ಬೆಂಗಳೂರು(ಏ.10): ಕೋವಿಡ್‌ ಎರಡನೇ ಅಲೆ ನಿಯಂತ್ರಣ ಸಂಬಂಧ ಶನಿವಾರದಿಂದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಂಟು ನಗರಗಳಲ್ಲಿ ಪ್ರಾಯೋಗಿಕವಾಗಿ ರಾತ್ರಿ ಕರ್ಫ್ಯೂ ಜಾರಿಗೆ ಬರಲಿದ್ದು, ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಶುಕ್ರವಾರ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ.

ಬೆಂಗಳೂರು, ಮೈಸೂರು, ತುಮಕೂರು, ಉಡುಪಿ, ಮಣಿಪಾಲ, ಮಂಗಳೂರು, ಕಲಬುರಗಿ ಹಾಗೂ ಬೀದರ್‌ನಲ್ಲಿ ಈ ಕರ್ಫ್ಯೂ ಅನುಷ್ಠಾನಗೊಳ್ಳಲಿದೆ. ಈ ತಿಂಗಳ 20ರವರೆಗೆ ಪ್ರತಿನಿತ್ಯ ರಾತ್ರಿ 10ರಿಂದ ಬೆಳಗ್ಗೆ 5ಗಂಟೆವರೆಗೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಇತರ ಎಲ್ಲ ವಾಣಿಜ್ಯ ಚಟುವಟಿಕೆಗಳನ್ನು ಬಂದ್‌ ಮಾಡಲಾಗುತ್ತದೆ.

ಈ ಅವಧಿಯಲ್ಲಿ ವಿವಿಧ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಮತ್ತು ಅವರ ಸಹಾಯಕರಿಗೆ ವೈದ್ಯಕೀಯ ಸೇವೆಗಾಗಿ ಸಂಚಾರಕ್ಕೆ ಅನುಮತಿ ನೀಡಲಾಗಿದ್ದು, ವೈದ್ಯಕೀಯ ಸೇವೆಗಳು ಮತ್ತು ತುರ್ತು ಚಟುವಟಿಕೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಅತ್ಯವಶ್ಯಕ ಸೇವೆಗಳನ್ನು ಒದಗಿಸುವಂತಹ ವಾಹನಗಳು/ ಸರಕು ಸಾಗಾಣಿಕೆ ವಾಹನಗಳು, ಇ-ಕಾಮರ್ಸ್‌, ಹೋಮ್‌ ಡೆಲಿವರಿ ಮತ್ತು ಖಾಲಿ ವಾಹನಗಳ ಸಂಚಾರಕ್ಕೆ ಮಾತ್ರ ಅನುವು ಮಾಡಿಕೊಡಲಾಗಿದೆ. ರಾತ್ರಿ ವೇಳೆಯಲ್ಲಿನ ಬಸ್‌, ರೈಲು ಮತ್ತು ವಿಮಾನದ ದೂರ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ. ಪ್ರಯಾಣಿಕರು ಮನೆಯಿಂದ ನಿಲ್ದಾಣಗಳಿಗೆ ಮತ್ತು ನಿಲ್ದಾಣಗಳಿಂದ ಮನೆಗೆ ಅಧಿಕೃತ ಟಿಕೆಟ್‌ಗಳ ಆಧಾರದ ಮೇಲೆ ಆಟೋ, ಕ್ಯಾಬ್‌ ಇತ್ಯಾದಿಗಳ ಮೂಲಕ ಸಂಚರಿಸಲು ಅನುಮತಿ ನೀಡಲಾಗಿದೆ.

ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಕಾರ್ಖಾನೆಗಳು, ಕಂಪನಿಗಳು, ಸಂಸ್ಥೆಗಳು ಯಥಾರೀತಿ ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ. ರಾತ್ರಿ ವೇಳೆ ಕೆಲಸಕ್ಕೆ ತೆರಳುವ ಕಾರ್ಮಿಕರು, ನೌಕರರು ಕೊರೋನಾ ಕರ್ಫ್ಯೂ ಅವಧಿಗೂ ಮುನ್ನವೇ ಕರ್ತವ್ಯದಲ್ಲಿ ಹಾಜರಿರಬೇಕು ಎಂದು ಸೂಚಿಸಲಾಗಿದೆ. ಜೊತೆಗೆ ಕಫä್ರ್ಯ ಅವಧಿಯಲ್ಲಿ ಸಂಚರಿಸುವ ಅಗತ್ಯ ಸೇವೆಗಳ ಸಿಬ್ಬಂದಿಗಳು ತಮ್ಮ ಗುರುತಿನ ಚೀಟಿಯನ್ನು ಇಟ್ಟುಕೊಂಡಿರಬೇಕಾಗುತ್ತದೆ.

ಕೋವಿಡ್‌ ನಿಯಂತ್ರಣಕ್ಕೆ ಬಾರದಿದ್ದರೆ ರಾತ್ರಿ ಕರ್ಫ್ಯೂವನ್ನು ಇಡೀ ರಾಜ್ಯಕ್ಕೆ ವಿಸ್ತರಣೆ ಮಾಡುವ ಸಾಧ್ಯತೆ ಇದೆ. ಸರ್ಕಾರವು ಹೊರಡಿಸಿರುವ ಆದೇಶವನ್ನು ಬಿಬಿಎಂಪಿ, ಪೊಲೀಸ್‌ ಆಯುಕ್ತರು, ಜಿಲ್ಲಾಡಳಿತ ಮತ್ತು ಪೊಲೀಸ್‌ ವರಿಷ್ಠಾಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಆದೇಶ ಪಾಲನೆ ಮಾಡದಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

ಕಟ್ಟುನಿಟ್ಟಿನ ಜಾರಿಗೆ ಪೊಲೀಸರು ಸಜ್ಜು:

ರಾಜ್ಯ ಸರ್ಕಾರದ ಆದೇಶದ ಅನ್ವಯ ರಾಜಧಾನಿ ಬೆಂಗಳೂರು ಸೇರಿದಂತೆ ಎಂಟು ನಗರಗಳಲ್ಲಿ ಶನಿವಾರ ರಾತ್ರಿಯಿಂದ ಕಟ್ಟು ನಿಟ್ಟಾಗಿ ನೈಟ್‌ ಕರ್ಫ್ಯೂ ಜಾರಿಗೊಳಿಸಲು ಪೊಲೀಸರು ಸಜ್ಜಾಗಿದ್ದಾರೆ.

ಸರ್ಕಾರದ ಮಾರ್ಗಸೂಚಿಯನ್ನು ಜನರು ಕಡ್ಡಾಯವಾಗಿ ಪಾಲಿಸಬೇಕು. ಕಾನೂನು ಉಲ್ಲಂಘಿಸಿ ರಾತ್ರಿ 10 ಗಂಟೆ ನಂತರ ಜಾಲಿ ರೈಡ್‌ ಅಥವಾ ಅನಗತ್ಯವಾಗಿ ಓಡಾಟ ನಡೆಸಿದರೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುತ್ತದೆ. ಹಾಗೆಯೇ ಜನರ ವಾಹನಗಳನ್ನು ಜಪ್ತಿ ಮಾಡಲಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ನೈಟ್‌ಕರ್ಫ್ಯೂ ಜಾರಿ ಸಂಬಂಧ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಅವರು ಶುಕ್ರವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

ಕೊರೋನಾ ಅಲೆ ಹರಡುವಿಕೆ ತಡೆಗಟ್ಟುವಿಕೆ ಕಾರ್ಯದಲ್ಲಿ ಪೊಲೀಸರ ಪಾತ್ರ ಮಹತ್ವದ್ದಾಗಿದೆ. ಲಾಕ್‌ಡೌನ್‌ ವೇಳೆ ಪೊಲೀಸರು ಸಮರ್ಥವಾಗಿ ಕಾರ್ಯನಿರ್ವಹಿಸಿದ್ದರು. ಅದೇ ರೀತಿ ಈ ಬಾರಿ ಸಹ ರಾತ್ರಿ ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಪೊಲೀಸರು ಮುಂದಾಗಬೇಕು. ಆದರೆ, ಜನರ ಮೇಲೆ ಅನಗತ್ಯವಾಗಿ ಬಲಪ್ರಯೋಗ ಮಾಡಬೇಡಿ. ಕಾನೂನು ಮತ್ತು ಸುವ್ಯವಸ್ಥೆ ಧಕ್ಕೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಅನಗತ್ಯವಾಗಿ ಓಡಾಡಿದರೆ ವಾಹನ ಜಪ್ತಿ, ಕೇಸ್‌ ದಾಖಲು

ರಾತ್ರಿ ಕರ್ಫ್ಯೂ ಜಾರಿಗೆ ಬರಲಿರುವ 8 ನಗರಗಳ ವ್ಯಾಪ್ತಿಯಲ್ಲಿ ರಾತ್ರಿ 10 ಗಂಟೆ ನಂತರ ಸಾರ್ವಜನಿಕರ ಓಡಾಟಕ್ಕೆ ಪೊಲೀಸರು ನಿರ್ಬಂಧ ವಿಧಿಸಲಿದ್ದಾರೆ.

ಪ್ರಮುಖ ರಸ್ತೆಗಳಲ್ಲಿ ವಾಹನಗಳ ತಪಾಸಣೆ ನಡೆಸಲಿದ್ದು, ಅನಗತ್ಯವಾಗಿ ಓಡಾಟ ಕಂಡು ಬಂದರೆ ವಾಹನಗಳನ್ನು ಜಪ್ತಿ ಮಾಡಲಿದ್ದಾರೆ. ಅಲ್ಲದೆ, ಪ್ರತ್ಯೇಕ ಎಫ್‌ಐಆರ್‌ ಸಹ ದಾಖಲಿಸಿ ಜನರಿಗೆ ಬಿಸಿ ಮುಟ್ಟಿಸಲಿದ್ದಾರೆ. ಬಸ್‌, ರೈಲ್ವೆ ನಿಲ್ದಾಣಗಳಿಗೆ ತೆರಳುವ ಪ್ರಯಾಣಿಕರು ಪ್ರಯಾಣದ ಬಗ್ಗೆ ಸೂಕ್ತ ಮಾಹಿತಿ ನೀಡಬೇಕು. ಸುಳ್ಳು ಹೇಳಿದರೆ ತಕ್ಕ ಶಾಸ್ತಿಯಾಗಲಿದೆ. ಅದೇ ರೀತಿ ಹಾಲು, ಹಣ್ಣು, ತರಕಾರಿ, ಔಷಧ ಸೇರಿದಂತೆ ಅಗತ್ಯ ವಸ್ತುಗಳ ಸಾಗಾಣಿಕೆ ವಾಹನಗಳು ಹಾಗೂ ವೈದ್ಯಕೀಯ ಸೇವಾ ವಲಯದ ವಾಹನಗಳ ಓಡಾಟಕ್ಕೆ ಯಾವುದೇ ಅಡ್ಡಿಯಿಲ್ಲ.

ಎಂಟು ನಗರಗಳನ್ನು ಸಂಪರ್ಕಿಸುವ ರಸ್ತೆಗಳಲ್ಲಿ ವಾಹನ ತಪಾಸಣೆ ನಡೆಯಲಿದೆ. ಸಾರ್ವಜನಿಕ ಸಾರಿಗೆ ವಾಹನಗಳ ಸಂಚಾರಕ್ಕೆ ನಿರ್ಬಂಧವಿರುವುದಿಲ್ಲ. ಖಾಸಗಿ ಕಂಪನಿಗಳಲ್ಲಿ ರಾತ್ರಿ ಪಾಳಿಯ ಕೆಲಸಗಾರರು ಕಂಪನಿಯ ಗುರುತಿನ ಚೀಟಿ ಹಾಗೂ ರಾತ್ರಿ ಸಂಚಾರದ ಕುರಿತು ಸದರಿ ಕಂಪನಿಯಿಂದ ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು. ಸಾರ್ವಜನಿಕರು ಗುಂಪುಗೂಡುವ ಫುಡ್‌ ಸ್ಟ್ರೀಟ್‌ಗಳು, ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳಲ್ಲಿ ರಾತ್ರಿ 10 ಗಂಟೆ ಮುನ್ನವೇ ವಹಿವಾಟು ಮುಗಿಸಬೇಕು. ಹಾಗೆಯೇ ಕಲ್ಯಾಣ ಮಂಟಪಗಳಲ್ಲಿ ಸಹ ಜನರ ಸೇರುವಿಕೆಗೆ ಅವಕಾಶವಿರುವುದಿಲ್ಲ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಫುಡ್‌ ಸ್ಟ್ರೀಟ್‌, ಬಾರ್‌ ಬೇಗ ಮುಚ್ಚಿ

ಜನರು ಸೇರುವ ಫುಡ್‌ ಸ್ಟ್ರೀಟ್‌ಗಳು, ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳನ್ನು ರಾತ್ರಿ 10 ಗಂಟೆ ಮುನ್ನವೇ ಮುಚ್ಚಬೇಕು. ಕಲ್ಯಾಣ ಮಂಟಪಗಳಲ್ಲಿ ಜನರ ಸೇರುವಿಕೆಗೆ ಅವಕಾಶ ಇಲ್ಲ. ರಾತ್ರಿ ಪಾಳಿ ನೌಕರರು ಕಂಪನಿಯ ಗುರುತಿನ ಚೀಟಿ, ಒಪ್ಪಿಗೆ ಪತ್ರ ಹೊಂದಿರಬೇಕು.

- ಪ್ರವೀಣ್‌ ಸೂದ್‌, ರಾಜ್ಯ ಪೊಲೀಸ್‌ ಮಹಾನಿರ್ದೇಶಕ