Tumkur: ಗ್ಯಾರಂಟಿ ಕೊಟ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ರಾಜ್ಯ ಸರ್ಕಾರ; ಸಿದ್ಧಗಂಗಾ ಮಠಕ್ಕೆ ಬಂತು 70 ಲಕ್ಷದ ಕರೆಂಟ್ ಬಿಲ್!
ರಾಜ್ಯ ಸರ್ಕಾರದ ಆರ್ಥಿಕ ಸಂಕಷ್ಟದ ನಡುವೆ, ಸಿದ್ದಗಂಗಾ ಮಠಕ್ಕೆ 70 ಲಕ್ಷ ರೂ.ಗಳ ವಿದ್ಯುತ್ ಬಿಲ್ ಪಾವತಿಸುವಂತೆ ಕೆಐಎಡಿಬಿ ನೋಟಿಸ್ ನೀಡಿದೆ. ದೇವರಾಯಪಟ್ಟಣ ಕೆರೆಗೆ ನೀರು ಹರಿಸಿದ್ದಕ್ಕೆ ಮಠವೇ ವಿದ್ಯುತ್ ಬಿಲ್ ಭರಿಸಬೇಕೆಂದು ಕೆಐಎಡಿಬಿ ಹೇಳಿದೆ. ಈ ಕ್ರಮಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ತುಮಕೂರು (ಡಿ.19): ರಾಜ್ಯ ಸರ್ಕಾರ ಗ್ಯಾರಂಟಿ ಕೊಟ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರೋದನ್ನ ಸಿಎಂ ಸಿದ್ದರಾಮಯ್ಯ ಪ್ರತಿ ಬಾರಿಯೂ ಅಲ್ಲಗಳೆಯುತ್ತಲೇ ಇರುತ್ತಾರೆ. ಆದರೆ, ರಾಜ್ಯ ಸರ್ಕಾರದ ಆಂತರಿಕ ಪರಿಸ್ಥಿತಿ ಹಾಗಿಲ್ಲ ಎನ್ನುವಂತೆ ಅಧಿಕಾರಿಗಳು ವರ್ತನೆ ಮಾಡುತ್ತಿದ್ದಾರೆ. ಗ್ಯಾರಂಟಿ ಘೋಷಣೆಗಳನ್ನು ಜಾರಿ ಮಾಡಿ ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಅನ್ನೋದನ್ನ ಸಾಬೀತು ಮಾಡುವಂತೆ ಕೆಲವೊಂದು ನಿರ್ಧಾರಗಳನ್ನು ಮಾಡುತ್ತಿದ್ದಾರೆ. ಘೋಷಣೆ ಮಾಡಿರುವ ಗ್ಯಾರಂಟಿಗೆ ಹಣ ಹೊಂದಿಸಲು ರಾಜ್ಯ ಸರ್ಕಾರ ಸರ್ಕಸ್ ಮಾಡುತ್ತಿದೆ.ಅದಕ್ಕಾಗಿ ಎಲ್ಲದರ ಮೇಲೆ ತೆರಿಗೆಯನ್ನು ಏರಿಸಲಾಗಿದೆ. ಈಗ, ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ರಾಜ್ಯ ಸರ್ಕಾರ ಪತ್ರ ಬರೆದಿದೆ. ಸಿದ್ದಗಂಗಾ ಮಠಕ್ಕೆ 70,31,438 ರೂ ವಿದ್ಯುತ್ ಬಿಲ್ ಬಂದಿದ್ದು, ಇದನ್ನು ಪಾವತಿ ಮಾಡುವಂತೆ ಸೂಚನೆ ನೀಡಲಾಗಿದೆ. ವಿದ್ಯುತ್ ಬಿಲ್ ಕಂಡು ಸಿದ್ದಗಂಗಾ ಮಠದ ಆಡಳಿತ ಮಂಡಳಿ ಅಚ್ಚರಿ ಪಟ್ಟಿದ್ದಾರೆ.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಅಂದರೆ, ಕೆಐಎಡಿಬಿ ಅಭಿಯಂತರರಿಂದ ಸಿದ್ದಗಂಗಾ ಮಠಕ್ಕೆ ವಿದ್ಯುತ್ ಬಿಲ್ ಪಾವತಿಸುವಂತೆ ಪತ್ರ ಬರೆಯಲಾಗಿದೆ. ಮಂಡಳಿಯ ಆರ್ಥಿಕ ಪರಿಸ್ಥಿತಿಯು ಸುಸ್ಥಿತಿಯಲ್ಲಿ ಇಲ್ಲದಿರೋದ್ರಿಂದ ಈ ವಿದ್ಯುತ್ ಬಿಲ್ ನ್ನು ನೀವು ಭರಿಸಲು ಕೋರಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಕಳೆದ ಏಪ್ರಿಲ್ 6 ರಂದು ಕೆಐಎಡಿಬಿಯಿಂದ ಸಿದ್ದಗಂಗಾ ಮಠಕ್ಕೆ ಪತ್ರ ಬಂದಿದೆ. ಏಪ್ರಿಲ್ 15 ರಂದು ಕೆಐಎಡಿಬಿಗೆ ಸಿದ್ದಗಂಗಾ ಮಠದಿಂದ ಮರು ಪತ್ರ ರವಾನೆಯಾಗಿದೆ. ಸರ್ಕಾರಿ ನೀರಾವರಿ ಯೋಜನೆಗೆ ಕೆಐಎಡಿಬಿ ಬಳಸಿದ ಬರೊಬ್ಬರಿ 70,31,438 ರೂ ವಿದ್ಯುತ್ ಬಿಲ್ ನ್ನು ಸಿದ್ದಗಂಗಾ ಮಠ ಭರಿಸುವಂತೆ ಕೆಐಡಿಬಿ ಅಭಿಯಂತರರು ಪತ್ರದಲ್ಲಿ ತಿಳಿಸಿದ್ದಾರೆ. ಸಿದ್ದಗಂಗಾ ಮಠದಿಂದ ಪತ್ರ ತಲುಪಿ 8 ತಿಂಗಳಾದರೂ ಕೆಐಡಿಬಿ ಯಾವುದೇ ಕ್ರಮ ಕೈಗೊಂಡಿಲ್ಲ. ಇದರ ನಡುವೆ ಅಧಿಕಾರಿಗಳು ಮೌಖಿಕವಾಗಿ ಬಿಲ್ ಕಟ್ಟುವಂತೆ ಮಠದ ಆಡಳಿತ ಮಂಡಳಿಯವರಿಗೆ ಸೂಚಿಸುತಿದ್ದಾರೆ ಎನ್ನಲಾಗಿದೆ.
EPF ಬಗ್ಗೆ ಗೊತ್ತು VPF ಬಗ್ಗೆ ಗೊತ್ತಿದ್ಯಾ? ಇದರಲ್ಲಿ ನಿಮಗೆ ಸಿಗುತ್ತೆ ಪಿಎಫ್‌ನಷ್ಟೇ ಬಡ್ಡಿ!
ಸಿದ್ದಗಂಗಾ ಮಠದ ಸನಿಹದಲ್ಲೇ ಇರುವ ದೇವರಾಯಪಟ್ಟಣ ಕೆರೆಗೆ, ಕೆಐಎಡಿಬಿ ಪೈಪ್ ಲೈನ್ ಮೂಲಕ ಹೊನ್ನೆನಹಳ್ಳಿಯಿಂದ ಪ್ರಾಯೋಗಿಕವಾಗಿ ನೀರು ಹರಿಸಿದೆ. ಈ ಯೋಜನೆ ಪರಿಪೂರ್ಣವಾಗಿ ಜಾರಿಯಾದರೆ ಸಿದ್ದಗಂಗಾ ಮಠ ಸೇರಿದಂತೆ ದೇವರಾಯಪಟ್ಟಣ, ಮಾದನಾಯಕನ ಪಾಳ್ಯ, ಕುಂದೂರು ಗ್ರಾಮಕ್ಕೆ ನೀರು ಪೂರೈಕೆ ಆಗಲಿದೆ. ಇಲ್ಲಿವರೆಗೆ ಪ್ರಾಯೋಗಿಕವಾಗಿ ಅಷ್ಟೇ ನೀರು ಹರಿಸಲಾಗಿದೆ. ಗ್ರಾಮಗಳಿಗೆ ವಿತರಣೆ ಆಗುತ್ತಿಲ್ಲ. ಇದಕ್ಕೆ ವೆಚ್ಚವಾದ ವಿದ್ಯುತ್ ಬಿಲ್ ನ್ನು ಸಿದ್ದಗಂಗಾ ಮಠ ಪಾವತಿಸಬೇಕು ಎಂದು ಕೆಐಎಡಿಬಿ ಬರೆದಿರುವ ಪತ್ರ ಈಗ ವಿವಾದಕ್ಕೆ ಕಾರಣವಾಗಿದೆ.
ನಿರ್ಮಲಾ ಸೀತಾರಾಮನ್‌ಗೆ ವಿಜಯ್ ಮಲ್ಯ ತಿರುಗೇಟು, 'ನಾನೀಗಲೂ ಅಪರಾಧಿಯಾಗಿರಲು ಹೇಗೆ ಸಾಧ್ಯ?' ಎಂದು ಪ್ರಶ್ನೆ!
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಎಂಎಲ್‌ಸಿ ಸಿಟಿ ರವಿ,' ಮಠಗಳಿಗೆ ಕೊಡುವ ಪರಂಪರೆ ನಮ್ಮಲ್ಲಿ ಇದೆ. ಆದರೆ ಮಠದಿಂದ ಕಿತ್ತುಕೊಳ್ಳೋ ಪರಂಪರೆ ಇದು ಯಾವ ಸೀಮೆ ಪರಂಪರೆ? ಮಠಗಳು ಅನ್ನದಾಸೋಹ , ಶಿಕ್ಷಣ ನೀಡುತ್ತವೆ. ಹೀಗಾಗಿ ಮಠಗಳಿಗೆ ಕೊಡುವ ಪರಂಪರೆ ನಮ್ಮಲ್ಲಿದೆ. ಹಾಗಾದರೆ ಇವರು ಭಿಕಾರಿಗಳಾಗಿದ್ದಾರಾ? ಮಠದಿಂದಲೇ ಕಿತ್ತುಕೊಳ್ಳೋ ಸರ್ಕಾರ ಯಾವ ಪರಿಸ್ಥಿತಿಗೆ ಬಂದಿದೆ? ನಿಮಗೆ ನಾಚಿಕೆ ಇಲ್ವಾ? ನೋಟೀಸ್ ವಾಪಸ್ ತಗೊಳಿ ಸುತ್ತ ಮುತ್ತ ಕೆರೆಗಳಿಗೆ ನೀರು ಹರಿಸಿದ್ದಕ್ಕೆ ಮಠಕ್ಕೆ ನೋಟೀಸ್ ಕೊಡ್ತಿರಾ? ನೋಟೀಸ್ ಕೊಟ್ಟಿರೋ ಅಧಿಕಾರಿ ಮೇಲೆ ಕ್ರಮ ತೆಗೆದುಕೊಳ್ಳಿ' ಎಂದು ಹೇಳಿದ್ದಾರೆ. ಈ ಬಗ್ಗೆ ಚಾಮರಾಜನಗರದಲ್ಲಿ ಪ್ರತಿಕ್ರಿಯೆ ನೀಡಿರುವ ಸಿದ್ದಗಂಗಾ ಶ್ರೀಗಳು, 'ಪತ್ರ ಬಂದಿರುವುದು ನಿಜ. ಇದನ್ನು ಪರಿಹರಿಸುವಂತೆ ಸರ್ಕಾರಕ್ಕೆ ಮಠದಿಂದ ಪತ್ರ ಬರೆದಿದ್ದೇವೆ' ಎಂದಷ್ಟೇ ತಿಳಿಸಿದ್ದಾರೆ.