Photos: ಆಸಿಡ್ ದಾಳಿಗೂ ಮುನ್ನ ಹೀಗಿದ್ರು ಚೆನ್ನಮ್ಮ ದೇವೇಗೌಡ
ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರು ನಿಧನರಾಗಿದ್ದಾರೆ. 2001ರಲ್ಲಿ ಅವರ ಮೇಲೆ ನಡೆದ ಭೀಕರ ಆಸಿಡ್ ದಾಳಿಯು ಅವರ ಜೀವನವನ್ನೇ ಬದಲಿಸಿತ್ತು, ಆದರೂ ಅವರು ಬತ್ತದ ಉತ್ಸಾಹದಿಂದ ಬದುಕಿದ್ದರು. ಈ ಲೇಖನವು ಅವರ ಜೀವನದ ಅಪರೂಪದ ಚಿತ್ರಗಳು ಮತ್ತು ಆ ಕರಾಳ ಘಟನೆಯನ್ನು ವಿವರಿಸುತ್ತದೆ.

ಮಾಜಿ ಪ್ರಧಾನಿ ದೇವೇಗೌಡರ 72 ವರ್ಷಗಳ ದಾಂಪತ್ಯದ ಸಂಗಾತಿ ಶನಿವಾರ ಮರೆಯಾಗಿದ್ದಾರೆ. ತುಂಬು ಸಂಸಾರ ನಡೆಸಿದ್ದ ಚೆನ್ನಮ್ಮ ದೇವೇಗೌಡ ಶನಿವಾರ ಸಂಜೆ 4 ಗಂಟೆಯ ವೇಳೆಗೆ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ ಕೆಲವು ದಿನಗಳಿಂದ ಅವರು ಇದೇ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಸಾವಿನ ಬೆನ್ನಲ್ಲಿಯೇ ಚೆನ್ನಮ್ಮ ಅವರ ಹಳೆಯ ಫೋಟೋಗಳು ವೈರಲ್ ಆಗಿವೆ. 2001ರ ಫೆಬ್ರವರಿ 21 ರಂದು ಚೆನ್ನಮ್ಮ ಅವರ ಮೇಲೆ ಭೀಕರ ಆಸಿಡ್ ದಾಳಿ ನಡೆದ ಬಳಿಕ ಅವರ ಮುಖ ಚಹರೆಯೇ ಬದಲಾಗಿ ಹೋಗಿತ್ತು. ಹಾಗಿದ್ದರೂ ಜೀವನದ ಬಗ್ಗೆ ಆಕೆಗಿದ್ದ ಬತ್ತದ ಉತ್ಸಾಹ ದೇವೇಗೌಡರಿಗೂ ಶಕ್ತಿ ನೀಡಿತ್ತು.
1954ರಲ್ಲಿ ದೇವೇಗೌಡ ಹಾಗೂ ಚೆನ್ನಮ್ಮ ಅವರ ವಿವಾಹ ನಡೆದಿತ್ತು. ಅಂದಿನಿಂದ ಇಲ್ಲಿಯವರೆಗೂ ಅವರು ದೇವೇಗೌಡರನ್ನು ಬಿಟ್ಟು ಊಟ ಮಾಡಿದ್ದೇ ಇಲ್ಲ. ಪ್ರಧಾನಿಯಾಗಿ ದೇವೇಗೌಡರು ದೆಹಲಿಗೆ ಹೋದಾಗಲೂ, ಅಲ್ಲಿಯೂ ಮುದ್ದೆ ಮಾಡಿಕೊಟ್ಟಿದ್ದರು. ಎಲ್ಲೇ ಹೋದರು ದೇವೇಗೌಡರ ಜೊತೆಯಲ್ಲಿ ಚೆನ್ನಮ್ಮ ಇರುತ್ತಿದ್ದರು.
ಆಸಿಡ್ ದಾಳಿಗೂ ಮುನ್ನ ಚೆನ್ನಮ್ಮ ಹೇಗಿದ್ದರು ಅನ್ನೋ ಕುತೂಹಲ ಎಲ್ಲರಲ್ಲೂ ಇದೆ. ಅಂಥ ಅಪರೂಪದ ಚಿತ್ರಗಳು ಇಲ್ಲಿವೆ. ದೇವರ ಮನೆಯ ಮುಂದೆ ಕೈಮುಗಿದರುವ ಚೆನ್ನಮ್ಮ, ಇನ್ನೊಂದು ಚಿತ್ರದಲ್ಲಿ ದೇವೇಗೌಡರೊಂದಿಗೆ ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಚಿತ್ರಗಳಿವೆ.
ಇನ್ನೂ ಕೆಲವು ಚಿತ್ರಗಳಲ್ಲಿ ತನ್ನ ಮಕ್ಕಳನ್ನೆಲ್ಲಾ ಕೂರಿಸಿಕೊಂಡಿರುವ ದೇವೇಗೌಡರ ಜೊತೆ ತೆಗೆಸಿಕೊಂಡಿರುವ ಚಿತ್ರವಾಗಿದೆ. ಎಲ್ಲಾ ಚಿತ್ರಗಳಲ್ಲೂ ಚೆನ್ನಮ್ಮ ಹಸನ್ಮುಖಿಯಾಗಿ ಕಂಡಿದ್ದಾರೆ.ಈ ಹಿಂದೆ ಜೀ ಕನ್ನಡ ವಾಹಿನಿಯ ಜನಪ್ರಿಯ ಶೋ ‘ವೀಕೆಂಡ್ ವಿತ್ ರಮೇಶ್’ ಸಾಧಕರ ಸೀಟಿನಲ್ಲಿ ಕುಳಿತು ಚೆನ್ನಮ್ಮ ಅವರ ಬಗ್ಗೆ ದೇವೇಗೌಡರು ಮಾತನಾಡಿದ್ದರು.
2001ರ ಫೆಬ್ರವರಿ 21 ರ ಮಹಾಶಿವರಾತ್ರಿ ದಿನ ಹರದನಹಳ್ಳಿಯ ಐತಿಹಾಸಿಕ ಶಿವ ದೇವಸ್ಥಾನಕ್ಕೆ ಕುಟುಂಬ ವಿಶೇಷ ಪೂಜೆ ಸಲ್ಲಿಸಿ ರಾತ್ರಿ 8 ಗಂಟೆ ಸುಮಾರಿಗೆ ವಾಪಾಸ್ ಬರುವಾಗ ಚೆನ್ನಮ್ಮ ಹಾಗೂ ಭವಾನಿ ರೇವಣ್ಣ ಮೇಲೆ ಆಸಿಡ್ ಎರಚಲಾಗಿತ್ತು. ಚೆನ್ನಮ್ಮ ಅವರು ಸಂಪೂರ್ಣವಾಗಿ ಸುಟ್ಟು ಹೋಗಿ ಎರಡು ತಿಂಗಳ ಕಾಲ ಪ್ರಜ್ಞೆ ಇಲ್ಲದೆ ಆಸ್ಪತ್ರೆಯಲ್ಲಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

