Asianet Suvarna News Asianet Suvarna News

ಗಡಿಗಳಲ್ಲಿ ಇಂದಿನಿಂದ ಕಟ್ಟುನಿಟ್ಟಿನ ಕೋವಿಡ್‌ ತಪಾಸಣೆ

ಮಹಾರಾಷ್ಟ್ರ, ಕೇರಳದಿಂದ ಬರುವವರಿಗೆ ಆರ್‌ಟಿಪಿಸಿಆರ್‌ ನೆಗೆಟಿವ್‌ ಪ್ರಮಾಣಪತ್ರ ಕಡ್ಡಾಯ| ಗೋವಾಕ್ಕೆ ಹೊಂದಿಕೊಂಡಿರುವ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿ ಹಾಗೂ ಜೊಯಿಡಾದ ಅನಮೋಡ ಚೆಕ್‌ಪೋಸ್ಟ್‌, ಮುರ್ಡೇಶ್ವರ ಹಾಗೂ ಗೋಕರ್ಣಗಳಲ್ಲಿ ಮಹಾರಾಷ್ಟ್ರ ಹಾಗೂ ಕೇರಳದಿಂದ ಬರುವವರ ಪರಿಶೀಲನೆ|  

Strict Covid Checkup at Border grg
Author
Bengaluru, First Published Mar 18, 2021, 9:53 AM IST

ಕಾರವಾರ(ಮಾ.18): ಮಹಾರಾಷ್ಟ್ರ ಹಾಗೂ ಕೇರಳಗಳಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಜಿಲ್ಲೆಗೆ ಆಗಮಿಸುವವರು ಆರ್‌ಟಿಪಿಸಿಆರ್‌ ಪ್ರಮಾಣ ಪತ್ರ ಕಡ್ಡಾಯವಾಗಿ ತರಬೇಕು. ಗಡಿಗಳಲ್ಲಿ ಕಟ್ಟುನಿಟ್ಟಿನ ತಪಾಸಣೆಗೆ ಸೂಚನೆ ನೀಡಲಾಗಿದ್ದು, ಗುರುವಾರದಿಂದ (ಮಾ.18) ಕಾರ್ಯರೂಪಕ್ಕೆ ತರಲಾಗುತ್ತದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಗಾ ಎಂ. ತಿಳಿಸಿದರು.

ನಗರದಲ್ಲಿ ಮಾಧ್ಯಮಗಳ ಜತೆಗೆ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸೋಮವಾರ ರಾಜ್ಯದ ಎಲ್ಲಾ ಡೀಸಿ ಹಾಗೂ ಸಿಇಒಗಳ ಜತೆಗೆ ವಿಡಿಯೊ ಸಂವಾದ ನಡೆಸಿದ್ದಾರೆ. ಕೋವಿಡ್‌ ಎರಡನೇ ಅಲೆಗೆ ಏನೇನು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎನ್ನುವುದರ ಬಗ್ಗೆ ಸಂವಾದದಲ್ಲಿ ಸೂಚಿಸಿದ್ದಾರೆ. ಸರ್ಕಾರ ಇತ್ತೀಚಿಗೆ ಹೊರಡಿಸಿದ್ದ ಸುತ್ತೋಲೆಯ ಪ್ರಕಾರ ಮಹಾರಾಷ್ಟ್ರ ಹಾಗೂ ಕೇರಳದಿಂದ ಬರುವವರಿಗೆ ಆರ್‌ಟಿಪಿಸಿಆರ್‌ ನೆಗೆಟಿವ್‌ ಪ್ರಮಾಣ ಪತ್ರವನ್ನು ತರಬೇಕಿದೆ. ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು ಜಿಲ್ಲಾಡಳಿತ ತೀರ್ಮಾನಿಸಿದೆ ಎಂದು ಎಂದರು.

'ಮಾಸ್ಕ್‌ ಹಾಕದಿದ್ದರೆ ಬಸ್‌ಗೆ ಹತ್ತಿಸಬೇಡಿ'

ಗೋವಾಕ್ಕೆ ಹೊಂದಿಕೊಂಡಿರುವ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿ ಹಾಗೂ ಜೊಯಿಡಾದ ಅನಮೋಡ ಚೆಕ್‌ಪೋಸ್ಟ್‌, ಮುರ್ಡೇಶ್ವರ ಹಾಗೂ ಗೋಕರ್ಣಗಳಲ್ಲಿ ಮಹಾರಾಷ್ಟ್ರ ಹಾಗೂ ಕೇರಳದಿಂದ ಬರುವವರನ್ನು ಪರಿಶೀಲನೆ ನಡೆಸಲಾಗುತ್ತದೆ. ಪ್ರಯಾಣಿಕರು ಅಥವಾ ಪ್ರವಾಸಿಗರಿಗೆ ಯಾವುದೇ ಜಿಲ್ಲೆಗೆ ಬರಲು ಯಾವುದೇ ಅಡ್ಡಿ ಉಂಟು ಮಾಡುವುದಿಲ್ಲ. ಆದರೆ ಆರ್‌ಟಿಪಿಸಿಆರ್‌ ನೆಗೆಟಿವ್‌ ಪ್ರಮಾಣ ಪತ್ರವನ್ನು ಅವರು ಕಡ್ಡಾಯವಾಗಿ ಹೊಂದಿರಬೇಕು ಎಂದು ಹೇಳಿದರು.

ಗಡಿಗಳ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸ್‌ ಹಾಗೂ ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಅವರು ಜಿಲ್ಲೆಗೆ ಹೊರಗಿನಿಂದ ಬರುವವರ ಮಾಹಿತಿಗಳನ್ನು ಕಲೆಹಾಕಲಿದ್ದಾರೆ. ಆ ಎರಡು ರಾಜ್ಯದ ಜನತೆಯನ್ನು ಹೆಚ್ಚಿನ ತಪಾಸಣೆ ನಡೆಸಿ ಜಿಲ್ಲೆಯೊಳಗೆ ಬಿಡಲಿದ್ದಾರೆ. ಗೋಕರ್ಣ, ಮುರ್ಡೇಶ್ವರಕ್ಕೆ ವಾರಾಂತ್ಯದಲ್ಲಿ ಪ್ರವಾಸಿಗರು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಒಂದುವೇಳೆ ಜಿಲ್ಲೆಗೆ ಬರುವ ಆ ಎರಡು ರಾಜ್ಯಗಳ ಜನತೆ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿಕೊಳ್ಳದಿದ್ದಲ್ಲಿ ಅವರಿಗೆ ಜಿಲ್ಲೆಯಲ್ಲೇ ಪರೀಕ್ಷೆ ನಡೆಸಲು ಸೂಚಿಸಲಾಗಿದೆ. ಹೀಗಾಗಿ ಜಿಲ್ಲೆಗೆ ಬರುವ ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳ ಜನತೆ 72 ಗಂಟೆಗಳ ಒಳಗಿನ ಆರ್‌ಟಿಪಿಸಿಆರ್‌ ನೆಗೆಟಿವ್‌ ಪ್ರಮಾಣಪತ್ರವನ್ನು ಕಡ್ಡಾಯವಾಗಿ ತರಬೇಕು. ಆ ಮೂಲಕ ಕೋವಿಡ್‌ ಹರಡುವಿಕೆಯನ್ನು ತಡೆಗಟ್ಟಲು ಸಹಕಾರ ನೀಡಬೇಕು ಎಂದು ಕೋರಿದ್ದಾರೆ.
 

Follow Us:
Download App:
  • android
  • ios