Asianet Suvarna News Asianet Suvarna News

ತುರ್ತು ನೆರೆ ಕಾಮಗಾರಿಗೆ 660 ಕೋಟಿ ರೂ. ಬಿಡುಗಡೆ!

* ಅತಿವೃಷ್ಟಿಪೀಡಿತ ಪ್ರದೇಶಗಳಲ್ಲಿ ಹಾನಿ ಸಮೀಕ್ಷೆಗೆ ತಂಡ ಕಳುಹಿಸಲು ಅಮಿತ್‌ ಶಾಗೆ ಪತ್ರ ಬರೆದಿದ್ದಾನೆ: ಬೊಮ್ಮಾಯಿ

* ಮಳೆಯಿಂದ ಮನೆ ಕಳೆದುಕೊಂಡವರಿಗೆ ಬಿಎಸ್‌ವೈ ಸರ್ಕಾರದ ಮಾದರಿಯಲ್ಲಿ 5 ಲಕ್ಷ ರು. ಪರಿಹಾರ ವಿತರಣೆ: ಸಿಎಂ

Karnataka govt releases Rs 660 crore for flood relief restoration works pod
Author
Bangalore, First Published Aug 2, 2021, 7:22 AM IST

ಬೆಂಗಳೂರು(ಆ.02): ರಾಜ್ಯದಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲು ತಂಡ ಕಳುಹಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಪತ್ರ ಬರೆಯಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಅಲ್ಲದೆ, ತುರ್ತು ಕಾಮಗಾರಿಗಳಿಗೆ 660 ಕೋಟಿ ರು. ಬಿಡುಗಡೆ ಮಾಡಲಾಗುವುದು ಎಂದೂ ಅವರು ತಿಳಿಸಿದ್ದಾರೆ.

ಭಾನುವಾರ ಪ್ರವಾಹ ಪರಿಸ್ಥಿತಿ ಕುರಿತು ಗೃಹ ಕಚೇರಿ ಕೃಷ್ಣಾದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಸರ್ಕಾರದ ಮಾದರಿಯಲ್ಲೇ ಮನೆ ಕಳೆದುಕೊಂಡವರಿಗೆ 5 ಲಕ್ಷ ರು. ಪರಿಹಾರ ನೀಡಲಾಗುವುದು. ಭಾಗಶಃ ಹಾನಿಯಾಗಿದ್ದರೆ 3 ಲಕ್ಷ ರು. ಹಾಗೂ ಅಲ್ಪ ಹಾನಿಯಾಗಿದ್ದರೆ 50 ಸಾವಿರ ರು. ಪರಿಹಾರ ನೀಡಲಾಗುವುದು ಎಂದರು.

ಸಂಪರ್ಕ ರಸ್ತೆ, ಸೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ 510 ಕೋಟಿ ಹಾಗೂ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ 150 ಕೋಟಿ ರು. ತಕ್ಷಣ ಬಿಡುಗಡೆ ಮಾಡಲಾಗುವುದು. ಜಿಲ್ಲಾಧಿಕಾರಿಗಳ ಬಳಿ ಈಗಾಗಲೇ 700 ಕೋಟಿಗೂ ಅಧಿಕ ಹಣವಿದೆ. ಪ್ರವಾಹದಿಂದ 13 ಜಿಲ್ಲೆಯ 466 ಗ್ರಾಮಗಳಿಗೆ ತೊಂದರೆಯಾಗಿದೆ. 13 ಮಂದಿ ಸಾವಿಗೀಡಾಗಿದ್ದು ಓರ್ವ ನಾಪತ್ತೆಯಾಗಿದ್ದಾನೆ ಎಂದು ಮಾಹಿತಿ ನೀಡಿದರು.

ಮಳೆ, ಬೆಳೆ ಹಾನಿ ಬಗ್ಗೆ 15 ದಿನದೊಳಗೆ ಸಮೀಕ್ಷೆ

ಮನೆ ಮತ್ತು ಬೆಳೆ ಹಾನಿಗೆ ಸಂಬಂಧಿಸಿದಂತೆ 15 ದಿನದೊಳಗೆ ಸಮೀಕ್ಷೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಂತ್ರಸ್ತರಿಗಾಗಿ ಆಸರೆ ಕೇಂದ್ರಗಳನ್ನು ಸಹ ಆರಂಭಿಸಲಾಗಿದೆ. ಪ್ರವಾಹ ಸ್ಥಿತಿ ಕಡಿಮೆಯಾಗಿದ್ದರೂ ಕೆಲ ಜಿಲ್ಲೆಗಳ ತಗ್ಗು ಪ್ರದೇಶಗಳಲ್ಲಿ ಇನ್ನೂ ನೀರಿದೆ ಎಂದು ಬೊಮ್ಮಾಯಿ ಹೇಳಿದರು.

ಸಿದ್ದರಾಮಯ್ಯಗೆ ಸಿಎಂ ತಿರುಗೇಟು

‘2019ರ ನೆರೆ ಪರಿಹಾರವನ್ನೇ ಇನ್ನೂ ನೀಡಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರಲ್ಲಾ ಎಂದು ಸುದ್ದಿಗಾರರು ಪ್ರಶ್ನಿಸಿದಾಗ ಉತ್ತರ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಪ್ರವಾಹ ಬಂದ ತಕ್ಷಣ ಸರ್ಕಾರ ಸ್ಪಂದಿಸಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಎಷ್ಟುವಿಳಂಬವಾಗಿ ಸ್ಪಂದಿಸಿದ್ದಾರೆ ಎಂಬುದರ ವಿವರ ನೀಡಬಲ್ಲೆ. ಅರ್ಥ ಮಾಡಿಕೊಂಡರೆ ಒಳ್ಳೆಯದು’ ಎಂದು ತಿರುಗೇಟು ನೀಡಿದರು.

Follow Us:
Download App:
  • android
  • ios