ಹಂಬಲ್‌ ಪೊಲಿಟಿಷನ್‌ ನೋಗರಾಜ್‌ ಸಿನಿಮಾ ವೀಕ್ಷಿಸಿದವರಿಗೆ ನಟ ಡ್ಯಾನೀಷ್‌ ಸೇಟ್‌ ನೆನಪಾಗದೇ ಇರೋದಕ್ಕೆ ಸಾಧ್ಯವೇ ಇಲ್ಲ. ಆದರೆ, ಕಬ್ಬನ್‌ ಪಾರ್ಕ್ ಕುರಿತಾಗಿ ಇವರು ಕೊಟ್ಟ 'ಮನೆಹಾಳು' ಪ್ಲ್ಯಾನ್‌ಅನ್ನು ರಾಜ್ಯ ಸರ್ಕಾರವೀಗ ನಿಜ ಮಾಡಲು ಹೊರಟಿದೆ. 


ಬೆಂಗಳೂರು (ಫೆ.10): ಮೊಟ್ಟಮೊದಲಿಗೆ ಇದು ತಮಾಷೆಯ ವಿಚಾರವೇ ಅಲ್ಲ. ಆದರೆ, ರಾಜ್ಯ ಸರ್ಕಾರ ಹೋಗುತ್ತಿರುವ ದಾರಿ ನೋಡಿದರೆ, ಹಂಬಲ್‌ ಪೊಲಿಟಿಷನ್‌ ನೋಗರಾಜ್‌ ಸಿನಿಮಾದಲ್ಲಿ ಡ್ಯಾನೀಷ್‌ ಸೇಟ್‌ ಮಾಡಿದ ಪಾತ್ರವೇ ನೆನಪಾಗುತ್ತದೆ. ಇದೇ ಹೆಸರಿನ ವೆಬ್‌ ಸಿರೀಸ್‌ ಬಿಡುಗಡೆಯ ಸಂದರ್ಭದಲ್ಲಿ ನನ್ನಮ್ಮ ಸೂಪರ್‌ಸ್ಟಾರ್‌ ರಿಯಾಲಿಟಿ ಶೋನ ವೇದಿಕೆಗೆ ಬಂದಿದ್ದ ಹಂಬಲ್‌ ಪೊಲಿಟಿಷನ್‌ ನೋಗರಾಜ್‌ಗೆ ನಿಮಗೆ ನಾವು ಯಾಕೆ ವೋಟ್‌ ಮಾಡಬೇಕು ಎಂದು ಪ್ರಶ್ನೆ ಮಾಡುತ್ತಾರೆ. ಅಲ್ಲಿ, ನೋಗರಾಜ್‌, '10 ವರ್ಷ ಆದ್ಮೇಲೆ ನಿನಗೆ ಇರೋಕೆ ಮನೆ ಬೇಕಾ ?ಬೇಡ್ವಾ? ಕಬ್ಬನ್‌ ಪಾರ್ಕ್‌ನಲ್ಲಿ ಅಪಾರ್ಟ್‌ಮೆಂಟ್‌ ಕಟ್ಟಬೇಕಾ? ಬೇಡ್ವಾ? ನಾನು ಕಟ್ತೀನಿ. ಪಾರ್ಕ್‌ ಇರೋದೇ ಅಪಾರ್ಟ್‌ಮೆಂಟ್‌ ಮಾಡೋಕೆ, ಫ್ಲೈ ಓವರ್‌ ಮಾಡೋಕೆ, ಫ್ಲೈ ಓವರ್ ಮಾಡ್ಲೇಬೇಕು.. ನಾವು ನ್ಯೂಸ್‌ ಅಲ್ಲಿ ಇರೋಕೆ ಇಂಥಾ ಹೆಡ್‌ಲೈನ್‌ಗಳನ್ನ ಕೊಡೋದು' ಎಂದು ಹೇಳಿದ್ದರು. ನಟ ಡ್ಯಾನಿಷ್‌ ಸೇಟ್‌ ತಮಾಷೆಯಾಗಿ ಈ ಮಾತನ್ನು ಹೇಳಿದ್ದರಾದರೂ, ಈಗ ಸರ್ಕಾರ ಅದನ್ನು ನಿಜ ಮಾಡಲು ಹೊರಟಿದೆ. ನೋಗರಾಜ್‌ ಪ್ಲ್ಯಾನ್‌ ಕೊಟ್ಟ ರೀತಿಯಲ್ಲೇ ಕಬ್ಬನ್‌ ಪಾರ್ಕ್‌ನಲ್ಲಿ 10 ಅಂತಸ್ತಿನ ಬಿಲ್ಡಿಂಗ್‌ ಕಟ್ಟಲು ಸರ್ಕಾರ ನಿರ್ಧಾರ ಮಾಡಿದೆ. ಇದನ್ನು ಟೀಕಿಸಿರುವ ಬಿಜೆಪಿ ಇದು ಹಸಿರು ನರಮೇಧ ಎಂದು ಕರೆದಿದೆ.

ಜನಪ್ರಿಯ ಕಬ್ಬನ್ ಪಾರ್ಕ್‌ನಲ್ಲಿ 10 ಅಂತಸ್ತಿನ ಕಟ್ಟಡವನ್ನು ನಿರ್ಮಿಸುವ ಸರ್ಕಾರದ ಯೋಜನೆಯನ್ನು ಬೆಂಗಳೂರು ಸೆಂಟ್ರಲ್ ಸಂಸದ ಪಿಸಿ ಮೋಹನ್ ವಿರೋಧಿಸಿದ್ದು, ಇದು ಬೆಂಗಳೂರಿನ ಹಸಿರಿನ ಮೇಲೆ ಮಾಡುತ್ತಿರುವ ದಾಳಿ ಎಂದಿದ್ದಾರೆ. ಕರ್ನಾಟಕ ಸರ್ಕಾರವು ಹಳೆಯ ಚುನಾವಣಾ ಆಯೋಗದ ಕಚೇರಿಯ ಸ್ಥಳದಲ್ಲಿ 10 ಅಂತಸ್ತಿನ ಕಟ್ಟಡವನ್ನು ನಿರ್ಮಿಸಲು ಪ್ರಸ್ತಾಪಿಸಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಕಬ್ಬನ್ ಪಾರ್ಕ್‌ನ ಪ್ರೆಸ್ ಕ್ಲಬ್ ಪಕ್ಕದಲ್ಲಿರುವ ಹಳೆಯ ಚುನಾವಣಾ ಆಯೋಗದ ಕಚೇರಿಯನ್ನು ಕೆಡವಲು ಹಳೆಯ ಪ್ರಸ್ತಾವಿತ್ತು. ಈಗ ಹಳೆಯ ಪ್ರಸ್ತಾವನೆಯನ್ನು ಪುನರುಜ್ಜೀವನಗೊಳಿಸಿ ಅಲ್ಲಿ ಬೃಹತ್ ಕಟ್ಟಡವನ್ನು ನಿರ್ಮಿಸಲು ಸರ್ಕಾರ ಯೋಜಿಸುತ್ತಿದೆ ಎಂದು ವರದಿಯಾಗಿದೆ. ಪರಿಸರವಾದಿಗಳು ಮತ್ತು ಇತರ ಕಾರ್ಯಕರ್ತರು ಈ ಪ್ರಸ್ತಾಪವನ್ನು ವಿರೋಧಿಸಿದ್ದಾರೆ. ಹಾಗೇನಾದರೂ 10 ಅಂತಸ್ತಿನ ಕಟ್ಟಡ ಎದ್ದಲ್ಲಿ ಈಗಾಗಲೇ ಕಬ್ಬನ್‌ ಪಾರ್ಕ್‌ನಲ್ಲಿರುವ ವಾಹನ ದಟ್ಟಣೆಯನ್ನು ಇನ್ನಷ್ಟು ಹೆಚ್ಚಿಸಲಿದೆ ಹಾಗೂ ಮಾಲಿನ್ಯದ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದಿದ್ದಾರೆ.

ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ.ಮೋಹನ್ ಈ ಬಗ್ಗೆ ಮಾತನಾಡಿದ್ದು, ಇದು ಹಸಿರು ನರಮೇಧ. ಸರಕಾರ ಕೂಡಲೇ ಇಂತಹ ಯೋಜನೆಗಳನ್ನು ನಿಲ್ಲಿಸಬೇಕು. ಕಬ್ಬನ್ ಪಾರ್ಕ್‌ನಲ್ಲಿ 10 ಅಂತಸ್ತಿನ ಕಟ್ಟಡ ನಿರ್ಮಿಸುವ ಕಾಂಗ್ರೆಸ್ ಸರ್ಕಾರದ ಪ್ರಸ್ತಾವನೆಯು ನಮ್ಮ ನಗರದ ಹಸಿರಿಗೆ ಧಕ್ಕೆ ತರಲಿದೆ. ಬೆಂಗಳೂರಿನ ಅಚ್ಚುಮೆಚ್ಚಿನ ಜಾಗವನ್ನು ರಕ್ಷಿಸಬೇಕಾಗಿದೆ. ಕಾಂಕ್ರೀಟ್ ದೈತ್ಯಾಕಾರದಿಂದ ಉಸಿರುಗಟ್ಟಿಸಬಾರದು. ಪ್ರತಿಯೊಬ್ಬ ಬೆಂಗಳೂರಿಗರು ಈ ಹಸಿರು ನರಮೇಧವನ್ನು ತೀವ್ರವಾಗಿ ವಿರೋಧಿಸಬೇಕು ಮತ್ತು ನಿಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ.

Scroll to load tweet…

'ಆಹಾರದಲ್ಲಿ ಹುಳ, ಕೊಳಕು ತಲೆದಿಂಬು..ಇನ್ನೆಂದೂ ಭಾರತಕ್ಕೆ ಭೇಟಿ ನೀಡೋದಿಲ್ಲ' ಎಂದ ಸೆರ್ಬಿಯಾ ಟೆನಿಸ್‌ ತಾರೆ!

ಕಬ್ಬನ್ ಪಾರ್ಕ್ ನಿರ್ವಹಣೆ ಮಾಡುತ್ತಿರುವ ತೋಟಗಾರಿಕಾ ಇಲಾಖೆ ಈ ಬಗ್ಗೆ ಸಭೆ ನಡೆಸುತ್ತಿದ್ದು, ಕೆಲವೇ ವಾರಗಳಲ್ಲಿ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ. 1975 ರಲ್ಲಿ ಕರ್ನಾಟಕ ಸರ್ಕಾರವು ಕರ್ನಾಟಕ ಸರ್ಕಾರಿ ಉದ್ಯಾನವನ ಕಾಯ್ದೆಯನ್ನು ರಚಿಸಿತು ಮತ್ತು ಅದರ ನಂತರ ಕಬ್ಬನ್ ಪಾರ್ಕ್‌ನಲ್ಲಿ ಯಾವುದೇ ನಿರ್ಮಾಣ ನಡೆದಿಲ್ಲ. ಹಾಗಿದ್ದರೂ, 2019 ರಲ್ಲಿ ಹೈಕೋರ್ಟ್ ಹಳೆಯ ಚುನಾವಣಾ ಆಯೋಗದ ಕಟ್ಟಡದ ಸ್ಥಳದಲ್ಲಿ ನಿರ್ಮಾಣಕ್ಕೆ ಅನುಮತಿ ನೀಡಿತ್ತು, ಆದರೆ ಸುತ್ತಮುತ್ತಲಿನ ಯಾವುದೇ ಮರಗಳನ್ನು ಕಡಿಯದೆ ನಿರ್ಮಾಣ ಮಾಡಬೇಕು ಎಂದು ಹೇಳಿತ್ತು.

ಶಾಲೆ ಆಯ್ತು, ಈಗ ಮ್ಯುಸಿಯಂಗೂ ಹುಸಿ ಬಾಂಬ್‌ ಬೆದರಿಕೆ ಇ-ಮೇಲ್‌!

ಕಬ್ಬನ್‌ ಪಾರ್ಕ್‌ ನಡಿಗೆದಾರರ ಸಂಘದಿಂದ ಪ್ರತಿಭಟನೆ: ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ಉದ್ಯಾನವನದ ಆವರಣದಲ್ಲಿ ಹೈಕೋರ್ಟ್‌ ಸೂಚನೆಯ ಅನುಗುಣವಾಗಿ 10 ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಮಂಜೂರು ಮಾಡಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಿದೆ. ಉದ್ದೇಶಿತ ಕಟ್ಟಡವು ಉದ್ಯಾನವನದ ಪ್ರದೇಶವನ್ನು ಅತಿಕ್ರಮಿಸುವುದರ ಜೊತೆಗೆ ಮಾನವ ಮತ್ತು ವಾಹನ ದಟ್ಟಣೆಯ ಹೆಚ್ಚಳಕ್ಕೆ ಕಾರಣವಾಗುತ್ತದೆ. ಸರಕಾರ ಕೂಡಲೇ ಆದೇಶವನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸುತ್ತೇವೆ ಎಂದು ಹೇಳಿದೆ. ಭಾನುವಾರ ಬೆಳಗ್ಗೆ 11 ಗಂಟೆಗೆ ಕಬ್ಬನ್‌ ಪಾರ್ಕ್‌ನ ಕೇಂದ್ರ ಗ್ರಂಥಾಲಯದ ಬಳಿ ಪ್ರತಿಭಟನೆ ನಡೆಯಲಿದೆ ಎಂದು ವಕೀಲ ಹಾಗೂ ಸಿಪಿಡಬ್ಲ್ಯುಎ ಅಧ್ಯಕ್ಷ ಎಸ್‌.ಉಮೇಶ್‌ ಕುಮಾರ್‌ ಹೇಳಿದ್ದಾರೆ.