ಬೆಂಗಳೂರು(ಜೂ.01): ನಿತ್ಯದ ಸೋಂಕಿನ ಪ್ರಮಾಣ ಐದು ಸಾವಿರದೊಳಗೆ ಬರಬೇಕು. ಪಾಸಿಟಿವಿಟಿ ದರ ಶೇ.5 ಮತ್ತು ಸಾವಿನ ದರ ಶೇ.1ರ ಮಿತಿಯೊಳಗೆ ಬರಬೇಕು. ಇಷ್ಟಾಗುವವರೆಗೂ ರಾಜ್ಯದಲ್ಲಿ ಲಾಕ್‌ಡೌನ್‌ ಮುಂದುವರೆಯಬೇಕು. ಈ ಗುರಿ ಸಾಧನೆ ಜೂ.7ರೊಳಗೆ ಅಸಂಭವವಾದ ಕಾರಣ ಕನಿಷ್ಠ ಒಂದು ವಾರ ಲೌಕ್‌ಡೌನ್‌ ವಿಸ್ತರಿಸಿ.

ಹೀಗೆಂದು ಕೊರೋನಾ ತಾಂತ್ರಿಕ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಕೊರೋನಾ ಕುರಿತು ಸಲಹೆ ನೀಡಲು ಸರ್ಕಾರ ರಚಿಸಿರುವ ತಾಂತ್ರಿಕ ಸಲಹಾ ಸಮಿತಿಯು ಭಾನುವಾರ ಸಮಿತಿ ಅಧ್ಯಕ್ಷ ಡಾ.ಎಂ.ಕೆ. ಸುದರ್ಶನ್‌ ನೇತೃತ್ವದಲ್ಲಿ ಐದೂವರೆ ಗಂಟೆಗಳ ಕಾಲ ಸುದೀರ್ಘ ಸಭೆ ನಡೆಸಿ, ಬಳಿಕ ಈ ಮಹತ್ವದ ಶಿಫಾರಸು ಒಳಗೊಂಡ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.

ಈ ವರದಿಯಲ್ಲಿ ಲಾಕ್‌ಡೌನ್‌ ಹಿಂಪಡೆಯಲು ಕರೋನಾ ಪ್ರಕರಣಗಳಿಗೆ ಸಂಬಂಧಿಸಿದ ನಿರ್ದಿಷ್ಟಸಂಖ್ಯೆ ಗುರಿ ನೀಡಲಾಗಿದೆ. ಈ ಗುರಿ ಸಾಧನೆಗೆ ಮುನ್ನ ಲಾಕ್‌ಡೌನ್‌ ಹಿಂಪಡೆದರೆ ಇದುವರೆಗೂ ಲಾಕ್‌ಡೌನ್‌ ಮಾಡಿರುವುದರ ಯಾವುದೇ ಪ್ರಯೋಜನ ಲಭಿಸುವುದಿಲ್ಲ ಎಂದು ಎಚ್ಚರಿಸಿದೆ.

ತಾಂತ್ರಿಕ ಸಮಿತಿಯು ವರದಿಯನ್ನು ಸೋಮವಾರ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರಿಗೆ ಹಸ್ತಾಂತರಿಸಿದ್ದು, ವರದಿ ಸಂಬಂಧ ಈಗಾಗಲೇ ಸಚಿವರು ಹಲವು ಸ್ಪಷ್ಟನೆಗಳನ್ನು ಪಡೆದಿದ್ದಾರೆ. ಅಂತಿಮವಾಗಿ ವರದಿಯಲ್ಲಿನ ಅಂಶಗಳ ಬಗ್ಗೆ ಜೂ.4 ಅಥವಾ 5ರಂದು ಸರ್ಕಾರದ ಹಂತದಲ್ಲಿ ಸಭೆ ನಡೆಯಲಿದ್ದು, ಈ ವೇಳೆ ಜೂ.7ರ ಬಳಿಕವೂ ಲಾಕ್‌ಡೌನ್‌ ಮುಂದುವರೆಸುವ ಬಗ್ಗೆ ಅಂತಿಮ ನಿರ್ಧಾರ ಮಾಡಲಿದ್ದಾರೆ.

ಪ್ರಸ್ತುತ ಪರಿಸ್ಥಿತಿ ಹೇಗಿದೆ?:

ಪ್ರಸ್ತುತ ರಾಜ್ಯದಲ್ಲಿನ ಪಾಸಿಟಿವಿಟಿ ದರ ಸರಾಸರಿ ಶೇ.15 ಹಾಗೂ ನಿತ್ಯದ ಪ್ರಕರಣ 15 ಸಾವಿರಕ್ಕೂ ಹೆಚ್ಚಿವೆ. ಸಾವಿನ ದರ ಶೇ.2.50ರ ಆಸುಪಾಸಿನಲ್ಲಿದೆ. ಈ ಸ್ಥಿತಿಯಿಂದ ಜೂ.7ರ ವೇಳೆಗೆ 5 ಸಾವಿರಕ್ಕಿಂತ ಕಡಿಮೆ ಪ್ರಕರಣ ಹಾಗೂ ಸಾವಿನ ದರ ಶೇ.1ಕ್ಕಿಂತ ಕಡಿಮೆಯಾಗುವ ಹಂತ ತಲುಪಲು ಸಾಧ್ಯವಿಲ್ಲ. ಹೀಗಾಗಿ ಜೂ.7 ರಂದು ಪ್ರಗತಿ ಪರಿಶೀಲನೆ ನಡೆಸಿ ಜೂ.13ರವರೆಗೆ ಲಾಕ್ಡೌನ್‌ ಮುಂದುವರೆಸಬೇಕಾಗುತ್ತದೆ ಎಂದು ಸಮಿತಿಯ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.

ಪ್ರತಿ ವಾರ ಕೊರೋನಾ ಪ್ರಕರಣ, ಸಾವಿನ ದರ ಹಾಗೂ ಪಾಸಿಟಿವಿಟಿ ದರದ ಪ್ರಗತಿ ಪರಿಶೀಲನೆ ನಡೆಸಬೇಕು. ಇದರ ಆಧಾರದ ಮೇಲೆ ಲಾಕ್ಡೌನ್‌ ಬಗ್ಗೆ ಮುಂದಿನ ನಿರ್ಧಾರ ತೆಗೆದುಕೊಳ್ಳಬಹುದು ಎಂದೂ ಸಹ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಲಾಕ್ಡೌನ್‌ ಲಾಭ ಪಡೆಯಲು ವಿಸ್ತರಣೆ ಅನಿವಾರ್ಯ| ವರದಿ ಬಗ್ಗೆ ಡಾ.ಎಂ.ಕೆ. ಸುದರ್ಶನ್‌ ಅಭಿಪ್ರಾಯ

ಈ ಬಗ್ಗೆ ಕನ್ನಡಪ್ರಭ ಜತೆ ಮಾತನಾಡಿದ ಸಮಿತಿ ಅಧ್ಯಕ್ಷ ಡಾ.ಎಂ.ಕೆ. ಸುದರ್ಶನ್‌, ಸಮಿತಿಯಲ್ಲಿನ ಸಾರ್ವಜನಿಕ ಆರೋಗ್ಯ, ವೈರಾಣು ತಜ್ಞರು ಸೇರಿದಂತೆ ಎಲ್ಲಾ ತಜ್ಞರು ಸೂಕ್ತ ಅಜೆಂಡಾದೊಂದಿಗೆ ಸುದೀರ್ಘ ಸಭೆ ನಡೆಸಿ ಸರ್ಕಾರಕ್ಕೆ ಶಿಫಾರಸು ಸಲ್ಲಿಸಿದ್ದೇವೆ. ಈವರೆಗೆ ಮಾಡಿರುವ ಲಾಕ್ಡೌನ್‌ನ ಸಮಗ್ರ ಉಪಯೋಗವು ಲಭ್ಯವಾಗಬೇಕಾದರೆ ನಿತ್ಯದ ಪ್ರಕರಣ 5 ಸಾವಿರಕ್ಕಿಂತ ಕಡಿಮೆ, ಪಾಸಿಟಿವಿಟಿ ದರ ಶೇ.5 ಹಾಗೂ ಸಾವಿನ ದರ ಶೇ.1ಕ್ಕಿಂತ ಕಡಿಮೆಯಾಗುವವರೆಗೂ ಲಾಕ್ಡೌನ್‌ ಮುಂದುವರೆಸಬೇಕು ಎಂದು ತಿಳಿಸಿದ್ದೇವೆ. ಸರ್ಕಾರವು ಲಾಕ್ಡೌನ್‌ ಬಗ್ಗೆ ನಿರ್ಧರಿಸಲು ನಮ್ಮ ವರದಿ ಒಂದು ಮಾನದಂಡ. ಆದರೆ, ಸರ್ಕಾರವು ಹಲವು ವಿಷಯಗಳನ್ನು ಪರಿಶೀಲಿಸಿ ತನ್ನ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದರು.

ಸೋಂಕು ಹೆಚ್ಚಿರುವ ಕಡೆ ಕಠಿಣ ಕ್ರಮ

ವೈದ್ಯ ತಜ್ಞರಾಗಿ ನಮ್ಮ ಮೊದಲ ಆದ್ಯತೆ ಆರೋಗ್ಯ ಹಾಗೂ ಜೀವ, ಬಳಿಕ ಜೀವನೋಪಾಯ. ಹೀಗಾಗಿ ರಾಜ್ಯ ಹಾಗೂ ಜಿಲ್ಲಾವಾರು ಪ್ರಗತಿ ಪರಿಶೀಲನೆ ನಡೆಸಬೇಕು. ಸೋಂಕು ಪ್ರಕರಣ, ಸಾವು ಹಾಗೂ ಪಾಸಿಟಿವಿಟಿದ ದರ ಹೆಚ್ಚಿರುವ ಹಾಸನ, ಮೈಸೂರು, ಚಿತ್ರದುರ್ಗ, ತುಮಕೂರು, ಉತ್ತರ ಕನ್ನಡ, ಉಡುಪಿಯಂತಹ ಜಿಲ್ಲೆಗಳಲ್ಲಿ ಇನ್ನೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಿಫಾರಸು ಮಾಡಿದ್ದೇವೆ ಎಂದು ಡಾ.ಎಂ.ಕೆ. ಸುದರ್ಶನ್‌ ತಿಳಿಸಿದ್ದಾರೆ.

ತಜ್ಞರ ಸಮಿತಿ ವರದಿಯಲ್ಲೇನಿದೆ?

ನಿತ್ಯದ ಸೋಂಕಿನ ಪ್ರಮಾಣ 5000ದೊಳಗೆ ಬರಬೇಕು

ಪಾಸಿಟಿವಿಟಿ ಶೇ.5, ಸಾವಿನ ದರ ಶೇ.1ಕ್ಕೆ ಇಳಿಯಬೇಕು

ಈಗಿನ ಪರಿಸ್ಥಿತಿಯಲ್ಲಿ ಗುರಿ ಈಡೇರುವುದು ಸಾಧ್ಯವಿಲ್ಲ

ಹೀಗಾಗಿ ಇನ್ನೂ ಒಂದು ವಾರ ಲಾಕ್‌ಡೌನ್‌ ವಿಸ್ತರಿಸಿ

ಸೋಂಕು ಹೆಚ್ಚಿರುವ ಕಡೆ ಇನ್ನಷ್ಟುಕಠಿಣ ಕ್ರಮ ಜಾರಿ

ಈಗಿನ ಪರಿಸ್ಥಿತಿ ಹೇಗಿದೆ?

ಪಾಸಿಟಿವಿಟಿ ದರ ಸರಾಸರಿ ಶೇ.15, ನಿತ್ಯದ ಪ್ರಕರಣ 15000ಕ್ಕೂ ಹೆಚ್ಚು, ಸಾವಿನ ದರ ಶೇ.2.50

ಸಮಿತಿ ಶಿಫಾರಸು ಹೇಳಿದ್ದೇನು?

ಪಾಸಿಟಿವಿಟಿ ಶೇ.5ಕ್ಕಿಂತ ಕಡಿಮೆ, ನಿತ್ಯದ ಕೇಸ್‌ 5000ಕ್ಕಿಂತ ಕಡಿಮೆ, ಸಾವಿನ ದರ ಶೇ.1ಕ್ಕಿಂತ ಕಡಿಮೆ