ಬೆಂಗಳೂರು(ಮೇ.07): ಈ ತಿಂಗಳ 15 ರಿಂದ ಅಥವಾ ನಂತರ 18ರಿಂದ 45 ವರ್ಷದವರಿಗೆ ಲಸಿಕೆ ಕೊಡುವ ಅಭಿಯಾನ ಆರಂಭಿಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಎರಡು ಲಸಿಕಾ ಕಂಪನಿಗಳಿದ್ದು ಉತ್ಪಾದನೆ ಕಡಿಮೆ ಆಗುತ್ತಿರುವುದರಿಂದ ಲಸಿಕೆ ನಮಗೆ ಲಭ್ಯವಾಗುತ್ತಿಲ್ಲ. ಈಗಾಗಲೇ ಎರಡು ಕಂಪನಿಗಳ ಜೊತೆ ಮಾತಾಡಿದ್ದೇವೆ. ನಮಗೆ ಮೊದಲ ಆದ್ಯತೆಯಲ್ಲಿ ಲಸಿಕೆ ಕೊಡಿ ಅಂತ ಕೇಳಿದ್ದೇವೆ. ಮೇ 15 ಅಥವಾ ಮೇ 15 ನಂತರ ಲಸಿಕೆ ಅಭಿಯಾನ ಪ್ರಾರಂಭ ಮಾಡುತ್ತೇವೆ. 3ನೇ ಅಲೆ ಬರುವುದರೊಳಗೆ ಎಲ್ಲರಿಗೂ ಲಸಿಕೆ ನೀಡುವ ರೀತಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

"

ಬೇರೆಯವರಿಂದ ಆಮ್ಲಜನಕ ಪಡೆಯುವ ಬದಲು ನಾವೇ ಹವಾಮಾನದಿಂದ ಆಮ್ಲಜನಕ ಪಡೆಯುವ ಯೋಜನೆಗೆ ಸಿದ್ಧತೆ ಮಾಡುತ್ತಿದ್ದೇವೆ. ಹವಾಮಾನದಿಂದ ಆಮ್ಲಜನಕ ಉತ್ಪತ್ತಿ ಮಾಡುವ ಜನರೇಟರ್‌ ಪ್ರಾರಂಭ ಮಾಡುತ್ತೇವೆ. ಕೋವಿಡ್‌ ಆರೈಕೆ ಕೇಂದ್ರದಲ್ಲಿ ಆಮ್ಲಜನಕ ಸಾಂದ್ರೀಕರಣಗಳನ್ನು ಅಳವಡಿಸಲು ಕ್ರಮ ತೆಗೆದುಕೊಳ್ಳುತ್ತೇವೆ. 50ರಿಂದ 1 ಲಕ್ಷ ರು.ಗಳಿಗೆ ಯಂತ್ರ ಖರೀದಿ ಮಾಡಲು ನಿರ್ಧರಿಸಲಾಗಿದೆ. ಪ್ರತಿ ಜಿಲ್ಲೆಗೆ ಒಂದು ಸಾವಿರ ಯಂತ್ರ ಕೊಡುವ ತೀರ್ಮಾನ ಮಾಡಲಾಗಿದೆ. ಶೀಘ್ರವಾಗಿ ಈ ಯಂತ್ರ ತರಿಸುವ ಕೆಲಸ ಮಾಡುತ್ತೇವೆ ಎಂದರು.

ಗುಡ್ ನ್ಯೂಸ್ : ಬರಲಿದೆ ಸ್ಪುಟ್ನಿಕ್‌ನ ಸಿಂಗಲ್‌ ಡೋಸ್‌ ಕೊರೋನಾ ಲಸಿಕೆ

ಜವಾಬ್ದಾರಿ ಹಂಚಿಕೆಯಿಂದ ಆನೆಬಲ: 

ಕೋವಿಡ್‌ ನಿಯಂತ್ರಣ ಜವಾಬ್ದಾರಿಗಳನ್ನು ಬೇರೆ ಸಚಿವರಿಗೆ ಹಂಚಿರುವ ಬಗ್ಗೆ ಪ್ರತಿಕ್ರಿಯಿಸಿದ ಸುಧಾಕರ್‌, ಅಧಿಕಾರ ಹಂಚಿಕೆ ಮಾಡಿರುವುದರ ಬಗ್ಗೆ ನನಗೆ ಯಾವುದೇ ಬೇಸರ ಇಲ್ಲ. ಇದರಿಂದ ನನಗೆ ಒಳ್ಳೆಯದೇ ಆಗಿದೆ. ನನಗೆ ಇನ್ನೂ ಆನೆ ಬಲ ಬಂದಂತೆ ಆಗಿದೆ. ಹಿರಿಯ ಸಚಿವರು ನನಗೆ ತುಂಬಾ ಸಹಕಾರ ಕೊಡುತ್ತಿದ್ದಾರೆ. ಎಲ್ಲರೂ ಅವರ ಕೆಲಸ ಉತ್ತಮವಾಗಿ ಮಾಡುತ್ತಿದ್ದಾರೆ. ಎರಡ್ಮೂರು ದಿನದಲ್ಲಿ ಎಲ್ಲಾ ಸಮಸ್ಯೆಗಳನ್ನು ಸರಿ ಮಾಡುತ್ತೇವೆ ಎಂದು ಹೇಳಿದರು.

ಕೋವಿಡ್‌ ಮುಗಿದ ಮೇಲೆ ರಾಜಕೀಯ ಮಾತನಾಡುವೆ

‘ಕೋವಿಡ್‌ ಸಂಕಷ್ಟ ಮುಗಿಯುವವರೆಗೂ ನಾನು ಯಾವ ಬೇಸರವನ್ನು ವ್ಯಕ್ತಪಡಿಸಲ್ಲ. ಅದು ಮುಗಿದ ಮೇಲೆ ಮಾತನಾಡುವೆ’ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ತೀಕ್ಷ್ಣವಾಗಿ ಹೇಳಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ನಾನು ಈಗಾಗಲೇ ರಾಜೀನಾಮೆ ಕೊಟ್ಟೇ ಇಲ್ಲಿಗೆ ಬಂದಿರೋದು. ರಾಜೀನಾಮೆ ಕೊಟ್ಟು ಕಷ್ಟ ಅನುಭವಿಸಿ ಇಲ್ಲಿಗೆ ಬಂದಿದ್ದೇನೆ. ಸರ್ಕಾರವೂ ಬಂದಿದೆ. ಈ ಸಮಯದಲ್ಲಿ ನಾನು ರಾಜಕೀಯ ಮಾತಾಡಿಲ್ಲ. ನಾನು ಕೊರೊನಾ ಯೋಧನ ರೀತಿ, ವೈದ್ಯನಾಗಿ ಕೆಲಸ ಮಾಡುತ್ತಿದ್ದೇನೆ. ಈ ಸಮಯದಲ್ಲಿ ನನ್ನ ಕೆಲಸದ ಕಡೆ ಗಮನ ಹರಿಸುತ್ತೇನೆ’ ಎಂದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona