Asianet Suvarna News Asianet Suvarna News

3ನೇ ಅಲೆ ಎದುರಿಸಲು ಸಿದ್ಧತೆ, ಎಲ್ಲಾ ಜಿಲ್ಲಾಸ್ಪತ್ರೆಯಲ್ಲಿ 80 ಬೆಡ್!

* 3ನೇ ಅಲೆ ಎದುರಿಸಲು ಸಮರೋಪಾದಿ ಸಿದ್ಧತೆ

* ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಮಾಹಿತಿ

* ಎಲ್ಲ ತಾಲೂಕು, ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳಿಗೆ 80 ಬೆಡ್‌

Karnataka Govt To Set Up Pediatric Ward In All District Hospitals To Tackle Possible Third COVID Wave pod
Author
Bangalore, First Published Jun 2, 2021, 10:58 AM IST

 ಬೆಂಗಳೂರು(ಜೂ.02): ರಾಜ್ಯದಲ್ಲಿ ಮೂರನೇ ಅಲೆಗೆ ಮುನ್ನೆಚ್ಚರಿಕೆಯಾಗಿ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸಾ ವಿಭಾಗ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ. ಪ್ರತಿ ಜಿಲ್ಲಾಸ್ಪತ್ರೆಯಲ್ಲೂ ಕಡ್ಡಾಯವಾಗಿ 70-80 ಬೆಡ್‌ಗಳ ಮಕ್ಕಳ ಪ್ರತ್ಯೇಕ ಚಿಕಿತ್ಸಾ ವಿಭಾಗ ಮಾಡಲು ನಿರ್ಧರಿಸಿದ್ದೇವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.

ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಮಂಗಳವಾರ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಮೂರನೇ ಅಲೆ ಎದುರಿಸಲು ಸಿದ್ಧವಾಗಿದ್ದೇವೆ. ಪ್ರತಿ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳಲ್ಲಿ 70-80 ಬೆಡ್‌ಗಳ ಮಕ್ಕಳ ಚಿಕಿತ್ಸಾ ವಿಭಾಗ ತೆರೆಯಲಾಗುವುದು. ಈಗಾಗಲೇ 20 ಬೆಡ್‌ಗಳ ಮಕ್ಕಳ ಚಿಕಿತ್ಸಾ ವಿಭಾಗ ಇರುವ ಕಡೆ ಬೆಡ್‌ಗಳ ಸಂಖ್ಯೆಯನ್ನು 80ಕ್ಕೆ ಹೆಚ್ಚಿಸಲಾಗುವುದು ಎಂದು ಹೇಳಿದರು.

ಅಲ್ಲದೆ ಮಕ್ಕಳ ಚಿಕಿತ್ಸೆಗೆ ಬೇಕಾಗಿರುವ ತಜ್ಞ ವೈದ್ಯರು, ಶುಶ್ರೂಷಕರು ಹಾಗೂ ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ನೇಮಿಸಲಾಗುವುದು. ಎಂಬಿಬಿಎಸ್‌ ವೈದ್ಯರು, ತಾಂತ್ರಿಕ ಸಿಬ್ಬಂದಿಗೆ ಮಕ್ಕಳಿಗೆ ಚಿಕಿತ್ಸೆ ನೀಡುವ ಕುರಿತು ತರಬೇತಿ ನೀಡಲು ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಿಂದ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ನಮ್ಮ ರಾಜ್ಯದಲ್ಲೇ ಅತಿ ಹೆಚ್ಚು ಮಕ್ಕಳ ತಜ್ಞರು ಇದ್ದಾರೆ. ಅಲ್ಲದೆ ತಜ್ಞರು ಮೂರನೇ ಅಲೆಯಲ್ಲಿ ಮಕ್ಕಳಿಗೆ ಕೊರೋನಾ ಬಾಧಿಸಬಹುದು ಎಂದು ಅಂದಾಜಿಸಿದ್ದಾರೆ. ಹೀಗಾಗಿ 19 ವರ್ಷದವರೆಗಿನ ಮಕ್ಕಳಿಗೆ ಮಕ್ಕಳ ತಜ್ಞರೇ ಚಿಕಿತ್ಸೆ ನೀಡಬೇಕು. ಈ ವಯೋಮಾನದವರಲ್ಲಿ ಸಮಸ್ಯೆ ಬಂದಾಗ ಮಕ್ಕಳ ತಜ್ಞರ ಬಳಿ ತೋರಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಇದರ ಬಗ್ಗೆ ಹೆಚ್ಚು ಅರಿವು ಮೂಡಿಸಲಾಗುವುದು ಎಂದರು.

ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್‌ ಘಟಕ:

ಆಕ್ಸಿಜನ್‌ ಕೊರತೆ ನೀಗಿಸಲು ಹಾಗೂ 3ನೇ ಅಲೆಗೆ ಸಿದ್ಧತೆ ನಡೆಸಲು ಪ್ರತಿ ತಾಲೂಕು ಹಾಗೂ ಜಿಲ್ಲಾಸ್ಪತ್ರೆಗಳಲ್ಲೂ ಆಕ್ಸಿಜನ್‌ ಘಟಕ ಆರಂಭಿಸಲಾಗುವುದು. ರೂಪಾಂತರಿ ವೈರಾಣು ಪತ್ತೆಗೆ 5 ವೈದ್ಯಕೀಯ ಕಾಲೇಜು ಹಾಗೂ ಆರೋಗ್ಯ ಇಲಾಖೆಯಡಿಯ ಮಂಗಳೂರಿನ ವೆನ್‌ಲಾಕ್‌ ಹಾಗೂ ವಿಜಯಪುರ ಆಸ್ಪತ್ರೆ ಸೇರಿ 7 ಕಡೆ ಜೀನೋಮಿಕ್‌ ಲ್ಯಾಬ್‌ಗಳನ್ನು ಆರಂಭಿಸಲಾಗುವುದು. ಇಲ್ಲಿ ವೈರಾಣು ಸ್ವಭಾವ ಅಧ್ಯಯನ ಮಾಡಿ ಅದಕ್ಕೆ ಬೇಕಾದ ಚಿಕಿತ್ಸೆಯನ್ನು ಇಲ್ಲಿ ತೀರ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು.

ಏನೇನು ಕ್ರಮ?

- ಎಲ್ಲಾ ಜಿಲ್ಲಾ, ತಾಲೂಕು ಆಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸಾ ವಿಭಾಗ ಆರಂಭ

- ಮಕ್ಕಳ ಚಿಕಿತ್ಸೆಗೆ ಬೇಕಾದ ಹೆಚ್ಚುವರಿ ವೈದ್ಯರು, ಇತರೆ ಸಿಬ್ಬಂದಿ ನೇಮಕ

- ಪ್ರತಿ ತಾಲೂಕು ಆಸ್ಪತ್ರೆಯಲ್ಲೂ ಆಕ್ಸಿಜನ್‌ ಘಟಕ ಆರಂಭ

- ಎಂಬಿಬಿಎಸ್‌ ವೈದ್ಯರು, ತಾಂತ್ರಿಕ ಸಿಬ್ಬಂದಿಗೆ ಮಕ್ಕಳ ಚಿಕಿತ್ಸೆ ಕುರಿತು ತರಬೇತಿ

- ರೂಪಾಂತರಿ ವೈರಸ್‌ ಪತ್ತೆಗೆ 7 ಕಡೆ ಜೀನೋಮಿಕ್‌ ಲ್ಯಾಬ್‌ ಆರಂಭ

Follow Us:
Download App:
  • android
  • ios