ಬೆಂಗಳೂರು :  ಸಮ್ಮಿಶ್ರ ಸರ್ಕಾರದಲ್ಲಿ ಹಿರಿಯ ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರೆದಿದ್ದು, ಸೋಮವಾರ ಐದು ಮಂದಿ ಐಎಎಸ್‌ ಅಧಿಕಾರಿಗಳನ್ನು ವಿವಿಧ ಹುದ್ದೆಗಳಿಗೆ ವರ್ಗಾವಣೆ ಮಾಡಿ ಆದೇಶಿಸಿದೆ.

ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿಯಾಗಿರುವ ಟಿ.ಕೆ.ಅನಿಲ್‌ಕುಮಾರ್‌ ಅವರನ್ನು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಹುದ್ದೆಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಇದೇ ವೇಳೆ ಮುಂದಿನ ಆದೇಶದವರೆಗೆ ಅವರು ಪ್ರವಾಸೋದ್ಯಮ ಕಾರ್ಯದರ್ಶಿಯಾಗಿಯೂ ಮುಂದುವರೆಯಲಿದ್ದಾರೆ.

ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಸುಬೋಧ್‌ ಯಾದವ್‌ ಅವರನ್ನು ಕಲಬುರ್ಗಿ ವಿಭಾಗದ ಪ್ರಾದೇಶಿಕ ಆಯುಕ್ತರಾಗಿ ನೇಮಿಸಲಾಗಿದೆ. ಇದೇ ವೇಳೆ ಹೈ-ಕ ಮಂಡಳಿ ಕಾರ್ಯದರ್ಶಿಯಾಗಿಯೂ ಮುಂದಿನ ಆದೇಶದವರೆಗೆ ಮುಂದುವರೆಯಲಿದ್ದಾರೆ.

ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿರುವ ಶಿವಯೋಗಿ ಕಳಸದ್‌ ಅವರು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಾಗಿ ವರ್ಗಾವಣೆಗೊಂಡಿದ್ದು, ಮುಂದಿನ ಆದೇಶದವರೆಗೆ ಅವರೂ ಕೂಡ ಕೆಎಸ್‌ಆರ್‌ಟಿಸಿ ಎಂಡಿ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ.

ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಅವರನ್ನು ಕುಮಾರ್‌ ಪುಷ್ಕರ್‌ ಅವರ ವರ್ಗಾವಣೆಯಿಂದ ತೆರವಾಗಿರುವ ಪ್ರವಾಸೋದ್ಯಮ ಇಲಾಖೆ ನಿರ್ದೇಶಕರ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಹುಬ್ಬಳ್ಳಿ ಧಾರವಾಡ ಎಸ್‌ಪಿವಿ ವ್ಯವಸ್ಥಾಪಕ ನಿರ್ದೇಶಕರಾದ ಹೆಫ್ಸಿಬಾ ರಾಣಿ ಕೊರ್ಲಪಾಟಿ ಅವರು ಉಡುಪಿ ಜಿಲ್ಲೆ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ.