿ ಸಂಪರ್ಕ ಕಡಿತ.

ಬೆಂಗಳೂರು (ಜು.17): ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮುಂದಿನ 7 ದಿನಗಳಲ್ಲಿ ವ್ಯಾಪಕವಾಗಿ ಸಾಧಾರಣ ಮಳೆ ಸಾಧ್ಯತೆಯಿದ್ದು, ಅಲ್ಲಲ್ಲಿ ಭಾರಿ ಚದುರಿದ ಸಾಧಾರಣ ಮಳೆ ನಿರೀಕ್ಷಿಸಲಾಗಿದೆ. ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರದಿಂದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇಂದು ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಇಂದು ರಾಜ್ಯದ ಕರಾವಳಿ & ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಂತ ಮಲೆನಾಡು ಜಿಲ್ಲೆಗಳಿಗೆ ವ್ಯಾಪಕವಾಗಿ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಅಲ್ಲಲ್ಲಿ ಅತಿ ಭಾರಿ ಹಾಗೂ ಅತ್ಯಅಧಿಕ ಮಳೆ. ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಹಗುರದಿಂದ ಸಾದಾರಣ ಮಳೆ ಹಾಗೂ ಅಲ್ಲಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಯೆಲ್ಲೋ - ಅಲರ್ಟ್ ಘೋಷಣೆಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ವಿಪತ್ತು ನಿರ್ವಹಣಾ ಪ್ರಾಧಿಕಾರವು ಈ ಕೆಳಗಿನಂತೆ ತುರ್ತು ಕ್ರಮಗಳನ್ನು ಕೈಗೊಂಡಿರುತ್ತದೆ.

ಜಿಲ್ಲಾ ವಿಪತ್ತು ನಿರ್ವಹಣೆಯಿಂದ ಮುನ್ನೆಚ್ಚರಿಕೆ:

  • ನೀರು ಇರುವ ತಗ್ಗು ಪ್ರದೇಶ, ಕೆರೆ. ನದಿತೀರ ಸಮುದ್ರತೀರಕ್ಕೆ ಮಕ್ಕಳು ಹೋಗದಂತೆ ಪಾಲಕರು ಜಾಗ್ರತೆ ವಹಿಸುವುದು.
  • ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಈ ಮೂಲಕ ಸೂಚನೆ ನೀಡಿದೆ.
  • ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರತಕ್ಕದು ಹಾಗೂ ವಿಪತ್ತು ನಿರ್ವಹಣೆಯನ್ನು ಚಾಚೂ ತಪ್ಪದೇ ಕಡ್ಡಾಯವಾಗಿ ನಿರ್ವಹಿಸುವುದು.
  • ಜಿಲ್ಲಾಡಳಿತದಿಂದ ವಿವಿಧ ಪ್ರದೇಶಗಳಿಗೆ ನೇಮಿಸಲಾಗಿರುವ ನೋಡಲ್ ಅಧಿಕಾರಿಗಳು ಸದಾ ಜಾಗೃತರಾಗಿದ್ದು, ಸಾರ್ವಜನಿಕ ದೂರುಗಳಿಗೆ ತಕ್ಷಣ ಸ್ಪಂದಿಸುವುದು ಮತ್ತು ಜಿಲ್ಲಾಧಿಕಾರಿ ಕಛೇರಿಯ ನಿಯಂತ್ರಣ ಕೊಠಡಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವುದು.
  • ಪ್ರವಾಸಿಗರು / ಸಾರ್ವಜನಿಕರು ನದಿತೀರಕ್ಕೆ, ಸಮುದ್ರತೀರಕ್ಕೆ ತೆರಳದಂತೆ ಸೂಚಿಸಲಾಗಿದೆ.
  • ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಪ್ರತೀ ತಾಲೂಕುಗಳಲ್ಲಿ ಕಾಳಜಿ ಕೇಂದ್ರವನ್ನು ತೆರೆದು ಸನ್ನದ್ಧ ಸ್ಥಿತಿಯಲ್ಲಿರಿಸಿಕೊಳ್ಳುವುದು.
  • ಪ್ರಾಕೃತಿಕ ವಿಕೋಪ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ತುರ್ತು ಸೇವೆಗೆ ಟೋಲ್ ಫ್ರೀ ಸಂಖ್ಯೆ ದಿನದ 24 ಗಂಟೆ 1077 ಹಾಗೂ 0824-2442590 ಕೆಳಕಂಡ ದೂರವಾಣಿಯನ್ನು ಸಂಪರ್ಕಿಸುವುದು.

ಭಾರೀ ಮಳೆಗೆ ಮನೆ ಗೋಡೆ ಕುಸಿದು ಮಗು ಸಾವು; 6 ಜನರಿಗೆ ಗಾಯ

ಕೊಪ್ಪಳದಲ್ಲಿ ನಿನ್ನೆಯಿಂದ ಸುರಿಯುತ್ತಿರೋ ಮಳೆಗೆ ಮನೆ ಗೋಡೆ ಕುಸಿದು ಬಿದ್ದಿದೆ. ಈ ಘಟನೆಯಲ್ಲಿ ಒಂದುವರೆ ವರ್ಷದ ಮಗು ಸಾವನ್ನಪ್ಪಿದ್ದು, 6 ಜನರಿಗೆ ಗಾಯವಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಘಟನೆ. ಪ್ರಶಾಂತಿ ಎನ್ನುವ ಒಂದುವರೆ ವರ್ಷದ ಮಗು ಸಾವು. ಪ್ರಶಾಂತಿ ತಾಯಿ, ಹನುಮಂತಿ (28), ಕುಟುಂಬ ಸದಸ್ಯರಾದ ದುರಗಮ್ಮ (65), ಭೀಮಮ್ಮ (19), ಹುಸೇನಪ್ಪ(46), ಫಕೀರಪ್ಪ ಎನ್ನವವರಿಗೆ ಗಾಯವಾಗಿದೆ. ಗಾಯಾಳುಗಳನ್ನು ಗಂಗಾವತಿ ತಾಲೂಕಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ತಹಶಿಲ್ದಾರ್ ಯು.ನಾಗರಾಜ್ ಹಾಗೂ ಗಂಗಾವತಿ ಗ್ರಾಮೀಣ ಪೊಲೀಸರು ಭೇಟಿ ಪರಿಶೀಲನೆ ಮಾಡಿದ್ದಾರೆ.

ಬರದ ನಾಡಿನಲ್ಲಿ ಸುರಿದ ಭಾರೀ ಮಳೆಗೆ ಕೊಚ್ಚಿ ಹೋದ ತಾತ್ಕಾಲಿಕ ಸೇತುವೆ; ರಸ್ತೆ ಸಂಪರ್ಕ ಕಡಿತದಿಂದ ಸಂಕಷ್ಟ

ಯಾದಗಿರಿ (ಜು.17): ಯಾದಗಿರಿ ಜಿಲ್ಲೆಯಲ್ಲಿ ನಿನ್ನೆ ತಡರಾತ್ರಿ ಸುರಿದ ಭಾರಿ ಮಳೆಗೆ ಹಲವೆಡೆ ಹಳ್ಳಗಳು ತುಂಬಿ ಹರಿದಿದ್ದು, ಸುರಪುರ ತಾಲ್ಲೂಕಿನ ಕಲ್ಲದೇವನಹಳ್ಳಿ ಗ್ರಾಮದ ಸಮೀಪ ನಿರ್ಮಿಸಲಾಗಿದ್ದ ತಾತ್ಕಾಲಿಕ ಸೇತುವೆ ಹಳ್ಳದ ನೀರಿನ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿದೆ. ಈ ಹಿನ್ನೆಲೆ ಸ್ಥಳೀಯರಿಗೆ ಸಂಪರ್ಕದ ಅಡ್ಡಿಯಾಗಿದೆ.

ಕಲ್ಲದೇವನಹಳ್ಳಿಯಿಂದ ಹುಣಸಗಿ ಹಾಗೂ ಸುರಪುರಕ್ಕೆ ಸಂಪರ್ಕ ಕಲ್ಪಿಸುತ್ತಿದ್ದ ಈ ತಾತ್ಕಾಲಿಕ ಸೇತುವೆ, ಈಗಾಗಲೇ ಹೊಸ ಸೇತುವೆ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ತಾತ್ಕಾಲಿಕ ಪ್ರಯಾಣಕ್ಕೆ ವ್ಯವಸ್ಥೆಯಾಗಿ ನಿರ್ಮಿಸಲಾಗಿತ್ತು. ಆದರೆ ಧಾರಾಕಾರ ಮಳೆಯಿಂದಾಗಿ ಹಳ್ಳದಲ್ಲಿ ಏಕಾಏಕಿ ನೀರಿನ ಮಟ್ಟ ಹೆಚ್ಚಾಗಿ ಸೇತುವೆ ಕೊಚ್ಚಿಕೊಂಡು ಹೋಗಿದೆ. ಈ ಘಟನೆಯಿಂದಾಗಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು 5 ಕಿ.ಮೀ ದೂರದ ವಜ್ಜಲ್ ಮಾರ್ಗದ ಮೂಲಕ ಶಾಲೆ ಹಾಗೂ ಕಾಲೇಜುಗಳಿಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಶಾಲಾ ಮಕ್ಕಳಿಗೆ ಮತ್ತು ಸ್ಥಳೀಯರಿಗೆ ತೀವ್ರ ತೊಂದರೆ ಉಂಟಾಗಿದೆ.

ಗ್ರಾಮಸ್ಥರು ಕೂಡಲೇ ಎತ್ತರದ ತಾತ್ಕಾಲಿಕ ಸೇತುವೆ ನಿರ್ಮಿಸಿ, ಶಾಶ್ವತ ಸೇತುವೆ ನಿರ್ಮಾಣ ಕಾರ್ಯವನ್ನು ವೇಗವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳ ಗಮನಸೆಳೆದಿದ್ದಾರೆ. ವಾಹನ ಸಂಚಾರವೂ ಸ್ಥಗಿತಗೊಂಡಿರುವುದರಿಂದ ವಾಹನ ಸವಾರರು ಪರ್ಯಾಯ ಮಾರ್ಗಗಳ ಬಳಕೆಗೆ ತೊಡಗಿದ್ದಾರೆ. ಭಾರಿ ಮಳೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಪರಿಸ್ಥಿತಿಯನ್ನು ನಿಗದಿತವಾಗಿ ಪರಿಶೀಲನೆ ಮಾಡುತ್ತಿರುವಂತಾಗಿದ್ದು, ಜನರು ಎಚ್ಚರಿಕೆಯಿಂದಿದ್ದು, ಅನಾವಶ್ಯಕ ಪ್ರಯಾಣದಿಂದ ತಡೆಗಟ್ಟಬೇಕು ಎಂದು ಹವಾಮಾನ ಇಲಾಖೆಯು ಸೂಚನೆ ನೀಡಿದೆ.

ಸಂಪರ್ಕ ಕಡಿತ – ಪರಿಣಾಮಗಳು:

  • ಕಲ್ಲದೇವನಹಳ್ಳಿ – ಸುರಪುರ ಸಂಪರ್ಕ ಕಡಿತ
  • ವಿದ್ಯಾರ್ಥಿಗಳು ಹಾಗೂ ನಿತ್ಯ ಪ್ರಯಾಣಿಕರಿಗೆ ತೊಂದರೆ
  • ತಾತ್ಕಾಲಿಕ ಸೇತುವೆ ಎತ್ತರವಾಗಿ ನಿರ್ಮಿಸುವ ಜನರ ಆಗ್ರಹ
  • ಶಾಶ್ವತ ಸೇತುವೆ ಕಾಮಗಾರಿಗೆ ವೇಗವಿಲ್ಲದ ಆರೋಪ