ರಾಜ್ಯ ಸರ್ಕಾರದಿಂದ ರೈತರಿಗೆ 16,000 ಕೋಟಿ ರೂ. ಬಡ್ಡಿರಹಿತ ಸಾಲ ನೀಡಿದೆ: ಕೃಷಿ ಸಚಿವ ಚಲುವರಾಯಸ್ವಾಮಿ
ರಾಜ್ಯದಲ್ಲಿ ಈ ವರ್ಷ 20 ಲಕ್ಷ ರೈತರಿಗೆ 16,000ಕೋಟಿ ರೂಗಳನ್ನು ಬಡ್ಡಿ ರಹಿತ (ಶೂನ್ಯ ಬಡ್ಡಿ)ಸಾಲ ನೀಡಲಾಗಿದೆ. ಅದರ ಬಡ್ಡಿಯನ್ನು ಸರ್ಕಾರ ಡಿ.ಸಿ.ಸಿ ಬ್ಯಾಂಕಿಗೆ ಪಾವತಿಸುತ್ತದೆ.
ಮಂಡ್ಯ (ಜ.30): ರಾಜ್ಯದಲ್ಲಿ ಈ ವರ್ಷ 20 ಲಕ್ಷ ರೈತರಿಗೆ 16,000ಕೋಟಿ ರೂಗಳನ್ನು ಬಡ್ಡಿ ರಹಿತ (ಶೂನ್ಯ ಬಡ್ಡಿ)ಸಾಲ ನೀಡಲಾಗಿದೆ. ಅದರ ಬಡ್ಡಿಯನ್ನು ಸರ್ಕಾರ ಡಿ.ಸಿ.ಸಿ ಬ್ಯಾಂಕಿಗೆ ಪಾವತಿಸುತ್ತದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ.
ಮೈಷುಗರ್ ಫ್ಯಾಕ್ಟರಿ ಮೈದಾನದಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾರಂಭ ಮತ್ತು ಡಿ.ಸಿ.ಸಿ. ಬ್ಯಾಂಕ್ ನ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ ವಿತರಣೆ ಹಾಗೂ ಮಾಹಿತಿ ನೀಡುವ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಡಿ.ಸಿ.ಸಿ. ಬ್ಯಾಂಕ್ ವತಿಯಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ 112 ಕೋಟಿ ರೂಗಳನ್ನ 5 ಲಕ್ಷದೊಳಗಿನ ಸಾಲವನ್ನು ಬಡ್ಡಿ ರಹಿತವಾಗಿ ನೀಡಲಾಗುತ್ತಿದೆ. 5 ಲಕ್ಷಕ್ಕಿಂತ ಹೆಚ್ಚಿನ ಸಾಲಕ್ಕೆ ಮಾತ್ರ ಬಡ್ಡಿಯನ್ನು ವಿಧಿಸಲಾಗುತ್ತಿದೆ. ಮಹಿಳೆಯರ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿದ ಶಕ್ತಿ ಯೋಜನೆಯ ಸೌಲಭ್ಯವನ್ನು ಇದುವರೆಗೆ 3.58 ಕೋಟಿ ಜಿಲ್ಲೆಯ ಮಹಿಳೆಯರು ಸದುಪಯೋಗವನ್ನು ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕದಿದ್ದರೆ ಗ್ಯಾರಂಟಿ ಯೋಜನೆ ರದ್ದಾಗುತ್ತವೆ; ಶಾಸಕ ಬಾಲಕೃಷ್ಣ ಎಚ್ಚರಿಕೆ
ರಾಜ್ಯದ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಜಿಲ್ಲೆಯಲ್ಲಿ 4,36,510 ಜನರು ಫಲಾನುಭವಿಯಾಗಿದ್ದಾರೆ. ಈ ಯೋಜನೆಗೆ ರಾಜ್ಯ ಸರ್ಕಾರ 137 ಕೋಟಿ ರೂ ವೆಚ್ಚವನ್ನು ಭರಿಸಿದೆ. ಗೃಹಲಕ್ಷ್ಮಿ ಯೋಜನೆಯಡಿ ತಲಾ 2000 ರೂ ಗಳಂತೆ 4,35,820 ಮಹಿಳೆಯರಿಗೆ ನೀಡಿ 89.17 ಕೋಟಿ ರೂ ವೆಚ್ಚವನ್ನು ಭರಿಸಿದೆ. ಗೃಹ ಜ್ಯೋತಿ ಯೋಜನೆಯಲ್ಲಿ ಜಿಲ್ಲೆಯಲ್ಲಿರುವ 4 ಲಕ್ಷದ 64 ಸಾವಿರ ಕುಟುಂಬಗಳು ಫಲಾನುಭವಿಯಾಗಿದ್ದು, 76 ಸಾವಿರ ಕೋಟಿ ರೂಗಳನ್ನು ಸರ್ಕಾರ ಪಾವತಿಸಿದೆ. ಜಿಲ್ಲೆಯಲ್ಲಿ 2,600 ಯುವಕರು ಯುವನಿಧಿ ಯೋಜನೆಯಲ್ಲಿ ನೋಂದಣಿಯಾಗಿದ್ದು, ಪದವೀಧರರಿಗೆ 3,000 ಹಾಗೂ ಡಿಪ್ಲೋಮೋ ಮುಗಿಸಿದವರಿಗೆ 1500 ರೂ. ನಿರುದ್ಯೋಗ ಭತ್ಯೆಯನ್ನು ಗರಿಷ್ಠ 2 ವರ್ಷಗಳವರೆಗೆ ನೀಡಲಾಗುವುದು ಎಂದರು.
ಇದಲ್ಲದೆ ವೃದ್ಧಾಪ್ಯ ವೇತನ, ವಿಧವಾ ವೇತನ ಹಾಗೂ ಇನ್ನಿತರ ಸೌಲಭ್ಯವನ್ನು ನೀಡಲಾಗುತ್ತಿದೆ. ಮುಂದಿನ 2 ಅಥವಾ 3 ವರ್ಷದೊಳಗೆ ಜಿಲ್ಲೆಯ ಎಲ್ಲಾ ರಸ್ತೆಗಳನ್ನು ಆಧುನೀಕರಣಗೊಳಿಸಲಾಗುವುದು. ಜಿಲ್ಲೆಯಲ್ಲಿ ಇನ್ನು ಮುಂದೆ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯಲಿದೆ. ಸರ್ಕಾರದಿಂದ ಬೆಳೆ ಪರಿಹಾರವಾಗಿ ಪ್ರತಿ ಹೆಕ್ಟೇರ್ ಗೆ 2 ಸಾವಿರದಂತೆ ಒಟ್ಟು 50 ಲಕ್ಷ ಹೆಕ್ಟರಿಗೆ ನೇರವಾಗಿ ಫಲಾನುಭವಿಯ ಖಾತೆಗೆ ಹಣ ತಲುಪಿದೆ ಎಂದು ಮಾಹಿತಿ ನೀಡಿದರು.
ಶಾಸಕ ರಾಮೇಶ ಬಂಡಿಸಿದ್ದೇಗೌಡ ಅವರು ಮಾತನಾಡಿ ಸರ್ಕಾರ ಮೈ ಶುಗರ್ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನ ಮಾಡಿದೆ. ಮುಂದಿನ ದಿನಗಳಲ್ಲಿ ಹೊಸ ಸಕ್ಕರೆ ಕಾರ್ಖಾನೆಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ರೈತರ ಬದುಕು ಸುಧಾರಿಸಲು ವಿ.ಸಿ.ನಾಲೆ ಹಾಗೂ ಅಣೆಕಟ್ಟು ನಾಲೆಗಳನ್ನು ಆಧುನೀಕರಣ ಗೊಳಿಸಿ ಕಟ್ಟಕಡೆಯ ಭಾಗಕ್ಕೆ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಸರ್ಕಾರ ಸದಾ ರೈತರ ಅಭಿವೃದ್ಧಿಯ ಬಗ್ಗೆ ಚಿಂತಿಸುತ್ತದೆ ಎಂದರು.
ಮಂಡ್ಯದ ಹನುಮಧ್ವಜ ವಿವಾದಿತ ಕೆರಗೋಡು ಗ್ರಾಮಕ್ಕೆ ನಾನು ಬೇಕಂತಲೇ ಹೋಗಿಲ್ಲ; ಸಂಸದೆ ಸುಮಲತಾ
ಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳಿಂದ ಸ್ಥಳೀಯವಾಗಿ ಜನರ ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತಿದೆ. ಡಿ.ಸಿ.ಸಿ ಬ್ಯಾಂಕ್ ಮೂಲಕ ಶೂನ್ಯ ಬಡ್ಡಿ ದರದಲ್ಲಿ 16 ಸಾವಿರ ಕೋಟಿ ಸಾಲ ನೀಡಲಾಗಿದೆ. ಇದರ ಬಡ್ಡಿಯನ್ನು ಸರ್ಕಾರ ಬರಿಸುತ್ತಿದೆ. ಪರಿಸರದಲ್ಲಿ ಆಗುತ್ತಿರುವ ವೈಪರೀತ್ಯದಿಂದ ಕೃಷಿ ಪದ್ಧತಿಯಲ್ಲಿ ಹೊಸ ಬದಲಾವಣೆ ಮಾಡಿಕೊಳ್ಳಬೇಕಿದೆ. ಈ ಬಗ್ಗೆ ರೈತರಿಗೆ ಹೆಚ್ಚಿನ ಮಾಹಿತಿಯನ್ನು ಇಲಾಖೆಗಳು ನೀಡಬೇಕು.
- ದರ್ಶನ ಪುಟ್ಟಣ್ಣಯ್ಯ, ಶಾಸಕ