ಗೃಹಲಕ್ಷ್ಮಿ ನೋಂದಣಿ ಪುನಾರಂಭ: ಮಹಿಳೆಯರ ಆಕ್ರೋಶಕ್ಕೆ ಮಣಿದ ಸರ್ಕಾರ
ಗೃಹಲಕ್ಷ್ಮಿ ಯೋಜನೆಯ ಹೊಸ ನೋಂದಣಿ ಸ್ಥಗಿತಗೊಳಿಸಿದ ಬೆನ್ನಲ್ಲೇ ಮಹಿಳೆಯರಿಂದ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ, ಕೆಲವೇ ಕ್ಷಣಗಳಲ್ಲಿ ಕಾಂಗ್ರೆಸ್ ಸರ್ಕಾರ ನೋಂದಣಿ ಪುನಾರಂಭಿಸಿದೆ.

ಬೆಂಗಳೂರು (ಸೆ.07): ರಾಜ್ಯದ ಎಲ್ಲ ಮನೆ ಯಜಮಾನಿಯರಿಗೆ 2,000 ರೂ. ಆರ್ಥಿಕ ಸಹಾಯ ನೀಡುವ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಸ್ಥಗಿತಗೊಳಿಸಿದ್ದರಿಂದ ಸರ್ಕಾರದ ವಿರುದ್ಧ ಮಹಿಳೆಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲಿಯೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಸರ್ಕಾರದ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡು, ಗೃಹಲಕ್ಷ್ಮಿ ಯೋಜನೆ ನೋಂದಣಿ ಪ್ರಕ್ರಿಯೆ ಪುನಾರಂಭ ಮಾಡಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಸ್ಥಗಿತಗೊಳಿಸಲಾಗಿದ್ದು, ಶೀಘ್ರವೇ ನೋಂದಣಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಲಾಗಿತ್ತು. ಈವರೆಗೆ ನೋಂದಣಿ ಮಾಡಿಸಿಕೊಂಡ ಫಲಾನುಭವಿ ಮಹಿಳೆಯರಿಗೆ 2000 ರೂ. ಹಣ ಹಾಕುವ ಪ್ರಕ್ರಿಯೆಯಲ್ಲಿ ಗೊಂದಲ ಆಗಿರುವುದರಿಂದ, ಹೊಸ ನೋಂದಣಿ ತಾತ್ಕಾಲಿಕ ಸ್ಥಗಿತ ಮಾಡಲಾಗಿತ್ತು. ಆದರೆ, ಈ ಬಗ್ಗೆ ಮಹಿಳೆಯರಿಂದ ಆಕ್ರೋಶ ವ್ಯಕ್ತವಾದ ಬೆನ್ನಲ್ಲಿಯೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಹೊಸ ನೋಂದಣಿಯನ್ನು ಸ್ಥಗಿತ ಮಾಡದಂತೆ ಖಡಕ್ ಸೂಚನೆ ನೀಡಿದ್ದಾರೆ. ಜೊತೆಗೆ, ನೋಂದಣಿ ಪ್ರಕ್ರಿಯೆ ಲಿಂಕ್ ಅನ್ನು ಪುನಾರಂಭ ಮಾಡಿಸಿದ್ದಾರೆ.
ಗೃಹ ಲಕ್ಷ್ಮಿ ಯೋಜನೆ ನೊಂದಣಿ ಸ್ಥಗಿತ: ಮಹಿಳೆಯರಿಗೆ ಶಾಕ್ ಕೊಟ್ಟ ಸರ್ಕಾರ
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಗೃಹಲಕ್ಷ್ಮಿ ಯೋಜನೆಗೆ ಹೊಸ ನೋಂದಣಿ ಸ್ಥಗಿತಗೊಳಿಸಿದ ಬಗ್ಗೆ ತಿಳಿದು ನನಗೆ ಆಶ್ಚರ್ಯ ಆಯ್ತು. ನಮ್ಮ ಇಲಾಖೆಯ ಕಾರ್ಯದರ್ಶಿ ಹಾಗೂ ನಿರ್ದೇಶಕರನ್ನು ಕರೆದು ಮಾತನಾಡಿದ್ದೇನೆ. ಅದು ಯಾಕೆ ಹಾಗಾಯ್ತು ಅಂತ ಗೊತ್ತಾಗಲಿಲ್ಲ. ಈಗ ಸ್ಲೋ ಆಗಿ ನೊಂದಣಿ ಆಗುತ್ತಿದೆ. 1.10 ಲಕ್ಷ ಮಹಿಳೆಯರಿಗೆ ನೇರ ನಗದು ವರ್ಗಾವಣೆ (ಡಿಬಿಟಿ) ಅಡಿಯಲ್ಲಿ ತಲಾ 2000 ರೂ. ಹಣ ಹಾಕಲಾಗಿದೆ. ನಮ್ಮ ಇಲಾಖೆಯಿಂದ ಹಣ ಕಳುಹಿಸಿದ್ದೇವೆ ಎಂದು ಹೇಳಿದರು.
ರಾಜ್ಯದಲ್ಲಿ ಒಟ್ಟಾರೆ 1.28 ಕೋಟಿ ಯಜಮಾನಿಯರಿಗೆ ಹಣ ಹೋಗುತ್ತದೆ. ಹೊಸದಾಗಿ ನೊಂದಣಿ ಆದವರಿಗೂ ಯೋಜನೆ ಲಾಭ ಸಿಗುತ್ತದೆ. ನಮ್ಮ ಇಲಾಖೆಯಿಂದ ಹೊಸ ನೋಂದಣಿ ಸ್ಥಗಿತಗೊಳಿಸಿ ಅಚಾತುರ್ಯ ಆಗಿದೆ. ಅದನ್ನು ಸರಿ ಮಾಡಿದ್ದೇವೆ. ಇದು ನಿರಂತರವಾಗಿ ನಡೆಯುವ ಯೋಜನೆಯಾಗಿದೆ. ಸಂಬಂಧಿಸಿದ ಎಲ್ಲರಿಗೂ ನೋಟೀಸ್ ಜಾರಿ ಮಾಡಿದ್ದೇವೆ. ಬಹಳ ಸಿರಿಯಸ್ ಆಗಿ ನಾವು ತೆಗೆದುಕೊಂಡಿದ್ದೇವೆ. ಇದು ಸಣ್ಣ ವಿಚಾರ ಅಲ್ಲ. ಯಾರು ಸೋಶಿಯಲ್ ಮಿಡೀಯಾ ಹ್ಯಾಂಡಲ್ ಮಾಡ್ತಾ ಇದ್ದಾರೋ, ಅವರ ಮೇಲೆ ಕ್ರಮ ಆಗುತ್ತದೆ ಎಂದರು.
ಕನ್ನಡ ನಾಡಿನ ಹೆಮ್ಮೆಯ ಮೈಸೂರು ಕಾಗದ ಕಾರ್ಖಾನೆ ಪುನಾರಂಭಕ್ಕೆ ಸಿದ್ಧತೆ: ಸಚಿವ ಎಂ.ಬಿ. ಪಾಟೀಲ ಮಾಹಿತಿ
ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ನಿನ್ನೆ ರಾತ್ರಿವರೆಗೆ 1.8 ಕೋಟಿ ಅಕೌಂಟ್‌ಗೆ ಹಣ ಹೋಗಿದೆ. ಅದರಲ್ಲಿ 63 ಲಕ್ಷ ಹಣ ಮಾತ್ರ ಡಿಬಿಟಿ ಆಗಿದೆ. ಇನ್ನು ಬ್ಯಾಂಕ್ ನಿಂದ ಹಣ ವರ್ಗಾವಣೆ ಆಗುವುದು ಸ್ಲೋ ಆಗಿದೆ. ಬ್ಯಾಂಕ್ ನಿಂದ ಮಾತ್ರ ಫಲಾನುಭವಿಗಳ ಹಣ ಜಮಾ ಆಗುವುದು ನಿಧಾನ ಆಗಿದ್ದು, ಸರ್ಕಾರ ಹಣ ವರ್ಗಾವಣೆಯಲ್ಲಿ ಯಾವುದೇ ವಿಳಂಬ ಮಾಡಿಲ್ಲ. ಇನ್ನು ಈ ಯೋಜನೆಯಿಂದಾಗಿ ಸರ್ಕಾರಕ್ಕೆ ಯಾವುದೇ ತೊಂದರೆ ಆಗಿಲ್ಲ. ಸರ್ಕಾರದ ಖಜಾನೆಯಲ್ಲಿ ಹಣ ಇದೆ. ಬ್ಯಾಂಕ್ ನಿಂದ ಮಾತ್ರ ಸ್ಲೋ ಆಗಿದೆ. ಇನ್ನೂ ನಾಲ್ಕೈದು ದಿನಗಳಲ್ಲಿ ಹಣ ಎಲ್ಲರಿಗೂ ವರ್ಗಾವಣೆ ಆಗಲಿದೆ ಎಂದು ಮಾಹಿತಿ ನೀಡಿದರು.