ಬೆಂಗಳೂರು :  ರಾಜ್ಯ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಸದ್ದಿಲ್ಲದೆ ರಣತಂತ್ರ ಹೆಣೆಯುತ್ತಿರುವ ಪ್ರತಿಪಕ್ಷ ಬಿಜೆಪಿಗೆ ತಿರುಗೇಟು ನೀಡಿ ಸುಗಮವಾಗಿ ಬಜೆಟ್ ಮಂಡಿಸಿ ಅಧಿವೇಶನ ನಡೆಸಲು ಸರ್ಕಾರವು ಪ್ರತಿತಂತ್ರ ರೂಪಿಸಲು ಸಜ್ಜಾಗಿದ್ದು, ಗದ್ದಲ ಮಾಡುವ ಪ್ರತಿಪಕ್ಷ ಬಿಜೆಪಿಯ ಕೆಲವು ಸದಸ್ಯರ ವಿರುದ್ಧ ಸಸ್ಪೆಂಡ್ ಅಸ್ತ್ರ ಬಳಸಲು ಗಂಭೀರ ಚಿಂತನೆ ನಡೆಸಿದೆ. 

ಬಿಜೆಪಿ ಸದಸ್ಯರು ರಾಜ್ಯಪಾಲರ ಭಾಷಣದ ವೇಳೆ ಅಡ್ಡಿಪಡಿಸಿದ್ದು ಸರ್ಕಾರ ಹಾಗೂ ಸ್ಪೀಕರ್ ಆಕ್ರೋಶಕ್ಕೆ ಕಾರಣವಾ ಗಿದೆ. ಅಲ್ಲದೇ, ಅಧಿವೇಶನದ ಎರಡನೇ ದಿನವಾದ ಗುರುವಾರವು ಸಹ ಕಲಾಪ ನಡೆಯಲು ತೀವ್ರ ಅಡ್ಡಿ ಉಂಟು ಮಾಡಿ ದರು. ಶುಕ್ರವಾರ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಬಜೆಟ್ ಮಂಡಿಸುವ ವೇಳೆ ಯಲ್ಲಿಯೂ ಬಿಜೆಪಿ ಸದಸ್ಯರು ಅಡ್ಡಿಪಡಿಸುವ ಸಾಧ್ಯತೆ ಇದೆ. ಹಾಗಂತ ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಮಾತಿನಲ್ಲೇ ವ್ಯಕ್ತವಾಗಿದೆ. 

ಒಂದು ವೇಳೆ ಗದ್ದಲ, ಧರಣಿ ಮುಂದುವರೆಸಿದರೆ ಸಭಾಧ್ಯಕ್ಷರು ತಮ್ಮ ಅಧಿಕಾರ ಬಳಸಿ ಬಿಜೆಪಿ ಸದಸ್ಯರನ್ನು ಅಮಾನತುಗೊಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಅಶಿಸ್ತು ಪ್ರದರ್ಶಿಸುವ ಬಿಜೆಪಿಯ ಸದಸ್ಯರನ್ನು ಅಧಿವೇಶನದ ಅವಧಿ ಮುಗಿಯುವವರೆಗೆ ಅಮಾನತು ಮಾಡಬಹುದಾಗಿದೆ. ಈ ಮೂಲಕ ಬಿಜೆಪಿಯ ಕಾರ್ಯತಂತ್ರಕ್ಕೆ ಸರ್ಕಾರಕ್ಕೆ ತಿರುಗೇಟು ನೀಡುವ ಚಿಂತನೆ ನಡೆಸಿದೆ. 

ಇದರಿಂದ ಬಿಜೆಪಿಯ ಸಂಖ್ಯಾಬಲವನ್ನು ತಗ್ಗಿಸಿದಂತಾಗುತ್ತದೆ. ಜೊತೆಗೆ ಬಜೆಟ್ ಅನುಮೋದನೆ ಪಡೆ ಯಲು ಹಾದಿ ಸುಗಮವಾಗುತ್ತದೆ ಎಂಬ ಲೆಕ್ಕಾಚಾರವೂ ಇದೆ ಎನ್ನಲಾಗಿದೆ. ಇದೇ ವೇಳೆ ಕಳೆದ 2 ದಿನಗಳಿಂದಲೂ ಪ್ರತಿಭಟನೆ ನಡೆಸಿರುವ ಬಿಜೆಪಿ ಸದಸ್ಯರು ಶುಕ್ರವಾರ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಬಜೆಟ್ ಮಂಡಿಸುವ ವೇಳೆಯೂ ಪ್ರತಿಭಟನೆ ನಡೆಸುವ ಮೂಲಕ ವಿರೋಧ ವ್ಯಕ್ತಪಡಿಸುವ ನಿಲವಿಗೆ ಬಂದಿದ್ದಾರೆ. 

ಬಹುಮತ ಇಲ್ಲದ ಸರ್ಕಾರಕ್ಕೆ ಬಜೆಟ್ ಮಂಡಿಸುವ ಅಧಿಕಾರ ಇಲ್ಲ ಎಂಬುದು ಬಿಜೆಪಿ ನಾಯಕರ ವಾದವಾಗಿದೆ. ಬಜೆಟ್‌ಗೆ ಅಡ್ಡಿ- ಬಿಜೆಪಿ ಸುಳಿವು: ಈ ನಡುವೆ, ಸಮ್ಮಿಶ್ರ ಸರ್ಕಾರಕ್ಕೆ ಬಹುಮತ ಇಲ್ಲ ಎಂಬ ಕಾರಣಕ್ಕೆ ಕಲಾಪ ನಡೆಸಲು ಸಹಕಾರ ಕೊಡಲಿಲ್ಲ. ಬಹುಮತ ಇಲ್ಲದಿದ್ದರೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಗೆ ಬಜೆಟ್ ಮಂಡಿಸುತ್ತಾರೆ ಎಂದು ಬಿಜೆಪಿ ರಾಜ್ಯಾ ಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರಶ್ನಿಸಿದ್ದಾರೆ.

ಈ ಮೂಲಕ ಶುಕ್ರವಾರದ ಬಜೆಟ್ ಮಂಡನೆ ವೇಳೆಯೂ ಅಡ್ಡಿಪಡಿಸುವುದಾಗಿ ಪರೋಕ್ಷವಾಗಿ ಎಚ್ಚರಿಸಿದ್ದಾರೆ. ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ಭಾಷಣ ಹಾಗೂ ಗುರುವಾರದ ಕಲಾಪಕ್ಕೆ ಪ್ರತಿಪಕ್ಷದ ಸದಸ್ಯರಾಗಿ ನಾವು ಅಡ್ಡಿಪಡಿಸಲು ಸರ್ಕಾರಕ್ಕೆ ಬಹುಮತ ಇಲ್ಲ ಎಂಬುದೇ ಕಾರಣ. 

ಹೀಗಾಗಿಯೇ ಸಹಕಾರ ನೀಡಲಿಲ್ಲ. ಕಾಂಗ್ರೆಸ್ ಶಾಸಕರೆಲ್ಲರೂ ಕುಮಾರಸ್ವಾಮಿ ಮುಖ್ಯಮಂತ್ರಿ ಅಲ್ಲ, ತಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬುದಾಗಿ ಹೇಳುತ್ತಿದ್ದಾರೆ. ಶಾಸಕರಿಗೆ ಮುಖ್ಯಮಂತ್ರಿಗಳ ಮೇಲೆ ವಿಶ್ವಾಸವಿಲ್ಲ. ಹೀಗಿದ್ದರೂ ಬಜೆಟ್ ಹೇಗೆ ಮಂಡಿಸುತ್ತಾರೆ ಎಂದು ಪ್ರಶ್ನಿಸಿದರು.