ಮಕ್ಕಳನ್ನು ಬಳಸಿಕೊಂಡು ಬಿಕ್ಷಾಟನೆ ಮಾಡುವ ದಂಧೆ ಹಾಗೂ ತೃತೀಯ ಲಿಂಗಿಗಳು ಬಿಕ್ಷಾಟನೆ ಹೆಸರಿನಲ್ಲಿ ಸಾರ್ವಜನಿಕರಿಗೆ ಕಿರುಕುಳ ತಡೆಯಲು ಕರ್ನಾಟಕ ಸರ್ಕಾರ ಮುಂದಾಗಿದೆ.
ವರದಿ- ಸುರೇಶ್ ಎ ಎಲ್ , ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು, (ಜುಲೈ.14): ಸಿಗ್ನಲ್ ಗಳಲ್ಲಿ ಪುಟ್ಟ ಮಕ್ಕಳನ್ನು ಬಳಸಿಕೊಂಡು ಬಿಕ್ಷಾಟನೆ ಮಾಡುವ ದಂಧೆ ಮೇಲೆ ರಾಜ್ಯ ಸರ್ಕಾರ ಕಣ್ಣಿಡಲು ತೀರ್ಮಾನಿಸಿದೆ. ಹಸುಗೂಸುಗಳಿಗೆ ಮಂಪರು ಮಾತ್ರೆ ತಿನ್ನಿಸಿ, ಮಕ್ಕಳನ್ನು ಬಾಡಿಗೆಗೆ ಅಂತಾ ಪಡೆದು ಸಾರ್ವಜನಿಕರ ಸಿಂಪತಿ ಪಡೆದು ಬಿಕ್ಷೆ ಕೇಳುವ ದಂಧೆಗೆ ಬ್ರೇಕ್ ಹಾಕಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ.
ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರ್ ನೇತೃತ್ವದಲ್ಲಿ ಇಂದು ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಈ ವಿಚಾರವಾಗಿ ಚರ್ಚೆ ನಡೆಸಲಾಯಿತು. ಬೆಂಗಳೂರಿನ ವಿವಿಧ ಸಿಗ್ನಲ್ ಗಳು, ದೇವಸ್ಥಾನಗಳು, ಮಾರ್ಕೆಟ್ ಗಳು, ಮಾಲ್ ಗಳು, ಮತ್ತಿತರ ಜನನಿಬಿಡ ಪ್ರದೇಶಗಳಲ್ಲಿ ಹಲವು ಮಹಿಳೆಯರು ಮಕ್ಕಳನ್ನು ಕಂಕುಳಲ್ಲಿ ಇಟ್ಟುಕೊಂಡು ಬಿಕ್ಷಾಟನೆ ಮಾಡುತ್ತಿರುವುದು, ಹಾಗೂ ತೃತೀಯ ಲಿಂಗಿಗಳು ಬಿಕ್ಷಾಟನೆ ಹೆಸರಿನಲ್ಲಿ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿರುವುದು ,ಇಲಾಖೆಯ ಗಮನಕ್ಕೆ ಬಂದಿದೆ.
ಕೋವಿಡ್ ಬಳಿಕ ಬೆಂಗಳೂರಲ್ಲಿ ಹೆಚ್ಚಾಗಿದೆ ಭಿಕ್ಷುಕರ ಸಂಖ್ಯೆ!
ಬಿಕ್ಷಾಟನೆ ತಡೆಗಟ್ಟಲು ಹಲವು ಇಲಾಖೆಗಳ ನಡುವೆ ಸಮನ್ವಯ ಅಗತ್ಯ. ಕಾರ್ಮಿಕ ಇಲಾಖೆ, ಮಕ್ಕಳ ಕಲ್ಯಾಣ ಇಲಾಖೆ, ಪೋಲೀಸ್ ಇಲಾಖೆ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಎಲ್ಲರೂ ಸಮನ್ವಯ ದಿಂದ ಕೆಲಸ ಮಾಡಿ ಈ ದಂಧೆಯನ್ನು ತಡೆಗಟ್ಟಲು ಪ್ರಯತ್ನ ಮಾಡಬೇಕೆಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಸೂಚನೆ ನೀಡಿದ್ದಾರೆ.
ಬಿಕ್ಷಾಟನೆ ಯಲ್ಲಿ ಮಕ್ಕಳ ಜೊತೆ ಮಹಿಳೆ ಅಥವಾ ಬೇರೆ ಯಾರಾದ್ರೂ ವ್ಯಕ್ತಿ ಇದ್ದಲ್ಲಿ ಅಂತಹವರ ಮೇಲ ಕೂಡಲೇ ಕ್ರಮ ಜರುಗಿಸಬೇಕು ಹಾಗೂ ಆ ಮಕ್ಕಳನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸುವ ವ್ಯವಸ್ಥೆ ಮಾಡಬೇಕು ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಸೂಚಿಸಿದ್ದಾರೆ. ರಾಜ್ಯದ 31 ಜಿಲ್ಲೆಗಳಲ್ಲಿ ಮಕ್ಕಳ ರಕ್ಷಣಾ ಸಮಿತಿಯು ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಲು ಇಲಾಖೆಯು ನಿರ್ದೇಶನ ನೀಡಿದೆ.
ಇಲಾಖೆಯಲ್ಲಿ ಅಧಿಕಾರಿಗಳು ಸಮರ್ಥವಾಗಿ ಕೆಲಸ ಮಾಡಿ ಮಕ್ಕಳನ್ನು ಬಿಕ್ಷಾಟನೆ ಹೆಸರಿನಲ್ಲಿ ಇಂತಹಾ ದಂಧೆಗೆ ಬಳಸಿಕೊಳ್ಳುವ ವ್ಯಕ್ತಿ ಗಳ ಮೇಲೆ ಕಠಿಣ ಕ್ರಮ ತೆಗೆದು ಕೊಳ್ಳಲು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದ್ದಾರೆ.
