ಹಿಂದುಳಿದ ವರ್ಗಗಳ ಆಯೋಗದ ಪ್ರಸ್ತಾವನೆಯಂತೆ ರಾಜ್ಯದ 7 ಕೋಟಿ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ಸರ್ಕಾರ ಸಜ್ಜಾಗಿದೆ. ಜಾತಿ ತಾರತಮ್ಯ ನಿವಾರಣೆ ಈ ಗಣತಿಯ ಪ್ರಮುಖ ಉದ್ದೇಶವಾಗಿದೆ. ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ರವರೆಗೆ ಈ ಸಮೀಕ್ಷೆ ನಡೆಯಲಿದ್ದು, ಅಕ್ಟೋಬರ್‌ಗೆ ವರದಿ ಸಲ್ಲಿಸಬೇಕಿದೆ.

ಬೆಂಗಳೂರು (ಜು.23): ಹಿಂದುಳಿದ ವರ್ಗಗಳ ಆಯೋಗ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುವ ಕುರಿತಾಗಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದೆ. ಇದರಂತೆ ರಾಜ್ಯದ ಎಲ್ಲಾ 7ಕೋಟಿ ಜನರ ಸಮೀಕ್ಷೆ ನಡೆಸಲಾಗುವುದು. ಜಾತಿ ತಾರತಮ್ಯ ನಿವಾರಣೆ ಮಾಡುವುದು ಗಣತಿಯ ಮುಖ್ಯ ಉದ್ದೇಶ ಎಂದು ಮುಖ್ಯಮಂತ್ರಿ ಅವರು ತಿಳಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜ್ಯದ ಪ್ರತಿಯೊಬ್ಬರ ಆರ್ಥಿಕ ಪರಿಸ್ಥಿತಿ, ಜಮೀನು ಇದೆಯೇ ಇಲ್ಲವೇ ಸೇರಿದಂತೆ ಸಮಗ್ರ ಸಮೀಕ್ಷೆ ನಡೆಯಬೇಕು. ಈ ಸಮೀಕ್ಷೆ ವರದಿ ಮುಂದಿನ ಬಜೆಟ್ ಸಿದ್ಧಪಡಿಸುವ ಸಂದರ್ಭದಲ್ಲಿ ಆಧಾರವಾಗಲಿದೆ. ಈ ಬಾರಿಯ ಸಮೀಕ್ಷೆ ದೇಶದಲ್ಲೇ ಮಾದರಿ ಸಮೀಕ್ಷೆಯಾಗಬೇಕು ಎಂದರು.

ಸೆಪ್ಟಂಬರ್ 22ರಿಂದ ಅಕ್ಟೋಬರ್ 7ರವರೆಗೆ 15ದಿನಗಳ ಕಾಲ ಸಮೀಕ್ಷೆ ನಡೆಸುವ ನಿರ್ಧಾರ. ಅಕ್ಟೋಬರ್ ಕೊನೆಯ ಒಳಗಾಗಿ ಸಮೀಕ್ಷೆ ವರದಿಯನ್ನು ಸಲ್ಲಿಸಬೇಕು. ತರಬೇತಿ ಸೇರಿದಂತೆ ಸಮೀಕ್ಷೆಗೆ ಪೂರ್ವಭಾವಿ ಸಿದ್ಧತೆಗಳನ್ನು ಈಗಲೇ ಆರಂಭಿಸಲು ಸೂಚನೆ ನೀಡಿದರು. ಸಮೀಕ್ಷೆ ಅತ್ಯಂತ ಸಮರ್ಪಕವಾಗಿ ನಡೆಯಬೇಕು. ಸಮೀಕ್ಷೆ ಕುರಿತು ಯಾವುದೇ ದೂರುಗಳಿಗೆ ಅಸ್ಪದವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸಮೀಕ್ಷೆಯಿಂದ ಯಾರೂ ಹೊರಗುಳಿಯದಂತೆ ಖಾತ್ರಿಪಡಿಸಬೇಕು ಎಂದರು.

ಕಾಂತರಾಜು ಆಯೋಗ 54 ಪ್ರಶ್ನೆಗಳನ್ನು ಸಿದ್ದಪಡಿಸಿ manual ಆಗಿ ಈ ಹಿಂದೆ ಸಮೀಕ್ಷೆ ನಡೆಸಿತ್ತು. ಈ ಬಾರಿಯ ಸಮೀಕ್ಷೆಯಲ್ಲಿ ಇನ್ನಷ್ಟು ಅಂಶಗಳನ್ನು ಸೇರಿಸುವ ಕುರಿತು ಪರಿಶೀಲನೆ. ಈ ಬಾರಿ ಮೊಬೈಲ್ ಆಪ್ ಬಳಸಿಕೊಂಡು ಸಮೀಕ್ಷೆ ನಡೆಸಲಾಗುವುದು. ತೆಲಂಗಾಣದಲ್ಲಿ ಕೈಗೊಳ್ಳಲಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಕುರಿತು ಅಧ್ಯಯನ ನಡೆಸಲು ಸೂಚನೆ. ಸಮೀಕ್ಷೆ ಕಾರ್ಯದ ಮೇಲುಸ್ತುವಾರಿಗೆ ಉನ್ನತಮಟ್ಟದ ಸಮಿತಿ ರಚಿಸಲು ತಿರ್ಮಾನ ಮಾಡಲಾಯಿತು.

ಸಮೀಕ್ಷೆ ವೈಜ್ಞಾನಿಕವಾಗಿ ಮತ್ತು ಪಾರದರ್ಶಕವಾಗಿ ನಡೆಯಬೇಕು. ಸಮೀಕ್ಷೆಯಲ್ಲಿ ಕೇಳಬೇಕಾದ ಪ್ರಶ್ನೆಗಳನ್ನು ಅಂತಿಮಗೊಳಿಸಲು ತಜ್ಞರ ಸಮಿತಿಯ ನೆರವು ಪಡೆಯಬೇಕು. ಈ ಬಾರಿ ಸಮೀಕ್ಷೆ ಕಾರ್ಯಕ್ಕೆ 1.65ಲಕ್ಷ ಗಣತಿದಾರರು ಸೇರಿದಂತೆ ಮಾನವ ಸಂಪನ್ಮೂಲ ಅವಶ್ಯಕತೆಯಿದೆ. ಸಮೀಕ್ಷೆ ಕಾರ್ಯಕ್ಕೆ ಶಿಕ್ಷಕರ ಸೇವೆಯೊಂದಿಗೆ ಇತರ ಇಲಾಖೆಗಳ ಸಿಬ್ಬಂದಿಗಳನ್ನು ಸಹ ಬಳಸಿಕೊಳ್ಳಲಾಗುವುದು. ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಸಮೀಕ್ಷೆ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸಮೀಕ್ಷೆ ಕಾರ್ಯವನ್ನು ಯಶಸ್ವಿಗೊಳಿಸಲು ಯೋಜನೆ ರೂಪಿಸಿ ಕಾರ್ಯನಿರ್ವಹಿಸಬೇಕು ಎಂದು ಖಡಕ್ ಸೂಚನೆಯನ್ನು ರವಾನಿಸಿದರು.

ಈ ಸಭೆಯಲ್ಲಿ ಸಚಿವರಾದ ಶಿವರಾಜ ತಂಗಡಗಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂಧನ ಆರ್ ನಾಯ್ಕ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಪೊನ್ನಣ್ಣ, ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಕರ್ನಾಟಕ ಅತಿಹೆಚ್ಚು ತಲಾದಾಯ ಹೊಂದಿದ ರಾಜ್ಯ:

ದೇಶದಲ್ಲೇ ಕರ್ನಾಟಕ ಅತಿ ಹೆಚ್ಚು ತಲಾದಾಯ ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿದೆ. ರಾಜ್ಯದ ತಲಾ ನಿವ್ವಳ ರಾಜ್ಯ ದೇಶಿಯ ಉತ್ಪನ್ನವು (ಎನ್‌ಎಸ್‌ಡಿಪಿ) 2,04,605 ರೂ. ಗೆ ತಲುಪಿದೆ ಎಂದು ಸಂಸತ್ತಿಗೆ ಕೇಂದ್ರ ಹಣಕಾಸು ಸಚಿವಾಲಯ ಸಲ್ಲಿಸಿದ ದತ್ತಾಂಶ ತಿಳಿಸಿದೆ. 2014-15 ರಲ್ಲಿ ಕರ್ನಾಟಕದ ತಲಾದಾಯವು 1,05,697 ರೂ. ಇತ್ತು. ಇದೀಗ 10 ವರ್ಷಗಳಲ್ಲಿ ಶೇ.93.6 ರಷ್ಟು ಏರಿಕೆ ಕಂಡಿರುವುದು ಗಮನಾರ್ಹ ಸಂಗತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. ಈ ಸಾಧನೆಯ ಶ್ರೇಯಸ್ಸು ನಮ್ಮ ಸರ್ಕಾರ ಜಾರಿಗೆ ಕೊಟ್ಟ ಗ್ಯಾರಂಟಿ ಯೋಜನೆಗಳಿಗೆ ಸಲ್ಲುತ್ತದೆ. ರಾಜ್ಯದ ಪ್ರತೀ ಕುಟುಂಬಗಳಿಗೂ ತಿಂಗಳಿಗೆ 4-5 ಸಾವಿರ ರೂಪಾಯಿಯಿಂದ ವರ್ಷಕ್ಕೆ 60-70 ಸಾವಿರ ರೂಪಾಯಿ ನೇರವಾಗಿ ತಲುಪಿಸುವ ಮೂಲಕ ಪ್ರತೀ ಕುಟುಂಬವನ್ನೂ ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿಸುತ್ತಿದ್ದೇವೆ. ಜನರಲ್ಲಿ ಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿ, ಅವರಿಗೆ ಆರ್ಥಿಕ, ಸಾಮಾಜಿಕ ಶಕ್ತಿಯನ್ನು ತುಂಬಿ ಈ ಮೂಲಕ ರಾಜ್ಯದ ಅಭಿವೃದ್ಧಿ ಸಾಧ್ಯ ಎಂಬುದನ್ನು ಸಾಧಿಸಿ ತೋರಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.