ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಯಲ್ಲಿ ಆಡಳಿತಾತ್ಮಕ ಸುಧಾರಣೆಗಾಗಿ 129 ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಮತ್ತು 23 ಡಿವೈಎಸ್ಪಿ ದರ್ಜೆಯ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ರಾಜ್ಯದಾದ್ಯಂತ ಈ 'ಮೇಜರ್ ಸರ್ಜರಿ' ನಡೆದರೂ, ಬೆಂಗಳೂರು ನಗರದ ಆಂತರಿಕ ವರ್ಗಾವಣೆ ಪಟ್ಟಿ ಬಿಡುಗಡೆಯಾಗಿಲ್ಲ.

ಬೆಂಗಳೂರು (ಫೆ.11): ರಾಜ್ಯ ಪೊಲೀಸ್ ಇಲಾಖೆಯಲ್ಲಿ ಆಡಳಿತಾತ್ಮಕ ಸುಧಾರಣೆ ಹಾಗೂ ಕಾನೂನು ಸುವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಸರ್ಕಾರ ಭಾರಿ ಮಟ್ಟದ ಬದಲಾವಣೆ ಮಾಡಿದೆ. ಬುಧವಾರದಂದು ಏಕಕಾಲಕ್ಕೆ 129 ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಹಾಗೂ 23 ಡಿವೈಎಸ್ಪಿ (DySP) ದರ್ಜೆಯ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಫೆಬ್ರವರಿ 11ರಂದು ಹೊರಬಿದ್ದಿರುವ ಈ ಆದೇಶವು ಇಲಾಖೆಯಲ್ಲಿ ದೊಡ್ಡ ಮಟ್ಟದ 'ಮೇಜರ್ ಸರ್ಜರಿ' ಎಂದೇ ಬಣ್ಣಿಸಲಾಗುತ್ತಿದೆ. ಆದರೆ, ಈ ಪಟ್ಟಿಯಲ್ಲಿ ಬೆಂಗಳೂರು ನಗರದ ಆಂತರಿಕ ವರ್ಗಾವಣೆಗಳು ಕಾಣಿಸದಿರುವುದು ಹಲವು ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ.

129 ಇನ್ಸ್‌ಪೆಕ್ಟರ್‌ಗಳ ಅದಲು-ಬದಲು:

ಪೊಲೀಸ್ ಸಿಬ್ಬಂದಿ ಮಂಡಳಿಯ ನಿರ್ಧಾರದಂತೆ, ಒಟ್ಟು 129 ನಾಗರಿಕ ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ತಕ್ಷಣವೇ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ. ಪೊಲೀಸ್ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರ (DG & IGP) ಪರವಾಗಿ ಎಡಿಜಿಪಿ (ಆಡಳಿತ) ಸೌಮೇಂದು ಮುಖರ್ಜಿ ಈ ಆದೇಶ ಹೊರಡಿಸಿದ್ದಾರೆ. ಈ ಪಟ್ಟಿಯಲ್ಲಿ ಮಂಗಳೂರು, ಶಿವಮೊಗ್ಗ, ಬೆಳಗಾವಿ, ಕಲಬುರಗಿ ಹಾಗೂ ರಾಮನಗರ ಜಿಲ್ಲೆಯ ಮಾಗಡಿ, ಬಿಡದಿ ಮತ್ತು ತಾವರೆಕೆರೆ ಪೊಲೀಸ್ ಠಾಣೆಗಳ ಅಧಿಕಾರಿಗಳು ಸೇರಿದ್ದಾರೆ. ಬೆಂಗಳೂರಿನ ಸಿಸಿಬಿ ಘಟಕದ ಅಧಿಕಾರಿಗಳನ್ನೂ ವರ್ಗಾವಣೆ ಮಾಡಲಾಗಿದೆ.

23 ಡಿವೈಎಸ್ಪಿಗಳಿಗೂ ಸ್ಥಾನಪಲ್ಲಟ:

ಇನ್ಸ್‌ಪೆಕ್ಟರ್‌ಗಳ ಜೊತೆಗೆ 23 ಡಿವೈಎಸ್ಪಿ (ನಾಗರಿಕ) ಅಧಿಕಾರಿಗಳನ್ನೂ ಸ್ಥಳಾಂತರಿಸಲಾಗಿದೆ. ಲೋಕಾಯುಕ್ತ, ರಾಜ್ಯ ಗುಪ್ತವಾರ್ತೆ (Intelligence), ಆಂತರಿಕ ಭದ್ರತಾ ವಿಭಾಗ (ISD) ಹಾಗೂ ವಿವಿಧ ಉಪ ವಿಭಾಗಗಳ ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಲಾಗಿದೆ. ಮೈಸೂರು, ಕಲಬುರಗಿ, ಉಡುಪಿ ಹಾಗೂ ಮಂಡ್ಯ ಜಿಲ್ಲೆಗಳ ವಿವಿಧ ಉಪ ವಿಭಾಗಗಳಿಗೆ ಹೊಸ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಬೆಂಗಳೂರು ಸಿಟಿ ಇನ್ಸ್‌ಪೆಕ್ಟರ್‌ಗಳಿಗೆ ತಪ್ಪಿದ 'ಭಾಗ್ಯ':

ರಾಜ್ಯದಾದ್ಯಂತ ಇಷ್ಟು ದೊಡ್ಡ ಮಟ್ಟದ ವರ್ಗಾವಣೆ ಪ್ರಕ್ರಿಯೆ ನಡೆದಿದ್ದರೂ, ಬೆಂಗಳೂರು ನಗರ ಪೊಲೀಸ್ ಠಾಣೆಗಳ ಆಂತರಿಕ ವರ್ಗಾವಣೆ ಪಟ್ಟಿಯನ್ನು ಮಾತ್ರ ಸರ್ಕಾರ ಇನ್ನು ಬಿಡುಗಡೆ ಮಾಡಿಲ್ಲ. ಕಳೆದ 6 ತಿಂಗಳಿಂದ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಕೆಲಸ ಮಾಡುತ್ತಿರುವ ಇನ್ಸ್‌ಪೆಕ್ಟರ್‌ಗಳು ವರ್ಗಾವಣೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಸದ್ಯದ ಪಟ್ಟಿಯಲ್ಲಿ ಕೇವಲ ಬೆಂಗಳೂರು ನಗರದಿಂದ ಹೊರ ಜಿಲ್ಲೆಗಳಿಗೆ ಹೋಗುವ ಇನ್ಸ್‌ಪೆಕ್ಟರ್‌ಗಳಿಗೆ ಮಾತ್ರ 'ವರ್ಗಾವಣೆ ಭಾಗ್ಯ' ಸಿಕ್ಕಿದೆ. ಆದರೆ ನಗರದೊಳಗಿನ ಠಾಣೆಗಳಿಗೆ ನಿಯೋಜನೆಗೊಳ್ಳಬೇಕಿದ್ದ ಇನ್ಸ್‌ಪೆಕ್ಟರ್‌ಗಳ ಲಿಸ್ಟ್ ಮಾತ್ರ ಮರೀಚಿಕೆಯಾಗಿಯೇ ಉಳಿದಿದೆ. ಇದು ಸಿಟಿ ಪೊಲೀಸ್ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಅಸಮಾಧಾನಕ್ಕೂ ಕಾರಣವಾಗಿದೆ.

ತಕ್ಷಣವೇ ಜಾರಿಗೆ ಸೂಚನೆ:

ವರ್ಗಾವಣೆಗೊಂಡಿರುವ ಎಲ್ಲಾ 152 ಅಧಿಕಾರಿಗಳನ್ನು ತಕ್ಷಣವೇ ಅವರ ಹಾಲಿ ಕರ್ತವ್ಯದಿಂದ ಬಿಡುಗಡೆಗೊಳಿಸಿ, ನಿಯೋಜಿಸಲಾದ ಹೊಸ ಸ್ಥಳಗಳಲ್ಲಿ ಕೂಡಲೇ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಯಾವುದೇ ಸೇರುವಿಕೆ ಕಾಲಾವಕಾಶವನ್ನು (Joining Time) ನೀಡಲಾಗಿಲ್ಲ. ಒಂದು ವೇಳೆ ವಿಳಂಬ ಮಾಡಿದರೆ ಶಿಸ್ತು ಕ್ರಮದ ಎಚ್ಚರಿಕೆಯನ್ನೂ ನೀಡಲಾಗಿದೆ. ಒಟ್ಟಾರೆಯಾಗಿ, ರಾಜ್ಯ ಪೊಲೀಸ್ ಪಡೆಯಲ್ಲಿ ಹೊಸ ಚೈತನ್ಯ ತುಂಬಲು ಸರ್ಕಾರ ಮುಂದಾಗಿದ್ದರೂ, ಬೆಂಗಳೂರು ನಗರದ ವರ್ಗಾವಣೆ ಪಟ್ಟಿ ಯಾವಾಗ ಬಿಡುಗಡೆಯಾಗಲಿದೆ ಎಂಬುದು ಈಗ ಕಾದು ನೋಡಬೇಕಿದೆ.