ಬೆಂಗಳೂರು(ಏ.12): ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಒಳರೋಗಿಗಳಾಗಿ ದಾಖಲಾಗಿರುವ ರೋಗಿಗಳಿಗೆ ಹೊರಗಿನಿಂದ ಅನಧಿಕೃತ ಆಹಾರ ಪದಾರ್ಥ, ತಿನಿಸು ನೀಡಬಾರದು. ಆಸ್ಪತ್ರೆಯಲ್ಲಿ ಸಿದ್ಧಪಡಿಸಿದ ಆರೋಗ್ಯಕರ ಆಹಾರವನ್ನೇ ನೀಡಬೇಕು ಎಂದು ಆರೋಗ್ಯ ಇಲಾಖೆ ಆಯುಕ್ತ ಪಂಕಜ್‌ ಕುಮಾರ್‌ ಪಾಂಡೆ ಆದೇಶ ಹೊರಡಿಸಿದ್ದಾರೆ.

ಈ ಬಗ್ಗೆ ಶುಕ್ರವಾರ ಆದೇಶ ಹೊರಡಿಸಿರುವ ಅವರು, ರಾಜ್ಯಾದ್ಯಂತ ಎಲ್ಲ ಜಿಲ್ಲೆ, ತಾಲೂಕುಗಳಲ್ಲೂ ಸಾಮಾನ್ಯವಾಗಿ 50 ರಿಂದ 100 ಹಾಸಿಗೆಯವರಿಗೆ ಒಳರೋಗಿಗಳಿಗೆ ವ್ಯವಸ್ಥೆ ಇರುತ್ತದೆ.

ಆಸ್ಪತ್ರೆಯಲ್ಲಿ ರೋಗಿಗಳಿಗೆ ಅವರಿಗೆ ಬಾಧಿಸುತ್ತಿರುವ ಕಾಯಿಲೆ ಆಧರಿಸಿ ಪಥ್ಯಾಹಾರ ನೀಡಲಾಗುತ್ತದೆ. ರೋಗಿಗಳಿಗೆ ಆರೋಗ್ಯವಂತ ಆಹಾರ ನೀಡುವುದು ರೋಗ ಗುಣಪಡಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ಅನೇಕ ಸಂದರ್ಭದಲ್ಲಿ ಒಳ ರೋಗಿಗಳು ಹೊರಗಿನಿಂದ ಆಹಾರ ತರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇಂತಹ ಪ್ರಯತ್ನಗಳು ಆರೋಗ್ಯ ಸುಧಾರಣೆ ಮೇಲೆ ಪರಿಣಾಮ ಉಂಟು ಮಾಡುವ ಸಾಧ್ಯತೆ ಇದೆ. ಹೀಗಾಗಿ ಹೊರಗಿನ ಆಹಾರವನ್ನು ಒಳರೋಗಿಗಳಿಗೆ ನೀಡದಂತೆ ಭದ್ರತಾ ಸಿಬ್ಬಂದಿ ಪರಿಶೀಲಿಸಿ ರೋಗಿಯ ಸಹಾಯಕರನ್ನು ಒಳಗೆ ಕಳುಹಿಸಬೇಕು. ಸಾಮಾನ್ಯ ವಾರ್ಡ್‌ ಹಾಗೂ ವಿಶೇಷ ವಾರ್ಡ್‌ ಎಲ್ಲರಿಗೂ ಈ ನಿಯಮ ಅನ್ವಯ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಮಹಾರಾಷ್ಟ್ರ ಈಗ ದೇಶದ ಕೊರೋನಾ ರಾಜಧಾನಿ!

ಅಲ್ಲದೆ, ರೋಗಿಗಳಿಗೆ ಬೆಳಗ್ಗೆ ಹಾಲು, ಬ್ರೆಡ್‌ ನೀಡಲಾಗುತ್ತದೆ. ಅಲ್ಲದೆ, ಆರೋಗ್ಯಕರ ಆಹಾರ ನೀಡಲಾಗುತ್ತದೆ. ಆಸ್ಪತ್ರೆಯಲ್ಲಿ ಸಿದ್ಧಪಡಿಸುವ ಆಹಾರದ ಬಗ್ಗೆ ಆಹಾರ ತಜ್ಞರು ಅಥವಾ ಆಸ್ಪತ್ರೆ ವ್ಯಾಪ್ತಿಯ ಆಹಾರ ಸುರಕ್ಷತಾ ಅಧಿಕಾರಿ (ಎಫ್‌ಎಸ್‌ಒ) ನಿಗಾ ವಹಿಸಬೇಕು. ಪ್ರತಿ ನಿತ್ಯ ಕೆಲಸಗಾರರು, ಅಡುಗೆಯವರ ವೈಯಕ್ತಿಕ ನೈರ್ಮಲ್ಯ, ಶುಚಿತ್ವ ಪರಿಶೀಲನೆ ನಡೆಸಬೇಕು. ಸಗಟಾಗಿ ತರುವ ಆಹಾರ ಧಾನ್ಯ, ತರಕಾರಿ, ಹಣ್ಣು ಹಂಪಲು ಶುಚಿಯಾಗಿ ಮತ್ತು ಉತ್ತಮ ಗುಣಮಟ್ಟದ್ದಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಸಿದ್ಧಪಡಿಸಿದ ಆಹಾರ ಬಿಸಿ ಇರುವಾಗಲೇ ರೋಗಿಗಳಿಗೆ ಬಡಿಸಬೇಕು ಎಂದು ಸೂಚಿಸಲಾಗಿದೆ.