ಜಾತಿ-ಜನಗಣತಿಯಲ್ಲಿ ವೀರಶೈವ ಲಿಂಗಾಯತ ಸಮಾಜವನ್ನು ಒಗ್ಗೂಡಿಸುವ, ಸಂಘಟಿಸುವ ರೀತಿ ಗುರು-ವಿರಕ್ತರು ಒಂದಾಗಿ ಇಡೀ ಸಮಾಜವನ್ನು ಮುನ್ನಡೆಸಬೇಕು ಎಂದು ವಿ.ಸೋಮಣ್ಣ ಮನವಿ ಮಾಡಿದರು.

ದಾವಣಗೆರೆ (ಜು.23): ಕೇಂದ್ರ ಗೃಹ ಇಲಾಖೆ ವ್ಯವಸ್ಥಿತವಾಗಿ 2026ರಲ್ಲಿ ದೇಶಾದ್ಯಂತ ಕೈಗೊಳ್ಳುವ ಜಾತಿ-ಜನಗಣತಿಯಲ್ಲಿ ವೀರಶೈವ ಲಿಂಗಾಯತ ಸಮಾಜವನ್ನು ಒಗ್ಗೂಡಿಸುವ, ಸಂಘಟಿಸುವ ರೀತಿ ಗುರು-ವಿರಕ್ತರು ಒಂದಾಗಿ ಇಡೀ ಸಮಾಜವನ್ನು ಮುನ್ನಡೆಸಬೇಕು ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಸಚಿವ, ಸಮಾಜದ ಹಿರಿಯ ನಾಯಕ ವಿ.ಸೋಮಣ್ಣ ಮನವಿ ಮಾಡಿದರು. ವೀರಶೈವ ಪೀಠಾಚಾರ್ಯರು ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನದ 2ನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅತ್ಯಂತ ವ್ಯವಸ್ಥಿತವಾಗಿಯೇ ಕೇಂದ್ರ ಗೃಹ ಇಲಾಖೆ ದೇಶದಲ್ಲಿ ಗಣತಿ ಕಾರ್ಯ ಕೈಗೊಳ್ಳಲಿದೆ.

ಗಣತಿದಾರರು ಮನೆ ಬಾಗಿಲಿಗೆ ಬಂದಾಗ ಒಳಪಂಗಡಗಳನ್ನು ಮರೆತು, ಗುರು-ವಿರಕ್ತರ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಏನು ಸೂಚನೆ ನೀಡುತ್ತದೋ ಅದನ್ನು ಸಮಾಜ ಬಾಂಧವರು ದಾಖಲಿಸಬೇಕು ಎಂದರು. ರಾಜ್ಯ ಸರ್ಕಾರ ಜಾತಿ ಗಣತಿಯಲ್ಲಿ ಯಾಕೆ ಎಡವಟ್ಟು ಮಾಡಿತೋ ಅದೂ ಗೊತ್ತಿಲ್ಲ. ರಾಜ್ಯ ಸರ್ಕಾರ ಎಡವಟ್ಟು ಮಾಡಿದ್ದರಿಂದಲೇ ಪಂಚಪೀಠಗಳು ಇಂದು ಒಂದಾಗಿವೆ. ಈ ಸಮಾಜ ಯಾರೇ ಬಂದರೂ ನಮ್ಮವರೆಂದು, ಅಪ್ಪುವ, ಒಪ್ಪುವ ಸಮಾಜವಾಗಿದೆ. ನಮ್ಮ ವೀರಶೈವ ಲಿಂಗಾಯತ ಧರ್ಮಕ್ಕೆ ಇದೊಂದು ಸುದಿನ. ಪಂಚಪೀಠಗಳು ಒಂದಾಗಿದ್ದಕ್ಕೆ ಗುರುಗಳಿಗೆ ದೀರ್ಘದಂಡ ನಮಸ್ಕಾರ ಮಾಡುತ್ತೇನೆ ಎಂದರು.

ಸಮಾಜಕ್ಕೆ ಶಕ್ತಿ ತುಂಬುವ ಮಹಾತ್ಕಾರ್ಯಕ್ಕೆ ಇದೇ ದಾವಣಗೆರೆಯಿಂದಲೇ ಗುರು-ವಿರಕ್ತರು ನಾಂದಿ ಹಾಡಲಿ ಎಂದು ಅರಿಕೆ ಮಾಡಿಕೊಂಡರು. ಪಂಚಪೀಠಗಳ ಗುರುಗಳ ಒಗ್ಗೂಡುವಿಕೆಯು ಈ ಸಮಾವೇಶಕ್ಕಷ್ಟೇ ನಿಲ್ಲಬಾರದು. ಗುರು-ವಿರಕ್ತರನ್ನು ಒಂದು ಮಾಡುವ ಕೆಲಸವಾಗಬೇಕು. ಸುಮಾರು 3 ಸಾವಿರ ಮಠಗಳು ರಾಜ್ಯವ್ಯಾಪಿ ತಮ್ಮ ಕರ್ತವ್ಯ ಮಾಡುತ್ತಾ, ವೀರಶೈವ ಲಿಂಗಾಯತರಿಗೆ ಭದ್ರ ಬುನಾದಿ ನೀಡುತ್ತಿವೆ. ವೀರಶೈವ ಲಿಂಗಾಯತ ಬೇರುಗಳನ್ನು ಮೊದಲು ಗಟ್ಟಿಗೊಳಿಸೋಣ. ನಮ್ಮಂತಹ ರಾಜಕಾರಣಿಗಳ ಕೈಯಲ್ಲಿ ಇಂತಹ ಕೆಲಸ ಆಗುವುದಿಲ್ಲ. ಹರ ಗುರು ಚರ ಮೂರ್ತಿಗಳು ಸಮಾಜವನ್ನು ಒಗ್ಗೂಡಿಸುವ, ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದರು.

ವೀರಶೈವ ಲಿಂಗಾಯತ ಧರ್ಮ, ಈ ಧರ್ಮೀಯರು ನಡೆದು ಬಂದ ಇತಿಹಾಸ ದೊಡ್ಡದಿದೆ. ಸಾವಿರಾರು ವರ್ಷಗಳ ಇತಿಹಾಸ, ಹಿನ್ನೆಲೆಯ ವಿಶಾಲ ಸಮಾಜ ನಮ್ಮದು. ಸಮಾಜವನ್ನು ಉಳಿಸುವ, ಸಂಘಟಿಸುವ ಹಾಗೂ ಮುಂದಿನ ಸಾವಿರಾರು ವರ್ಷ ಸದೃಢವಾಗಿ ಸಾಗುವಂತೆ ಗುರು-ವಿರಕ್ತರು ಒಂದಾಗಿ ಕೆಲಸ ಮಾಡಲಿ ಎಂದು ಅವರು ಮನವಿ ಮಾಡಿದರು. ಪಂಚಪೀಠಗಳು ಕೇವಲ ನಮ್ಮ ಸಮುದಾಯಕ್ಕೆ ಮಾತ್ರ ಸೀಮಿತವಾಗದೇ, ಎಲ್ಲ ಜಾತಿ, ಧರ್ಮೀಯರಿಗೆ, ಶಕ್ತಿ ಇಲ್ಲದ, ಧ್ವನಿ ಎಲ್ಲದ ಸಮುದಾಯಗಳಿಗೆ ಶಕ್ತಿ ತುಂಬುವ ಕೆಲಸ ಮಾಡಿಕೊಂಡೇ ಬಂದಿವೆ. ದೆಹಲಿಯಲ್ಲಿ ಲೋಕಸಭೆ ಅಧಿವೇಶನ ನಡೆಯುತ್ತಿದೆ. ದೇಶಕ್ಕೆ ಅಡಿಪಾಯ ಹಾಕಿ, ಸಂಸ್ಕೃತಿ, ಸಂಸ್ಕಾರ, ಧರ್ಮಪ್ರಚಾರ ಮಾಡುತ್ತಿರುವ ಪಂಚ ಪೀಠಾಧೀಶರ ಕಾರ್ಯಕ್ರಮಕ್ಕೆ ನೀವು ಹೋಗಿ, ಬನ್ನಿ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ನನಗೆ ಕಳಿಸಿದ್ದಾರೆ ಎಂದು ಹೇಳಿದರು.