ಕೊರೋನಾ ಸೋಂಕು ನಿಗ್ರಹಕ್ಕೆ ಸರ್ಕಾರ ಮತ್ತಷ್ಟುಕ್ರಮ : ರಜೆ ಇಲ್ಲ
ರಾಜ್ಯದಲ್ಲಿ ಕೊರೋನಾ ಮಹಾಮಾರಿ ಹೆಚ್ಚಳವಾಗಿದ್ದು ಕೊರೋನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹಲವು ರೀತಿಯ ರಜೆಗಳನ್ನು ರದ್ದು ಮಾಡುತ್ತಿದ್ದು, ಹೆಚ್ಚಿನ ಆರೋಗ್ಯ ಇಲಾಖೇ ಸಿಬ್ಬಂದಿ ನೇಮಕ ಮಾಡಿಕೊಳ್ಳುತ್ತಿದೆ.
ಬೆಂಗಳೂರು (ಮಾ.19): ಕೊರೋನಾ 2ನೇ ಅಲೆ ಬರದಂತೆ ತಡೆಗಟ್ಟಲು ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಮುಂದಿನ 50 ದಿನ ರಜೆ ಪಡೆಯದಂತೆ ಸೂಚಿಸಲಾಗಿದೆ. ಅಲ್ಲದೆ, ಪರಿಸ್ಥಿತಿ ನಿರ್ವಹಣೆ ದೃಷ್ಟಿಯಿಂದ ತಾತ್ಕಾಲಿಕವಾಗಿ ಗೃಹ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ರಾಜಧಾನಿ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ 1000 ಹಾಸಿಗೆ ಸಿದ್ಧಪಡಿಸಲಾಗಿದೆ. ಸೋಮವಾರದಿಂದ 3 ಕೋವಿಡ್ ಆರೈಕೆ ಕೇಂದ್ರ ಆರಂಭವಾಗಲಿದೆ. ಅಲ್ಲದೆ, ವಾರ್ಡ್‌ಗೆ ಒಂದರಂತೆ 200 ಆ್ಯಂಬುಲೆನ್ಸ್‌ಗಳನ್ನು ನಿಯೋಜಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಕೋವಿಡ್ ಪ್ರಕರಣ ಹೆಚ್ಚಳವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸೂಚನೆ ನೀಡಿದ ಬೆನ್ನಲ್ಲೇ ಗುರುವಾರ ವಿಧಾನಸೌಧದಲ್ಲಿ ಸರ್ಕಾರಿ ಆಸ್ಪತ್ರೆಯ ಮುಖ್ಯಸ್ಥರು, ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ದೇಶದ ಇತರೆಡೆಯಂತೆ ರಾಜ್ಯದಲ್ಲೂ ಸೋಂಕು ಹೆಚ್ಚುತ್ತಿದೆ. ಇದಕ್ಕೆ ಅಗತ್ಯ ಸಿದ್ಧತೆ ಆರಂಭಿಸಿದ್ದು, ಆರೋಗ್ಯ ಸಿಬ್ಬಂದಿಗೆ ರಜೆ ಪಡೆಯದಂತೆ ಸೂಚನೆ ನೀಡಲಾಗಿದೆ. ಬೆಂಗಳೂರಿನಂತಹ ಸೋಂಕು ಹೆಚ್ಚಿರುವ ನಗರಗಳು ಮಾತ್ರವಲ್ಲದೆ ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿಯೂ ಪರೀಕ್ಷಾ ಸಾಮರ್ಥ್ಯ ಹೆಚ್ಚಿಸಲಾಗುವುದು. ಸರ್ಕಾರಿ ಸಂಸ್ಥೆಗಳಲ್ಲಿ ಕೋವಿಡ್ ಸಂಬಂಧಿ ರೋಗಿಗಳಿಗೆಂದು ಪ್ರತ್ಯೇಕ ಕಿಯೋಸ್ಕ್ ಸ್ಥಾಪಿಸುವಂತೆ ಸೂಚನೆ ನೀಡಲಾಗಿದೆ, ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳ ಬಗ್ಗೆ ತಕ್ಷಣವೇ ಮಾಹಿತಿ ನೀಡುವ ಪ್ರಕ್ರಿಯೆಯನ್ನು ಪುನರಾಂಭಿಸಲಾಗುತ್ತದೆ ಎಂದು ತಿಳಿಸಿದರು.
ಗಡಿಗಳಲ್ಲಿ ಇಂದಿನಿಂದ ಕಟ್ಟುನಿಟ್ಟಿನ ಕೋವಿಡ್ ತಪಾಸಣೆ
ಗಡಿಯಲ್ಲಿ ಕಟ್ಟೆಚ್ಚರ:
ಮಹಾರಾಷ್ಟ್ರದಲ್ಲಿ ಬುಧವಾರ 23,000ಕ್ಕಿಂತಲೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿದೆ. ಈ ರಾಜ್ಯದೊಂದಿಗೆ ನಮ್ಮ ರಾಜ್ಯದ ಆರು ಜಿಲ್ಲೆಗಳು ಗಡಿ ಹಂಚಿಕೊಳ್ಳುತ್ತಿವೆ. ಅದೇ ರೀತಿ ಕೇರಳದಲ್ಲಿಯೂ 2,000ಕ್ಕಿಂತ ಹೆಚ್ಚು ಪ್ರಕರಣ ವರದಿಯಾಗಿರುವುದು ಆತಂಕ ತಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಗಡಿ ಪ್ರದೇಶದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದರು.
ಉಪ ಚುನಾವಣೆ ಸಂದರ್ಭದಲ್ಲಿ ಕೋವಿಡ್ ಮಾರ್ಗಸೂಚಿಯ ಬಗ್ಗೆ ಚುನಾವಣಾ ಆಯುಕ್ತರು ತೀರ್ಮಾನ ಕೈಗೊಳ್ಳುತ್ತಾರೆ. ರಾಜಕೀಯ ಸಮಾರಂಭಗಳಲ್ಲಿ ಜನ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ. ರಾಜ್ಯದಲ್ಲಿ ನಡೆಯುತ್ತಿರುವ ಆರ್ಥಿಕ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧ ಹಾಕಿಲ್ಲ. ಕೇವಲ ದೊಡ್ಡ ಪ್ರಮಾಣದಲ್ಲಿ ಜನ ಸೇರುವುದನ್ನು ನಿರ್ಬಂಧಿಸಿದ್ದೇವೆ. ಮಾಸ್ಕ್ ಧಾರಣೆ ಮತ್ತು ಸಾಮಾಜಿಕ ಅಂತರ ಕಾಪಾಡಬೇಕು ಎಂಬ ಷರತ್ತು ಹಾಕಿದ್ದೇವೆ. ನಿಯಮ ಉಲ್ಲಂಘನೆ ಮಾಡುವವರಿಗೆ ಮುಂದಿನ ದಿನಗಳಲ್ಲಿ ದಂಡ ಹಾಕಲಾಗುವುದು ಎಂದು ಸುಧಾಕರ್ ಎಚ್ಚರಿಸಿದರು.